ADVERTISEMENT

ವಿಜ್ಞಾನಿಗಳ ಜತೆ ರೈತರ ಸಂವಾದ

ಖಾತರಿ ಯೋಜನೆ: ಅನುಷ್ಠಾನ ರೈತರಿಗೇ ಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2017, 6:06 IST
Last Updated 25 ಮೇ 2017, 6:06 IST

ಹಿರಿಯೂರು: ‘ತಾಲ್ಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ರೈತರಿಗೆ ಪ್ರಯೋಜನಕಾರಿಯಾಗಿಲ್ಲ. ಆದ್ದರಿಂದ ಈ ಯೋಜನೆಯ ಅನು ಷ್ಠಾನದ ಹೊಣೆಯನ್ನು ನಮಗೇ ಬಿಡ ಬೇಕು’ ಎಂದು ರೈತರು ಒತ್ತಾಯಿಸಿದರು.

ನಗರದ ಕೃಷಿ ಇಲಾಖೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ರೈತರಿಂದ ಈ ಒತ್ತಾಯ ಕೇಳಿಬಂತು.
ಸಹಾಯಕ ಕೃಷಿ ನಿರ್ದೇಶಕ ಎಂ.ಅಸ್ಲಾಂ ಅವರು ಈ ಸಂವಾದ ಕಾರ್ಯಕ್ರಮ ನಡೆಸುತ್ತಿರುವ ಉದ್ದೇಶ ಹಾಗೂ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾಗ ರೈತರು ಮಧ್ಯೆಪ್ರವೇಶಿಸಿ ಮಾತನಾಡಿದರು.

‘ಚೆಕ್ ಡ್ಯಾಂ, ಬದು, ಕೋಡಿಗಳನ್ನು ನಮ್ಮ ಜಮೀನುಗಳಲ್ಲಿ ಎಲ್ಲಿ ನಿರ್ಮಿಸಿಕೊಂಡರೆ ಅನುಕೂಲ ವಾಗುತ್ತದೆ ಎಂಬ ಮಾಹಿತಿ ಅಧಿಕಾರಿಗಳಿಗಿಂತ ನಮಗೇ ಚೆನ್ನಾಗಿ ಗೊತ್ತು. ನಿಗದಿಯಾದ ಹಣ ಮಂಜೂರು ಮಾಡಿದಲ್ಲಿ ನಾವೇ ಕೆಲಸ ಮಾಡಿಕೊಳ್ಳುತ್ತೇವೆ. ಇದರಿಂದ ಸರ್ಕಾರದ ಹಣ ಪೋಲಾಗುವುದು ತಪ್ಪುತ್ತದೆ’ ಎಂದು ಕೆಲವು ರೈತರು ಸಲಹೆ ನೀಡಿದರು.

ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಡಾ.ಶಾಂತವೀರಯ್ಯ ಮಾತ ನಾಡಿ, ‘ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕೃಷಿ, ತೋಟಗಾರಿಕೆ ಜತೆಗೆ ಜೇನು ಕೃಷಿಗೆ ಮುಂದಾಗಬೇಕು. ಜೇನು ಸಾಕಣೆ ಮಾಡುವುದರಿಂದ ಪರಾಗಸ್ಪರ್ಶ ಸುಲಲಿತವಾಗಿ ನಡೆದು ಹೆಚ್ಚು ಇಳುವರಿ ಪಡೆಯಬಹುದು, ಜೇನುತುಪ್ಪ ಮಾರಾಟದಿಂದಲೂ ಹಣ ಸಿಗುತ್ತದೆ’ ಎಂದು ವಿವರಿಸಿದರು.

ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಓಂಕಾರಪ್ಪ ಮಾತನಾಡಿ, ‘ಪ್ರಕೃತಿಯಲ್ಲಿ ಆಗುವ ಬದಲಾವಣೆಗಳಿಗೆ ತಕ್ಕಂತೆ ನಾವು ಬೆಳೆ ಬೆಳೆಯಬೇಕು. ಆರೋಗ್ಯದ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಜನಸಾಮಾನ್ಯರಿಗೂ ಸಿರಿಧಾನ್ಯಗಳ ಮಹತ್ವದ ಬಗ್ಗೆ ಅರಿವು ಮೂಡಿದೆ. ಹೆಚ್ಚು ನೀರು ಬೇಡದ ಇಂತಹ ಬೆಳೆಗಳನ್ನು ಬೆಳೆಯುವುದಕ್ಕೆ ರೈತರು ಮುಂದಾಗಬೇಕು’ ಎಂದು ತಿಳಿಸಿದರು.

ಪರಮೇನಹಳ್ಳಿ ಗ್ರಾಮದ ರೈತ ಪಿ.ಎಂ. ತಿಮ್ಮಯ್ಯ ಮಾತನಾಡಿದರು. ಪಶು ಇಲಾಖೆ ಮುಖ್ಯಸ್ಥ ಡಾ.ರಮೇಶ್ ಅವರು ಇಲಾಖೆಯ ಸೌಲಭ್ಯಗಳ ಬಗ್ಗೆ, ಕೃಷಿ ವಿಜ್ಞಾನಿ ಡಾ.ಧನಲಕ್ಷ್ಮೀ ಅವರ ಹರಳು ಬೆಳೆ ಬೆಳೆಯುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ. ಹೊರಕೇರಪ್ಪ ಮಾತನಾಡಿ, ‘ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತದಿಂದ ಶೇ 60 ರಿಂದ 70 ರಷ್ಟು ತೋಟಗಾರಿಕಾ ಬೆಳೆಗಳು ನಾಶವಾಗಿವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಅಂದಾಜು ತಯಾರಿಸಿ ಸರ್ಕಾರಕ್ಕೆ ವರದಿ ನೀಡಬೇಕು’ ಎಂದು ಮನವಿ ಮಾಡಿದರು. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ  ಎಚ್.ಆರ್.ತಿಮ್ಮಯ್ಯ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.