ADVERTISEMENT

ವಿದ್ಯುತ್ ಸಂಪರ್ಕ ಕಡಿತ: ಕತ್ತಲಲ್ಲಿ ಖಾಸಗಿ ಬಸ್‌ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:48 IST
Last Updated 15 ಸೆಪ್ಟೆಂಬರ್ 2017, 9:48 IST

ಚಿತ್ರದುರ್ಗ: ಗುತ್ತಿಗೆದಾರರು ವಿದ್ಯುತ್ ಬಿಲ್ ಬಾಕಿ ಪಾವತಿಸದ ಪರಿಣಾಮ ಐದು ತಿಂಗಳಿಂದ (ಮೇಯಿಂದ ಸೆಪ್ಟೆಂಬರ್‌ವರೆಗೆ) ಖಾಸಗಿ ಬಸ್‌ನಿಲ್ದಾಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಖಾಸಗಿ ಬಸ್‌ನಿಲ್ದಾಣದ ಹರಾಜು ಪಡೆದ ಗುತ್ತಿಗೆದಾರರೇ ಪ್ರತಿ ತಿಂಗಳು ನಿಲ್ದಾಣದ ವಿದ್ಯುತ್ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು ಎಂಬ ನಿಯಮವಿದೆ. ಆದರೆ, ಪ್ರತಿ ನಿತ್ಯ ಬಸ್‌ನವರಿಂದ ಸುಂಕ ವಸೂಲಿ ಮಾಡುತ್ತಿರುವ ಗುತ್ತಿಗೆದಾರರು ವಿದ್ಯುತ್ ಬಿಲ್‌ ಮಾತ್ರ ಪಾವತಿಸಿಲ್ಲ. ಹೀಗಾಗಿ ₹ 7,819 ಬಿಲ್ ಹಣ ಬಾಕಿ ಉಳಿದಿದೆ.

‘ವಿದ್ಯುತ್ ಕಡಿತಗೊಂಡಿರುವುದರಿಂದ ಬಸ್ ನಿಲ್ದಾಣದಲ್ಲಿ ಕತ್ತಲು ಆವರಿಸುತ್ತಿದೆ. ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಪೊಲೀಸ್ ಔಟ್‌ಪೋಸ್ಟ್‌ ಇದ್ದರೂ, ಕರೆಂಟ್ ಇಲ್ಲದಿರುವುದರಿಂದ, ಪೊಲೀಸ್ ಕಾನ್‌ಸ್ಟೆಬಲ್‌ಗಳು ಬರುತ್ತಿಲ್ಲ’ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಜಿ.ಬಿ.ಶೇಖರ್ ‘ಪ್ರಜಾವಾಣಿ’ಗೆ ಸಮಸ್ಯೆಗಳ ವಿವರಣೆ ನೀಡಿದರು.

ADVERTISEMENT

ಪ್ರತಿ ನಿತ್ಯ ಅಂದಾಜು 250 ಬಸ್ಸುಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ. ಬೆಳಿಗ್ಗೆ 4.30ಯಿಂದ ಆರಂಭವಾದರೆ ರಾತ್ರಿ 10ರವರೆಗೂ ಬಸ್‌ ಸಂಚಾರವಿರುತ್ತದೆ. ನಿತ್ಯ 7ರಿಂದ 8 ಸಾವಿರ ಪ್ರಯಾಣಿಕರು ಓಡಾಡುತ್ತಾರೆ. ನಿಲ್ದಾಣದಲ್ಲಿ ರಾತ್ರಿ ಬಂದಿಳಿಯುವ ಪ್ರಯಾಣಿಕರು ಹೊರ ಹೋಗಲು ದಾರಿ ಗೊತ್ತಾಗದೇ ಪರದಾಡುತ್ತಾರೆ.

‘ಪ್ರತಿ ಬಸ್‌ನಿಂದ ನಿತ್ಯ ₹ 5 ಶುಲ್ಕ ಸಂಗ್ರಹ ಮಾಡುತ್ತಾರೆ. ಅದನ್ನು ಯಾರು ಸಂಗ್ರಹ ಮಾಡುತ್ತಿದ್ದಾರೆ. ಯಾರಿಗೆ ಗುತ್ತಿಗೆ ನೀಡಿದ್ದಾರೆ ಎಂಬುದು ಇವತ್ತಿಗೂ ತಿಳಿದಿಲ್ಲ. ಈ ಬಗ್ಗೆ ನಗರಸಭೆಯನ್ನು ಕೇಳಿದರೆ, ‘ನೀವು ಗುತ್ತಿಗೆದಾರರನ್ನು ಕೇಳಿ’ ಎನ್ನುತ್ತಾರೆ. ಹೀಗಾಗಿ ಸಮಸ್ಯೆ  ಮುಂದಕ್ಕೆ ಹೋಗುತ್ತಿದೆ, ವಿನಾ ಪರಿಹಾರವಾಗುತ್ತಿಲ್ಲ’ ಎಂದು ಶೇಖರ್ ಬೇಸರ ವ್ಯಕ್ತಪಡಿಸುತ್ತಾರೆ.

ಮಳೆ ಬಂದಾಗ ನಿಲ್ದಾಣದ ಚಾವಣಿ ಸೋರುತ್ತದೆ. ರಾತ್ರಿ ವೇಳೆ ಜೇಬುಗಳ್ಳರ ಸಂಖ್ಯೆ ಹೆಚ್ಚಾಗಿದೆ. ನಿಲ್ದಾಣಕ್ಕೆ ಹೊಂದಿಕೊಂಡಂತೆ ನಗರಸಭೆಯಿಂದ ಒಂದೂವರೆ ವರ್ಷದ ಹಿಂದೆ 12 ಮಳಿಗೆಗಳನ್ನು ನಿರ್ಮಿಸಿದ್ದಾರೆ. ಆದರೆ ಉದ್ಘಾಟನೆಯಾಗಿಲ್ಲ. ನಿಲ್ದಾಣ ಸಮಸ್ಯೆಗಳ ಗೂಡಾಗಿದೆ’ ಎಂದು ಹಾಸ್ಯ ಸಾಹಿತಿ ಹಾಗೂ ಖಾಸಗಿ ಬಸ್ ಏಜೆಂಟ್ ಜಗನ್ನಾಥ್ ವಿವರಿಸುತ್ತಾರೆ.

‘ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಇತ್ತೀಚೆಗೆ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ಅಧಿಕಾರಿಗಳು, ಭೇಟಿ ನೀಡಿ ಬಿಸಿಮುಟ್ಟಿಸಿದ ಮೇಲೆ ಸ್ವಲ್ಪ ಶೌಚಾಲಯ ವ್ಯವಸ್ಥೆ ಸುಧಾರಿಸಿದೆ. ಆದರೆ, ಹೊಸದಾಗಿ ಅಳವಡಿಸಿರುವ ‘ಇ–ಟಾಯ್ಲೆಟ್’ ಮಾತ್ರ ಬಳಕೆಯೇ ಆಗಿಲ್ಲ. ಇಡೀ ಖಾಸಗಿ ಬಸ್ ನಿಲ್ದಾಣ ನಿರ್ವಹಣೆಯ ಕೊರತೆಯಿಂದ ಅಧ್ವಾನವಾಗಿದೆ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.