ADVERTISEMENT

ವಚನಕಾರರ ಸಾಮಾಜಿಕ ಕೊಡುಗೆ ಸ್ಮರಣೀಯ

ದಲಿತ ವಚನಕಾರರ ಜಯಂತ್ಯುತ್ಸವದಲ್ಲಿ ರಾಜ್ಯ ಕುಕ್ಕುಟ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ರುದ್ರಮುನಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 5:20 IST
Last Updated 11 ಮಾರ್ಚ್ 2017, 5:20 IST
ಚಿತ್ರದುರ್ಗ: ದಲಿತ ವಚನಕಾರರು ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ಅವರೆಲ್ಲರ ಸಾಮಾಜಿಕ  ಕೊಡುಗೆ ಇಂದಿಗೂ ಅವಿಸ್ಮರಣೀಯ ಎಂದು ರಾಜ್ಯ ಕುಕ್ಕುಟ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ರುದ್ರಮುನಿ ತಿಳಿಸಿದರು. 
 
ಗುರುಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಉರಿಲಿಂಗಪೆದ್ದಿ ಸೇರಿದಂತೆ ದಲಿತ ವಚನಕಾರರ ಜಯಂತ್ಯುತ್ಸವ’ ಉದ್ಘಾಟಿಸಿ ಮಾತನಾಡಿದರು. 
 
12ನೇ ಶತಮಾನದ ಬಹುತೇಕ ಎಲ್ಲಾ ವಚನಕಾರರು ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿಯೂ ಶ್ರಮಿಸಿದ್ದಾರೆ. ಮೌಢ್ಯ, ಕಂದಾಚಾರದ ವಿರುದ್ಧ ಹೋರಾಡಿದ್ದಾರೆ. ಅಲ್ಲದೆ, ವಚನಗಳ ಮೂಲಕವೂ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಇಂತಹ ವಚನಕಾರರ ಆದರ್ಶ ಗುಣಗಳನ್ನು ಪ್ರಸ್ತುತ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು. 
 
ಸರ್ಕಾರವೂ ಸಾಹಿತಿಗಳಿಗೆ, ಕವಿಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ದಲಿತರು, ಶೋಷಿತರು ಸೇರಿದಂತೆ ಯಾರನ್ನೂ ಕಡೆಗಣನೆ ಮಾಡಬಾರದು ಎಂಬ ಕಾರಣಕ್ಕಾಗಿ ಕಳೆದೆರಡು ವರ್ಷಗಳಿಂದ ದಲಿತ ವಚನಕಾರರ ಜಯಂತ್ಯುತ್ಸವ  ಆಚರಿಸುತ್ತಾ ಬಂದಿದೆ ಎಂದರು. 
 
ಹಿರಿಯ ಸಾಹಿತಿ ಬಳ್ಳಾರಿಯ ಡಾ.ಅಪ್ಪಗೆರೆ ವೆಂಕಯ್ಯ ಮಾತನಾಡಿ,  12ನೇ ಶತಮಾನ ವಚನಕಾರರು ಮೆರೆ ದಂತಹ ಕಾಲವಷ್ಟೇ ಅಲ್ಲ. ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸುವ ಮೂಲಕ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ ಅವಿಸ್ಮರಣೀಯ ಚಳವಳಿಯ ಕಾಲ. ಅದರಲ್ಲಿ ದಲಿತ ವಚನಕಾರರು   ಪ್ರಮುಖ ಪಾತ್ರ ವಹಿಸಿದ್ದರು ಎಂಬು ದನ್ನು ಮರೆಯಬಾರದು ಎಂದರು. 
 
ಬುದ್ಧನ ನಂತರ ಸಾಮಾಜಿಕ ಪರಿವರ್ತನೆಗೆ ಕ್ರಾಂತಿಯಾಗಿದ್ದು ವಚನ ಸಾಹಿತ್ಯದ ಮೂಲಕ. ವಚನ ಕ್ರಾಂತಿ ಮೌಖಿಕವಾಗಿತ್ತು. ಇದರಿಂದ ದಲಿತ ವಚನಕಾರರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬಸವಣ್ಣ ಅವರು ಅವಿರತವಾಗಿ ಶ್ರಮಿಸಿದರು ಎಂದು ಹೇಳಿದರು. 
 
ಪ್ರಸ್ತುತ ದಿನಗಳಲ್ಲಿ ಚಿತ್ರದುರ್ಗದ ಮುರುಘಾಮಠ, ತರಳಬಾಳು ಮರುಳಸಿದ್ದರು, ನಿಡುಮಾಮಿಡಿ ಸ್ವಾಮೀಜಿ, ಸಾಣೇಹಳ್ಳಿ ಮಠಗಳ ಸೇವೆ ಸ್ಮರಣೀಯ. ಅಲ್ಲದೆ, ವಚನಕ್ರಾಂತಿಗೆ ಸಾಕಷ್ಟು ಕೊಡುಗೆ ನೀಡಿವೆ. ಆದ್ದರಿಂದ  ಚಿತ್ರದುರ್ಗ ಜಿಲ್ಲೆಯೂ ವೈಚಾರಿಕ ಕ್ರಾಂತಿಯ ನೆಲೆ ಬೀಡಾಗಿದೆ ಎಂದರು. 
 
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ವಚನಕಾರರು ಜಾತಿ, ಭೇದಭಾವ ಮರೆತು ಸರ್ವರೂ ಸಮಾನರು ಎಂಬುದನ್ನು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ. ಜತೆಗೆ ಸರಳತೆ ಅಳವಡಿಸಿಕೊಳ್ಳೋಣ ಎಂದರು. 
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ‘ನಮ್ಮ ಹೆಮ್ಮೆಯ ವಚನಕಾರರು’ ಎಂಬ ಮಡಿಕೆ ಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಉಪವಿಭಾಗಾಧಿಕಾರಿ ರಾಘವೇಂದ್ರ, ತಹಶೀಲ್ದಾರ್ ಮಲ್ಲಿಕಾರ್ಜುನ್, ಡಿಡಿಪಿಐ ರೇವಣಸಿದ್ದಪ್ಪ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.