ADVERTISEMENT

ವೈಕುಂಠ ಏಕಾದಶಿ ಅದ್ಧೂರಿ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 5:16 IST
Last Updated 9 ಜನವರಿ 2017, 5:16 IST

ಹೊಸದುರ್ಗ: ‘ಮುಂದಿನ ವರ್ಷ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಇನ್ನಷ್ಟು ಅದ್ಧೂರಿಯಾಗಿ ಆಚರಿಸೋಣ’ ಎಂದು ಹೊಸದುರ್ಗದ ಕುಂಚಿಟಿಗರ ಶಾಂತವೀರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸಣ್ಣಕ್ಕಿಬಾಗೂರಿನ ಚೋಳರ ಕಾಲದ ಚನ್ನಕೇಶವಸ್ವಾಮಿ ದೇಗುಲದಲ್ಲಿ ಭಾನುವಾರ  ಭೂವೈಕುಂಠ ಸೇವಾ ದರ್ಶನ ಪಡೆದ ನಂತರ ಅವರು ಮಾತನಾಡಿದರು.

‘ಭೂವೈಕುಂಠ ಸೇವಾ ದರ್ಶನಕ್ಕಾಗಿ ತಾಲ್ಲೂಕಿನ ಭಕ್ತರು ಬೆಂಗಳೂರು, ತಿರುಪತಿ ಸೇರಿದಂತೆ ಇನ್ನಿತರ ಕಡೆಗೆ ತೆರಳುತ್ತಿದ್ದರು. ಆದರೆ, ಈ ಬಾರಿ ಸ್ಥಳೀಯ ಇತಿಹಾಸ ಪ್ರಸಿದ್ಧ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಪೂಜಾ ಕಾರ್ಯಕ್ರಮ ದಿಂದ ಸಾವಿರಾರು ಭಕ್ತರಿಗೆ ಪ್ರಯೋಜನವಾಗಿದೆ. ಮುಂದಿನ ವರ್ಷ ಇನ್ನಷ್ಟು ವೈಭಯುತವಾಗಿ  ಆಚರಿಸಲು ಭಕ್ತರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ‘ಆಧ್ಯಾತ್ಮಿಕ ಸ್ಮರಣೆಗೆ ವೈಕುಂಠ ಏಕಾದಶಿ ಧಾರ್ಮಿಕ ಕಾರ್ಯ ಕ್ರಮ ಪೂರಕವಾಗಿದೆ. ಧನುರ್ಮಾಸದಲ್ಲಿ ಬರುವ ಶುಕ್ಲಪಕ್ಷದ ವೈಕುಂಠ ಏಕಾದಶಿ ದಿನದಂದು ಭಕ್ತರು ಉಪವಾಸವಿದ್ದು ಮಹಾ ವಿಷ್ಣುವನ್ನು ವಿಶೇಷವಾಗಿ ಆರಾಧಿಸುತ್ತಾರೆ. ಇಂತಹ ವಿಶಿಷ್ಟ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಕಾಯಾ, ವಾಚಾ, ಮನಸ್ಸಾ ಪರಿಶುದ್ಧ ಮನಸ್ಸಿನಿಂದ ಪೂಜೆ ಸಲ್ಲಿಸಿದರೆ ಫಲ ಸಿಗುತ್ತದೆ’ ಎಂದು ಸಲಹೆ ನೀಡಿದರು.

ಪೂಜಾ ಕಾರ್ಯಕ್ರಮ: ಮುಂಜಾನೆ 5ರಿಂದ  ದೇಗುಲದಲ್ಲಿ ಗಂಗಾಪೂಜೆ, ಸುಪ್ರಭಾತ ಸೇವೆ, ಮಹಾಭಿಷೇಕ, ತೋಮಾಲ ಸೇವೆ, ಅಲಂಕಾರ, ವಿಷ್ಣು ಸಹಸ್ರನಾಮ ಹಾಗೂ ವೇದ ಪಾರಾಯಣ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಹನ್ನೊಂದು ದ್ವಾರ: ಭೂವೈಕುಂಠ ಸೇವಾ ದರ್ಶನಕ್ಕಾಗಿ ಒಟ್ಟು ಹನ್ನೊಂದು ವೈಕುಂಠದ್ವಾರ ನಿರ್ಮಿಸಲಾಗಿತ್ತು. ಭಕ್ತರು ಈ ಎಲ್ಲಾ ದ್ವಾರಗಳ ಮೂಲಕ ಸಾಗಿ, ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಿದ್ದ ಅಲಂಕೃತ ಚನ್ನಕೇಶವ ಸ್ವಾಮಿ ಉತ್ಸವ ಮೂರ್ತಿಯ ಕೆಳಭಾಗ ದಿಂದ ಪ್ರವೇಶಿಸಿ ದರ್ಶನ ಮಾಡಿದರು. ಬಳಿಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ದೇಗುಲದ ಅಲಂಕಾರ: ದೇಗುಲವನ್ನು ವಿದ್ಯುತ್‌ ದೀಪ ಹಾಗೂ ಬಣ್ಣ ಬಣ್ಣದ ಹೂ ಮಾಲೆಗಳಿಂದ ಅಲಂಕಾರ ಗೊಳಿಸಲಾಗಿತ್ತು. ಇಲ್ಲಿನ ಪರಪ್ಪಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತರು ದೇವಸ್ಥಾನದ ಸುತ್ತಮುತ್ತಲ ಆವರಣವನ್ನು ಶುಚಿ ಗೊಳಿಸಿದ್ದರು. ಲಾಡು ಹಾಗೂ ರವೆ ಪೊಂಗಲ್‌ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.

80 ಹಳ್ಳಿಗೆ ಪ್ರಚಾರ: ವೈಕುಂಠ ಏಕಾದಶಿ ಕಾರ್ಯಕ್ರಮ ನಡೆಯುವ ಬಗ್ಗೆ ಬಾಗೂರು ಸುತ್ತಮುತ್ತಲಿನ ಶ್ರೀರಂಗ ಪುರ, ಹಳೇಕುಂದೂರು, ಆನಿವಾಳ, ನೀರಗುಂದ, ಐಲಾಪುರ, ಮಂಟೇನ ಹಳ್ಳಿ, ಹೇರೂರು, ಮಧುರೆ, ಹೊನ್ನೇ ಕೆರೆ, ನಾಗೇನಹಳ್ಳಿ, ಲಕ್ಕೇನಹಳ್ಳಿ ಸೇರಿದಂತೆ 80 ಹಳ್ಳಿಗಳಲ್ಲಿ ದೇವಸ್ಥಾನ ಸಮಿತಿ ಪ್ರಚಾರ ನಡೆಸಿತ್ತು.  ಈ ಗ್ರಾಮಗಳ ಐದು ಸಾವಿರಕ್ಕೂ ಅಧಿಕ ಭಕ್ತರು ಬಂದು ಭೂವೈಕುಂಠ ಸೇವಾ ದರ್ಶನ ಪಡೆದರು. 

ಲೋಕಕಲ್ಯಾಣಾರ್ಥ ಆಚರಣೆ: ಇದೇ ಪ್ರಥಮ ಬಾರಿಗೆ ಮಹಿಮಾ ಮೂರ್ತಿಯಾದ ಚನ್ನಕೇಶವಸ್ವಾಮಿ ದೇಗುಲದಲ್ಲಿ ಲೋಕಕಲ್ಯಾಣಕ್ಕಾಗಿ ಈ ವಿಶಿಷ್ಟ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೈಕುಂಠದ್ವಾರ ಪ್ರವೇಶಕ್ಕೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಯಿತು. ಪೂಜಾ ಕಾರ್ಯದಲ್ಲಿ ಪಾಲ್ಗೊಂಡ ಭಕ್ತರಿಗೆ ಉಪ್ಪಿಟ್ಟು, ಕೇಸರಿ ಬಾತ್‌ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.