ADVERTISEMENT

ವ್ಯಸನ ಬಿಟ್ಟರೆ ಬದುಕು ಸುಂದರ

ಮಾದಕ ವಸ್ತು ವಿರೋಧಿ ದಿನಾಚರಣೆಯಲ್ಲಿ ವೈದ್ಯಾಧಿಕಾರಿ ಓಬಣ್ಣ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 7:43 IST
Last Updated 29 ಜೂನ್ 2016, 7:43 IST

ನಾಯಕನಹಟ್ಟಿ: ಇಂದು ಹೆಚ್ಚಿನ ಪ್ರಮಾಣದಲ್ಲಿ ಯುವಕರು ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿರುವುದು ಆತಂಕಕಾರಿಯಾದ ವಿಷಯವಾಗಿದ್ದು, ಇದರಿಂದ ದೇಶದ ಯುವ ಸಂಪನ್ಮೂಲದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಸಮುದಾಯ ಆರೋಗ್ಯಕೇಂದ್ರದ ದಂತ ವೈದ್ಯಾಧಿಕಾರಿ ಡಾ.ಓಬಣ್ಣ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ವಿದ್ಯಾವಿಕಾಸ್‌ ಶಾಲೆಯ ಆವರಣದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಅಂತರಾಷ್ಟ್ರೀಯ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ದೇಶದಾದ್ಯಂತ ಮಾದಕ ದ್ರವ್ಯಗಳ ಕಡಿವಾಣಕ್ಕೆ ಹಲವು ನೀತಿ ನಿಬಂಧನೆಗಳನ್ನು ವಿಧಿಸಿದರೂ ಗುಟ್ಕಾ, ಪಾನ್‌ಗಳ ಬಳಕೆ, ಮಾರಾಟ  ತಡೆಗಟ್ಟುವುದು ಸಾಧ್ಯವಾಗಿಲ್ಲ. ಇದರಿಂದ ದೇಶದ ಯುವ ಸಮುದಾಯ ದವರು ಮಾದಕ ದ್ರವ್ಯಗಳ ದಾಸರಾಗುತ್ತಿದ್ದಾರೆ. ಚಿಕ್ಕ ವಯಸ್ಸಿಗೇ ನೂರಾರು ರೋಗಗಳಿಗೆ ತುತ್ತಾಗುತ್ತಿ ದ್ದಾರೆ.ಇದರಿಂದ ಅಮೂಲ್ಯ ವಾದ ಬದುಕನ್ನು ನಾಶಮಾಡಿ ಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಪೋಷಕರು, ಶಿಕ್ಷಕರು ಮಕ್ಕಳ ಮೇಲೆ ನಿಗಾವಹಿಸಿ ಅವುಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಜತೆಗೆ ಯುವಕರು ಸ್ವತಃ ಮನಃಪರಿವರ್ತನೆ ಮಾಡಿಕೊಳ್ಳುವ ಮೂಲಕ ಮಾದಕ ದ್ರವ್ಯಗಳಿಂದ ದೂರವಿರಬೇಕು. ಇದರಿಂದ ಸುಂದರ ಬದುಕು ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮುರಳಿಧರಶೆಟ್ಟಿ, ಕಿಸಾನ್‌ ಸಂಘದ ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ ಸ್ವಾಮಿ, ಶಾಲೆಯ ಪೋಷಕ ಪರಿಷತ್‌ನ ಅಧ್ಯಕ್ಷ ನಾಗರಾಜ, ಸಂಘದ ಸದಸ್ಯೆ ದಾಕ್ಷಾಯಿಣಿ ಮಾತನಾಡಿದರು. ಶಾಲೆಯ ಕಾರ್ಯದರ್ಶಿ ಕೆಎಂ.ಶಿವಸ್ವಾಮಿ, ಕೆ.ಟಿ.ನಾಗರಾಜ, ಶೇಷಾದ್ರಿ ನಾಯಕ, ಬಾಸ್ಕರ್‌, ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.