ADVERTISEMENT

ವೈಭವದ ಬಸವೇಶ್ವರ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 9:54 IST
Last Updated 13 ಡಿಸೆಂಬರ್ 2017, 9:54 IST

ಮೊಳಕಾಲ್ಮುರು: ತಾಲ್ಲೂಕಿನ ದೊಡ್ಡ ಕಾರ್ತಿಕ ರಥೋತ್ಸವಗಳಲ್ಲಿ ಒಂದಾದ ಬಿ.ಜಿ.ಕೆರೆ ಗ್ರಾಮದ ಬಸವೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಸಿಕೊಂಡು ಬರುತ್ತಿರುವ ರಥೋತ್ಸವ ಅಂಗವಾಗಿ ಡಿ.7ರಿಂದ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿದಿನವೂ ಅನೇಕ ಪೂಜೆಗಳನ್ನು ನಡೆಸಲಾಯಿತು.

ಸೋಮವಾರ ಸಂಜೆ ದೀಪೋತ್ಸವ, ರಥ ಅಲಂಕಾರ ನಡೆಯಿತು. ಮಂಗಳವಾರ ಬೆಳಿಗ್ಗೆ ಚಳ್ಳಕೆರೆ ತಾಲ್ಲೂಕು ಮಾಲೇನಹಳ್ಳಿ ಗ್ರಾಮದಿಂದ ತರಲಾದ ಮೀಸಲು ಸ್ವೀಕರಿಸಿದ ನಂತರ ರಥಕ್ಕೆ ಬಲಿ ಅನ್ನ ಸಮರ್ಪಣೆ ಮಾಡಲಾಯಿತು. ನಂತರ ಮುಕ್ತಿಧ್ವಜ ಹರಾಜು, ಹೂವಿನ ಹಾರಗಳ ಹರಾಜು ಮಾಡಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ADVERTISEMENT

ರಥ ಸಾಗುವಾಗ ದಾರಿಯುದ್ದಕ್ಕೂ ಹರಕೆ ಹೊತ್ತ ಅಪಾರ ಭಕ್ತರು ರಥದ ಮುಂಭಾಗದಲ್ಲಿ ಉರುಳುಸೇವೆ ಸಲ್ಲಿಸಿ ಹರಕೆ ತೀರಿಸಿದರು. ರಥ ಪಾದಗಟ್ಟೆವರೆಗೆ ಸಾಗಿ ಬಸವೇಶ್ವರ ಸ್ವಾಮಿ ದೇವಸ್ಥಾನ ಆವರಣಕ್ಕೆ ವಾಪಸ್‌ ಆಯಿತು.

ಕರಡಿ ಮಜಲು, ನಂದಿಕೋಲು ಕುಣಿತ, ಡೊಳ್ಳು ಕುಣಿತ, ವಿವಿಧ ವೇಷಧಾರಿಗಳು, ವೀರಗಾಸೆ, ಕೀಲುಕುದರೆ, ಕೋಲಾಟ ಗಮನ ಸೆಳೆದವು. ಬಿ.ಜಿ.ಕೆರೆ, ರಾವಲಕುಂಟೆ, ಮುತ್ತಿಗಾರಹಳ್ಳಿ, ಸೂರಮ್ಮನಹಳ್ಳಿ, ಮ್ಯಾಸರಹಟ್ಟಿ ಗ್ರಾಮಗಳ ಭಕ್ತರು ಬೃಹತ್‌ ಹೂವಿನ ಹಾರಗಳನ್ನು ಮೆರವಣಿಗೆಯಲ್ಲಿ ತಂದು ರಥಕ್ಕೆ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಬುಧವಾರ ಓಕುಳಿ ನಂತರ ಸಂಜೆ ಸ್ವಾಮಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.