ADVERTISEMENT

ಸಿಬ್ಬಂದಿ ಕೊಡಿ, ಆಮೇಲೆ ಕೆಲಸ ಕೇಳಿ

ಮೊಳಕಾಲ್ಮುರು ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧಿಕಾರಿ ತಾಕೀತು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2015, 8:39 IST
Last Updated 10 ಅಕ್ಟೋಬರ್ 2015, 8:39 IST

ಮೊಳಕಾಲ್ಮುರು: ‘ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತೀವ್ರ ಕೊರತೆ ಇದ್ದು ಮೊದಲು ಸಿಬ್ಬಂದಿ ನಿಯೋಜನೆ ಮಾಡಿಸಿ, ನಂತರ ಸೇವೆ ಬಗ್ಗೆ ಕೇಳಿ ಅಷ್ಟೇ...!’

– ಇದು ಕೇಳಿ ಬಂದಿದ್ದು ಶುಕ್ರವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ. ಈ ರೀತಿ ತಾಕೀತು ಮಾಡಿದ್ದು ಜನಪ್ರತಿಧಿಯಲ್ಲ. ಬದಲಾಗಿ ತಾಲ್ಲೂಕು ಆರೋಗ್ಯಾಧಿಕಾರಿಯೇ ಜನಪ್ರತಿನಿಧಿಗಳ ಮೇಲೆ ಹರಿಹಾಯ್ದ ಪರಿಣಾಮ ಅವರು ಮರು ಉತ್ತರವಿಲ್ಲದೇ ಸುಮ್ಮನಿರಬೇಕಾದ ಅನಿವಾರ್ಯತೆ ಎದುರಾಯಿತು.

‘ರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಲ್ಲದಕ್ಕೂ ಬಳ್ಳಾರಿಗೆ ಹೋಗಿ ಎಂದು ರೋಗಿಗಳನ್ನು ಕಳಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ಬೆಡ್‌ ಮೇಲೆ ರಕ್ತದ ಕಲೆಗಳು ಇವೆ, ಎಲ್ಲದಕ್ಕೂ ನೀವೇ ಹೊಣೆ ಎಂದು ದೂರಲಾಗುತ್ತಿದೆ’ ಎಂದು ಅಧ್ಯಕ್ಷೆ ಜಯಪದ್ಮಾ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪದೇಪದೇ ದೂರಿದರು.

ಆರೋಗ್ಯಾಧಿಕಾರಿ ಡಾ.ತುಳಸಿ ರಂಗನಾಥ್ ಮಾತನಾಡಿ, ‘ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯರ ಹುದ್ದೆಗಳು, ಉಳಿದ ಹುದ್ದೆಗಳು ಸೇರಿದಂತೆ ಶೇ 85ರಷ್ಟು ಹುದ್ದೆಗಳು ಖಾಲಿ ಇವೆ. ನಾವು ನಿಯೋಜನೆ ಮೂಲಕ ಸೇವೆ ಕೊಡುತ್ತಿದ್ದೇವೆ. ಶಾಸಕರು, ಮಂತ್ರಿಗಳಿಗೆ ಹೇಳಿ ಸಿಬ್ಬಂದಿ ಕೊಡಿಸಿ ಆಮೇಲೆ ಸೇವೆ ಗುಣಮಟ್ಟ ಕೇಳಿ ಎಂದು ಖಾರವಾಗಿ ಹೇಳಿದ್ದೇ ತಡ, ‘ಆಯಿತು ಇದ್ದುದ ರಲ್ಲಿಯೇ ಸೇವೆ ಕೊಡಿ ಸಾರ್’ ಎಂದು ಪ್ರಶ್ನೆ ಮಾಡಿದವರು ತಣ್ಣಗಾದರು.

‘ಕೃಷಿ ಇಲಾಖೆ  ವತಿಯಿಂದ ಸೋಲಾರ್ ಪಂಪ್‌ಸೆಟ್‌ಗಳಿಗೆ ಅಳವಡಿಸಿ ಕೊಳ್ಳಲು ಯೋಜನೆ ಮಂಜೂರಾಗಿದ್ದು ಅ.23 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ವಿವಿಧ ಅಶ್ವಶಕ್ತಿ ಆಧಾರದಲ್ಲಿ ಬೆಲೆ ಹಾಗೂ ಸಬ್ಸಿಡಿ ನಿಗದಿ ಮಾಡಲಾಗಿದೆ. 15 ವರ್ಷ ಉಚಿತ ಸೇವೆ ಆಧಾರದಲ್ಲಿ ಸೋಲಾರ್‌ ಅಳವಡಿಸುತ್ತಿದ್ದು ಆಸಕ್ತ ರೈತರು ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ತಾಡಪಾಲುಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ತರಿಸಿ ವಿತರಣೆ ಮಾಡಬೇಕು. 60 ಗುರಿ ನೀಡಿದಲ್ಲಿ ಯಾರಿಗೆ ನೀಡಬೇಕು? ಅಗತ್ಯವಿರುವಷ್ಟು ತರಿಸಿ ವಿತರಣೆಗೆ ಕ್ರಮ ಕೈಗೊಳ್ಳಿ’ ಎಂದು  ಹನುಮಂತಪ್ಪ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಕುಡಿಯುವ ನೀರು ವಿಭಾಗದ ಎಂಜಿನಿಯರ್‌ ವರದಿ ಯಲ್ಲಿ, ‘2015–16ರಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಹೊಸ ಕಾಮಕಾರಿಗಳ ಕ್ರಿಯಾಯೋಜನೆ ಸಲ್ಲಿಸ ಲಾಗಿದೆ. ರಾಜೀವ್‌ ಗಾಂಧಿ ಸಬ್‌ಮಿಷನ್‌ ಅಡಿ ಮೊಳಕಾಲ್ಮುರು ಕಸಬಾ ಗ್ರಾಮ ಗಳಿಗೆ ನೀರುಣಿಸುವ ಯೋಜನೆ ವೈಫಲ್ಯ ಬಗ್ಗೆ ಸರ್ವೆ ಮಾಡಿಸಿದ್ದು, 10 ದಿನದಲ್ಲಿ ವರದಿ ಬರಲಿದೆ’ ಎಂದು ಹೇಳಿದರು.

ರೇಷ್ಮೆ ಅಧಿಕಾರಿ ರವಿ ವರದಿಯಲ್ಲಿ ‘ಗುಚ್ಛಗ್ರಾಮ ಯೋಜನೆಯಲ್ಲಿ ಈವರೆಗೆ ರೈತರಿಗೆ ಪರಿಕರಗಳನ್ನು ಕೊಡಿಸಲಾ ಗುತ್ತಿತ್ತು. ಹೊಸ ಆದೇಶ ಪ್ರಕಾರ ಹೊಸರೇಷ್ಮೆ ನಾಟಿ ಮಾಡಿಸಬೇಕಿದೆ. ಇದನ್ನು ಬದಲಾಯಿಸುವಂತೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಕೆಲ ಶಾಲೆಗಳಲ್ಲಿ ಶಿಕ್ಷಕರು ತಡವಾಗಿ ಹೋಗಿ ಮುಂಚಿತವಾಗಿ ಬರುತ್ತಿದ್ದಾರೆ. ಇದಕ್ಕೆ ನೀವು ನಿಗದಿತ ವಾಗಿ ಶಾಲೆಗೆ ಭೇಟಿ ನೀಡದಿರುವುದೇ ಕಾರಣ ಎಂದು ಬಿಇಒಗೆ ಪ್ರಶ್ನಿಸಿದರು. ಉತ್ತರಿಸಿದ ಬಿಇಒ ನಿಖರವಾಗಿ ಇಂತಹ ಶಾಲೆ ಶಿಕ್ಷಕರು ಎಂದು ಹೇಳಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ತಾಲ್ಲೂಕು ಪಂಚಾಯ್ತಿ ಎಇಒ ಪಾಲಯ್ಯ, ವ್ಯವಸ್ಥಾಪಕ ಲೋಕೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.