ADVERTISEMENT

ಶಿಕ್ಷಣ ಇಲಾಖೆ ನಿರ್ಲಕ್ಷ್ಯ: ವಿದ್ಯಾರ್ಥಿಗಳು ಅತಂತ್ರ

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:28 IST
Last Updated 16 ಮೇ 2017, 5:28 IST

ಚಿಕ್ಕಜಾಜೂರು: ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 71 ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಈಡಿಗರ ಓಬಳಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2016–17ನೇ ಸಾಲಿನಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ 8ನೇ ತರಗತಿಯನ್ನು ಆರಂಭಿಸಲಾಗಿತ್ತು. ಚಿಕ್ಕಜಾಜೂರು, ಬಾಣಗೆರೆ, ಕೋಟೆಹಾಳ್‌, ಚಿಕ್ಕಂದ ವಾಡಿ, ಗುಂಜಿಗನೂರು, ಹನುಮನ ಹಳ್ಳಿ, ಹೊನ್ನಕಾಲುವೆ ಮೊದಲಾದ ಗ್ರಾಮಗಳಿಂದ ಪೋಷಕರು ಆಂಗ್ಲ ಮಾಧ್ಯಮದ ಶಾಲೆ ಎಂದು ಶಾಲೆಗೆ ದಾಖಲಾತಿ ಮಾಡಿಸಿದರು.

ಕನ್ನಡ ಮಾಧ್ಯಮಕ್ಕೆ 42, ಆಂಗ್ಲ ಮಾಧ್ಯಮಕ್ಕೆ 29 ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ, 2017–18ನೇ ಸಾಲಿಗೆ 9ನೇ ತರಗತಿಯನ್ನು ಮುಂದುವರಿಸಲು ಇಲಾಖೆಯಿಂದ ಇನ್ನೂ ಮುಂದುವರಿಕೆ ಆದೇಶ ಬಾರದ ಹಿನ್ನೆಲೆಯಲ್ಲಿ ಈಗಾಗಲೇ ಈ ಶಾಲೆಯಲ್ಲಿ ಎಂಟನೇ ತರಗತಿ ಯನ್ನು ಮುಗಿಸಿರುವ ವಿದ್ಯಾರ್ಥಿಗಳು ವರ್ಗಾವಣೆ ಪತ್ರವನ್ನು ಪಡೆದುಕೊಂಡು ಬೇರೆ ಶಾಲೆಗೆ ಸೇರಿಕೊಳ್ಳುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ 20ಕ್ಕೂಹೆಚ್ಚು ವಿದ್ಯಾರ್ಥಿಗಳ ಪೋಷಕರು 9ನೇ ತರಗತಿ  ಆರಂಭಿಸುವಂತೆ ಒತ್ತಾಯಿಸಿದರು. 

ಶಾಲೆಗೆ ಬೀಗ ಹಾಕಲು ನಿರ್ಧಾರ: ತಿಂಗಳಾಂತ್ಯಕ್ಕೆ ಶಾಲೆಗಳು ಪುನರಾಂಭವಾಗುತ್ತಿದ್ದು, ಗ್ರಾಮದ ಖಾಸಗಿ ಶಾಲೆಗಳು ಈಗಾಗಲೇ ಭರ್ತಿಯಾಗಿವೆ. ಅಲ್ಲದೆ, 9ನೇ ತರಗತಿಗೆ ಒಂದೇ ಬಾರಿಗೆ 71 ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಾತಿ ಮಾಡಿಕೊಳ್ಳಲು ಸಾಧ್ಯವೇ? ಕೂಲಿ ನಾಲಿ ಮಾಡಿ ಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಲಾ ಗುತ್ತಿತ್ತು. ಆದರೆ, ಈಗ ಆಂಗ್ಲ ಮಾಧ್ಯಮ ಶಾಲೆಗೆ ಎಲ್ಲಿ ಸೇರಬೇಕೆಂಬ ಜಿಜ್ಞಾಸೆಯಲ್ಲಿ ಪೋಷಕರಿದ್ದಾರೆ.

ADVERTISEMENT

ಕೂಲಿ ಮಾಡಿಕೊಂಡು ಜೀವನ ನಡೆಸುವ ನಾವು ದೂರದ ಹೊಳಲ್ಕೆರೆಗೆ ಕಳುಹಿಸಲು ಸಾಧ್ಯವೇ? ಮಕ್ಕಳ ಭವಿಷ್ಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದು ಸರಿಯೇ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ಇಲಾಖೆ ಅಧಿಕಾರಿಗಳು ತಕ್ಷಣವೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, 9ನೇ ತರಗತಿಯನ್ನು ಆರಂಭಿಸಲು ಆದೇಶ ಕಳುಹಿಸಬೇಕು, ಇಲ್ಲದಿದ್ದರೆ, ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪೋಷಕ ರಾದ ಚಿಕ್ಕಂದವಾಡಿ ಎಚ್‌.ಎಲ್‌. ಕುಮಾರಸ್ವಾಮಿ, ಎನ್‌. ಭಾಗ್ಯ, ಭಾರತಮ್ಮ, ಬಿ.ಭಾಗ್ಯ, ಕೋಟೆಹಾಳು ಚಂದ್ರಪ್ಪ, ಆಂಜಿನಪ್ಪ, ಲತಾ, ಗೀತಮ್ಮ, ಪೂರ್ಣಿಮಾ, ಮಂಜುಳಾ, ಕಮಲ ಎಚ್ಚರಿಕೆ ನೀಡಿದ್ದಾರೆ.

2010ರಲ್ಲಿ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲೆಗೆ ಕಾಂಪೌಂಡ್‌, ಬಿಸಿ ಊಟದ ಕೊಠಡಿ, ಶೌಚಾಲಯ, ಬಯಲು ಮಂದಿರ, ನೀರಿನ ಸೌಕರ್ಯವನ್ನು ಮಾಡಿದ್ದೇವೆ. ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಾಲಿಂಗರಾಜ್‌ ಅವರು ಹೆಚ್ಚುವರಿ ಕೊಠಡಿ ಕಟ್ಟಿಸಿಕೊಡುವುದಾಗಿ ತಿಳಿಸಿದ್ದಾರೆ.

ಆದರೆ, 9ನೇ ತರಗತಿ ಮುಂದುವರಿಸಲು ಇದುವರೆಗೂ ಆದೇಶ ಕಳುಹಿಸದಿರುವುದು ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಶಾಲೆಯ ದತ್ತು ದಾನಿ, ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸೋಮಶೇಖರ್‌ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.