ADVERTISEMENT

ವಿಮಾ ಯೋಜನೆ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹೊಸದುರ್ಗ: ಅವಧಿಯೊಳಗೆ ವಿಮೆ ಕಂತು ಪಾವತಿಸಲು ಬೆಳೆಗಾರರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 5:15 IST
Last Updated 24 ಜೂನ್ 2017, 5:15 IST

ಹೊಸದುರ್ಗ: ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಹಾಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸೌಲಭ್ಯಕ್ಕೆ ತಾಲ್ಲೂಕು ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಿದೆ.

2017–18ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಮಾವು ಮತ್ತು ದಾಳಿಂಬೆ ಬೆಳೆಗಳಿಗೆ ಅನುಷ್ಠಾನಗೊಳಿಸಲಾಗಿದೆ. ಹವಾಮಾನ ಅಂಶಗಳಾದ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆರ್ದ್ರತೆ ಮಾಹಿತಿಯನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮಾ ನಷ್ಟವನ್ನು ತೀರ್ಮಾನಿಸಲಾಗುವುದು.

ವಿಮೆ ಸೌಲಭ್ಯ ವಿವರ: ಪ್ರತಿ ಹೆಕ್ಟೇರ್‌ ಮಾವು ಬೆಳೆಗೆ ಬೆಳೆಗಾರರು ತಮ್ಮ ಬ್ಯಾಂಕ್‌ಗೆ ₹ 3,691ನ್ನು ವಿಮೆ ಕಂತನ್ನು ಪಾವತಿಸಿದಲ್ಲಿ ₹ 73,820 ಹಾಗೂ ದಾಳಿಂಬೆಗೆ ₹ 6,323 ವಿಮೆ ಕಂತು ಪಾವತಿಸಿದಲ್ಲಿ ₹ 1,26,471 ವಿಮೆ ಸೌಲಭ್ಯ ಪಡೆಯಬಹುದು. ಈ ಯೋಜನೆಯಡಿ ವಿಮೆ ಕಂತು ಪಾವತಿಸಲು ಜೂನ್‌ 30 ಕೊನೆಯ ದಿನವಾಗಿರುತ್ತದೆ.

ADVERTISEMENT

ಫಸಲ್‌ ಬಿಮಾ ಯೋಜನೆ: ಪ್ರಧಾನಮಂತ್ರಿ ರೈತ ಸುರಕ್ಷಾ ಬಿಮಾ ಯೋಜನೆಯನ್ನು ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಾಗಿ ಘೋಷಿಸಲಾಗಿದೆ. ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಈರುಳ್ಳಿ ಬೆಳೆಯುವ ರೈತರು ಮಾತ್ರ ಈ ಯೋಜನೆಯಡಿ ವಿಮಾ ಸೌಲಭ್ಯ ಪಡೆಯಲು ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್‌ ಪಾಸ್‌ಬುಕ್‌, ಆಧಾರ್‌ ಸಂಖ್ಯೆ ಹಾಗೂ ಸ್ವಯಂ ಘೋಷಿತ ಬೆಳೆ ವಿವರಗಳನ್ನು ಹತ್ತಿರದ ಬ್ಯಾಂಕ್‌ಗೆ ಸಲ್ಲಿಸಬೇಕು.  ಸಾಲ ಪಡೆದಿರುವ ರೈತರು ಸೌಲಭ್ಯ ಪಡೆಯಬಹುದು. ಪ್ರತಿ ಹೆಕ್ಟೇರ್‌ ಈರುಳ್ಳಿ ಬೆಳೆಗೆ ₹ 3,700 ಮೊತ್ತವನ್ನು ಜುಲೈ 7ರ ಒಳಗೆ ಬ್ಯಾಂಕ್‌ಗೆ ಪಾವತಿಸಬೇಕು.

ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬಿರುಗಾಳಿ ಮತ್ತು ಬೆಳೆ ಮುಳುಗಡೆಯಿಂದ ಉಂಟಾದ ಬೆಳೆನಷ್ಠ ನಿರ್ಧರಿಸಿ ಬೆಳೆ ವಿಮಾ ನಷ್ಠ ನೀಡಲಾಗುವುದು.

ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಅಥವಾ ವಿಮಾ ಸಂಸ್ಥೆಗೆ ಬೆಳೆ ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48 ಗಂಟೆಯೊಳಗೆ ತಿಳಿಸಬೇಕು. ಹಾನಿಯಾದ ಪ್ರತಿ ಹೆಕ್ಟೇರ್‌ ಈರುಳ್ಳಿ ಬೆಳೆಗೆ ಈ ಯೋಜನೆಯಡಿ ₹ 74,000 ವಿಮೆ ಸೌಲಭ್ಯ(ಬೆಳೆ ಪರಿಹಾರ) ನೀಡಲಾಗುವುದು.

ಬೆಳೆ ವಿಮೆಗೆ ಸಂಬಂಧಿಸಿದ ಅರ್ಜಿ ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಪಟ್ಟಣದ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ ಹಾಗೂ
ಹತ್ತಿರದ ಬ್ಯಾಂಕ್‌ ಅಧಿಕಾರಿಗಳನ್ನು ಸಂಪರ್ಕಿಸಲು ತಾಲ್ಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎನ್‌್.ಪ್ರಸನ್ನ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.