ADVERTISEMENT

ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ಹೊಸದುರ್ಗ ತಾಲ್ಲೂಕಿನ ಕೊಂಡಾಪುರಕ್ಕೆ ಮೂಲಸೌಕರ್ಯ ಮರೀಚಿಕೆ: ಗ್ರಾಮಸ್ಥರ ಆರೋಪ

ಎಸ್‌.ಸುರೇಶ್‌
Published 13 ಜುಲೈ 2017, 5:59 IST
Last Updated 13 ಜುಲೈ 2017, 5:59 IST
ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ
ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ   

ಹೊಸದುರ್ಗ: ತಾಲ್ಲೂಕಿನ ಕೊಂಡಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿ ಆರು ತಿಂಗಳಾದರೂ ದುರಸ್ತಿಯಾಗಿಲ್ಲ. 350ಕ್ಕೂ ಅಧಿಕ ಮನೆ, 1,300ಕ್ಕೂ ಅಧಿಕ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ, ವಿದ್ಯುತ್‌, ಸ್ವಚ್ಛತೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳು ಮರೀಚಿಕೆ ಆಗಿರುವುದು ಬೇಸರದ ಸಂಗತಿ ಎನ್ನುತ್ತಾರೆ ಗ್ರಾಮಸ್ಥ ಭೈರಸಿದ್ದಪ್ಪ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಪೂರೈಕೆಯಾಗಿದ್ದು 20 ದಿನಗಳು ಮಾತ್ರ.  ನಂತರ ಸ್ಥಗಿತವಾದ ಘಟಕವನ್ನು ದುರಸ್ತಿ ಮಾಡಲು ಯಾರೂ ಮುಂದಾಗಿಲ್ಲ. ಘಟಕ ಸ್ಥಾಪನೆಗೆ ಮಾಡಿರುವ ಲಕ್ಷಾಂತರ ಹಣ ಪೋಲಾಗಿದೆ. ಇದರಿಂದ ಗ್ರಾಮಸ್ಥರು ಶುದ್ಧ ನೀರಿಗೆ ಪರದಾಡಬೇಕಾಗಿದೆ.

ಇಲ್ಲಿ ಓವರ್‌ಹೆಡ್‌ ಟ್ಯಾಂಕ್‌ನಲ್ಲೂ ಗ್ರಾಮದ ಎಲ್ಲಾ ಬೀದಿಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಎರಡು ಬೀದಿಗಳಿಗೆ ನೀರು ಬರುತ್ತಿದೆ. ಇನ್ನುಳಿದ ಐದಾರು ಬೀದಿಗಳಿಗೆ ಬರುವುದಿಲ್ಲ. ಕಿರು ನೀರು ಸರಬರಾಜಿನ ಮೂರು ಘಟಕಗಳು ಇದ್ದರೂ ಅವುಗಳಿಂದ ಸಮರ್ಪಕವಾಗಿ ನೀರು ಒದಗಿಸುವುದಿಲ್ಲ. ಇದರಿಂದ ಸಮೀಪದ ತೋಟಗಳಿಗೆ ಹೋಗಿ ಕುಡಿಯುವ ನೀರು ತರುವ ಸ್ಥಿತಿ ನಿರ್ಮಾಣ ಆಗಿದೆ. ಸೇವಿಸುತ್ತಿರುವ ನೀರು ಫ್ಲೋರೈಡ್‌ಯುಕ್ತವಾಗಿದ್ದು, ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎನ್ನುತ್ತಾರೆ ಗ್ರಾಮದ ಮಹಿಳೆಯರು.

ADVERTISEMENT

‘ನಿರ್ಮಿತಿ ಕೇಂದ್ರದಿಂದ ಈಚೆಗೆ ನಿರ್ಮಿಸಿರುವ ಕಾಂಕ್ರೀಟ್‌ ರಸ್ತೆಗಳು ಕಳಪೆಯಾಗಿವೆ. ಅಲ್ಲದೆ ರಸ್ತೆಯನ್ನು ಎತ್ತರವಾಗಿ ನಿರ್ಮಿಸಿರುವುದರಿಂದ ಮಳೆ ಬಂದರೆ ರಸ್ತೆಯ ಕೊಳಚೆ ನೀರೆಲ್ಲಾ ಮನೆಯೊಳಗೆ ನುಗ್ಗುತ್ತದೆ. ಚರಂಡಿ ನಿರ್ಮಾಣ ಕಾರ್ಯವೂ ಸಮರ್ಪಕವಾಗಿ ಆಗಿಲ್ಲ. ಸ್ವಚ್ಛತೆಯೂ  ಇಲ್ಲದೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ವಿದ್ಯುತ್‌ ಕಂಬಗಳು ಹಳೆಯದಾಗಿದ್ದು, ಯಾವಾಗ ಉರುಳಿ ಬಿದ್ದು ಅಪಾಯ ಸಂಭವಿಸುತ್ತದೆಯೋ ಎಂಬ ಆತಂಕ ಎದುರಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು. 

ಸಂಪರ್ಕಕ್ಕೆ ಸಿಗದ ಪಿಡಿಒ: ಈ ಕುರಿತು ಮಾಹಿತಿ ಪಡೆಯಲು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ ಅವರಿಗೆ ಐದಾರು ಬಾರಿ ಕರೆ ಮಾಡಿದಾಗಲೂ ಅವರ ಮೊಬೈಲ್ ಸ್ವಿಚ್ಡ್‌ ಆಫ್ ಆಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.