ADVERTISEMENT

ಸರ್ಕಾರಿ ಆಸ್ಪತ್ರೆ: ಅನಾರೋಗ್ಯ ವಾತಾವರಣ

ಆಸ್ಪತ್ರೆ ಅಂಗಳದಲ್ಲಿ ಗೂಡಂಗಡಿಗಳ ಭರಾಟೆ; ಗುಂಡಿಬಿದ್ದ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 8:41 IST
Last Updated 21 ಏಪ್ರಿಲ್ 2014, 8:41 IST

ಚಳ್ಳಕೆರೆ: ಜಿಲ್ಲೆಯ ಅತಿ ದೊಡ್ಡ ತಾಲ್ಲೂಕಾಗಿರುವ ಚಳ್ಳಕೆರೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಾಮಾನ್ಯರ ಪಾಲಿಗೆ ಅನುಕೂಲ ಕಲ್ಪಿಸಿಕೊಡುವ ಬದಲು ಶಾಪವಾಗಿ ಪರಿಣಮಿಸಿದೆ.

ಪಟ್ಟಣದ ಹೃದಯಭಾಗದಲ್ಲಿರುವ  ಸರ್ಕಾರಿ ಆಸ್ಪತ್ರೆಗೆ ನಿತ್ಯ ಸಾವಿರಾರು ಸಾಮಾನ್ಯ ಜನರು ಚಿಕಿತ್ಸೆ ಬಯಸಿ ಬರುತ್ತಾರೆ. ಇಲ್ಲಿನ ಆಸ್ಪತ್ರೆಗೆ ಬರುವ ಸಾಮಾನ್ಯರಿಗೆ ಚಿಕಿತ್ಸೆಗಿಂತಲೂ ಸ್ವಚ್ಛತೆಯಿಲ್ಲದ ವಾತಾವರಣ, ಗುಂಡಿಬಿದ್ದ  ದಾರಿ, ಸದಾ ಮಲಿನ ಪರಿಸರ ರೋಗಿಗಳಿಗೆ ಸಮಸ್ಯೆಯಾಗಿ ಕಾಡುತ್ತಿವೆ.

ಆಸ್ಪತ್ರೆಯ ಮುಖ್ಯದ್ವಾರವೇ ಗುಂಡಿಬಿದ್ದು, ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಅಪಾಯ ಆಹ್ವಾನಿಸುತ್ತಿದೆ. ಗುಂಡಿಬಿದ್ದು ಹಲವು ತಿಂಗಳೇ ಕಳೆದಿದ್ದರೂ,  ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ. ಆಸ್ಪತ್ರೆಗೆ ಧಾವಿಸಿ ಬರುವ ರೋಗಿಗಳು ಗುಂಡಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಗೂಡಂಗಡಿಗಳು ಆಸ್ಪತ್ರೆಯ ಕಾಂಪೌಂಡ್‌ಗೆ ತಾಗಿಕೊಂಡು ನಿತ್ಯ ವ್ಯಾಪಾರದಲ್ಲಿ ತೊಡಗುತ್ತವೆ. ಇಲ್ಲಿನ ಗೂಡಂಗಡಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಹಾಗೂ ಉಳಿದ ತಿಂಡಿ ತಿನಿಸುಗಳು ಅಲ್ಲಿಯೇ ಚೆಲ್ಲುವುದರಿಂದ ಸುತ್ತಮುತ್ತಲಿನ ಪರಿಸರ ಮಲಿನವಾಗಿದೆ. ಇದರಿಂದಾಗಿ ಸೊಳ್ಳೆ ಸೃಷ್ಟಿಯಾಗುತ್ತಿವೆ. ಗೂಡಂಗಡಿಗಳಿಂದ ಚೆಲ್ಲಿದ ತಿನಿಸುಗಳಿಗಾಗಿ ಬರುವ ಹಂದಿಗಳಿಂದಲೂ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ತಿಂಗಳುಗಳೇ ಕಳೆದರೂ, ಆಸ್ಪತ್ರೆ ಗೋಡೆಗಳ ಸಮೀಪ ಚೆಲ್ಲಿರುವ ಕಸ ಹಾಗೂ ತ್ಯಾಜ್ಯದಿಂದ ರೋಗ, ರುಜಿನಗಳು ಹೆಚ್ಚುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಕಸದ ರಾಶಿಯ ಸಮೀಪವೇ ಕೆಲವು ಗೂಡಂಗಡಿಗಳು ಇರುವುದರಿಂದ ಹೆಚ್ಚಿನ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳದಿರುವುದರ  ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಆಸ್ಪತ್ರೆ ಸಮೀಪದ ವಿದ್ಯುತ್ ಪರಿವರ್ತಕಕ್ಕೆ ತಾಗಿಕೊಂಡಿರುವ ಗೊಡಂಗಡಿಯೊಂದು ಅಪಾಯ ಆಹ್ವಾನಿಸುತ್ತಿದೆ. ಹಲವು ಸಮಸ್ಯೆಗಳಿಂದ ಕೂಡಿರುವ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯತ್ತ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದಿರುವುದು ರೋಗಿಗಳ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.