ADVERTISEMENT

ಸಿರಿಗೆರೆ: ರೈತಪರ ಸ್ವಾಮೀಜಿಗೆ ಶ್ಲಾಘನೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 8:56 IST
Last Updated 21 ಸೆಪ್ಟೆಂಬರ್ 2017, 8:56 IST
ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟಕರಾಗಿ ಜಿ.ಲೋಕೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟಕರಾಗಿ ಜಿ.ಲೋಕೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು   

ಸಿರಿಗೆರೆ: ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರೈತಪರ ಕಾಳಜಿಯಲ್ಲಿ ತೊಡಗಿರುವುದನ್ನು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಜಿ. ಲೋಕೇಶ್ ಶ್ಲಾಘಿಸಿದರು.
ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 25ನೇ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು.

ಕೃಷಿ, ಶಿಕ್ಷಣ, ನೀರಾವರಿಯಂತಹ ಸಂಪತ್ತುಗಳನ್ನು ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವುದು ಹಿರಿಯ ಸ್ವಾಮೀಜಿ ಉದ್ದೇಶವಾಗಿತ್ತು. ಆ ಕನಸನ್ನು ಈಗಿನ ಸ್ವಾಮೀಜಿ ತಂತ್ರಾಂಶದ ನೆರವಿನೊಂದಿಗೆ ನನಸು ಮಾಡುತ್ತಿದ್ದಾರೆ. ರಂಗಕಲೆಯನ್ನು ರಾಜ್ಯ, ದೇಶ, ಅಂತರರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯುವಲ್ಲಿ ಶ್ರಮಿಸಿದವರು ಅವರು ಎಂದು ಬಣ್ಣಿಸಿದರು.

ಅತಿಥಿಯಾಗಿ ಮಾತನಾಡಿದ ಲಕ್ಷ್ಮಣ್ ನಿಂಬರಗಿ, ‘ಹಿರಿಯ ಸ್ವಾಮೀಜಿ ಕೇವಲ ನುಡಿ ಜಾಣರಲ್ಲ. ಆಡಿದ್ದನ್ನು ಮಾಡಿ ತೋರಿಸುವ ಛಲ ಅವರಲ್ಲಿ ಇತ್ತು ಎನ್ನುವುದನ್ನು ಇಲ್ಲಿನ ಪುಸ್ತಕಗಳ ಮೂಲಕ ಓದಿ ತಿಳಿದೆ. ಇಂತಹ ಮಠಮಾನ್ಯಗಳು ಒಳ್ಳೆಯ ಶಿಕ್ಷಣ ನೀಡಿ, ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಶಿಸ್ತನ್ನು ಉಳಿಸಿಕೊಂಡು ಬಂದಿವೆ’ ಎಂದರು.

ADVERTISEMENT

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಹಿರಿಯ ಗುರು ನಮ್ಮ ನಾಡಿನ ಅದ್ಭುತ ಶಕ್ತಿ. ಗ್ರಾಮೀಣರಿಗೆ ಔದ್ಯೋಗಿಕವಾಗಿ, ವ್ಯಾವಹಾರಿಕವಾಗಿ ಬೆಳೆಯಲು ಇಂಬುಗೊಟ್ಟವರು. ಇಂದಿನ ಭ್ರಷ್ಟಾಚಾರ ಕಂಡಿದ್ದರೆ ಅವರಿಗೆ ಸರಿಯಾಗಿ ಪೆಟ್ಟು ಕೊಡುವಂತೆ ಹೇಳುತ್ತಿದ್ದರೇನೋ? 400 ವರ್ಷಗಳಷ್ಟು ಕೆಲಸ ಕಾರ್ಯಗಳನ್ನು ಕೇವಲ 40 ವರ್ಷಗಳಲ್ಲಿ ಮಾಡಿದ ಪುಣ್ಯ ಪುರುಷ’ ಎಂದು ಬಣ್ಣಿಸಿದರು.

ಇಲ್ಲಿ ವಿದ್ಯಾಭ್ಯಾಸ ಮಾಡಿ ಅನೇಕರು ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಶೈಕ್ಷಣಿಕವಾಗಿ, ಸುಸಂಸ್ಕೃತರನ್ನಾಗಿ ಬೆಳೆಸಿದ್ದೇ ಸಿರಿಗೆರೆ ಮಠ. ಗ್ರಾಮೀಣ ಭಾಗದಲ್ಲಿ ರೈತಾಪಿ ಜನರಿಗೆ ಸರ್ಕಾರಗಳಿಂದ ಆಗದೇ ಇರುವ ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ. ಅವರು ಅಭಿನಂದನಾರ್ಹರು’ ಎಂದು ಕೊಂಡಾಡಿದರು.

ದಾವಣಗೆರೆ ಜಿಲ್ಲಾಧಿಕಾರಿ ರಮೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ‘ಸಮಾಜದಲ್ಲಿ ಯಾರು ಉತ್ತಮರು, ಯಾರು ಶ್ರೇಷ್ಠರು ಎಂಬ ಮಾತನ್ನು ನೆನಪು ಮಾಡಿಕೊಳ್ಳಬೇಕು. ಯಾರು ಓದಿದ್ದನ್ನು ಮನನ ಮಾಡಿಕೊಂಡು, ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎನ್ನುವ ಚಿಂತನೆಯಲ್ಲಿ ಇರುತ್ತಾರೆಯೋ ಅವರು ಶ್ರೇಷ್ಠ ರು ಎನಿಸಿಕೊಳ್ಳುತ್ತಾರೆ ಎಂದು ಹೇಳಿದವರಲ್ಲಿ ಹಿರಿಯ ಸ್ವಾಮೀಜಿ ಕೂಡ ಒಬ್ಬರಾಗಿದ್ದರು’ ಎಂದು ಸ್ಮರಿಸಿದರು.

ಮಾಜಿ ಶಾಸಕ ಚಂದ್ರಪ್ಪ ಮತ್ತು ಎಸ್ಪಿ ಭೀಮಶಂಕರ ಎಸ್. ಗುಳೇದ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಹೆಚ್ಚುವರಿ ಜಿಲ್ಲಾರಕ್ಷಣಾಧಿಕಾರಿ ಲಕ್ಷ್ಮಣ್ ನಿಂಬರಗಿ, ರವೀಂದ್ರ, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, ಮಾಜಿ ಶಾಸಕ ಚಂದ್ರಪ್ಪ, ವಿಶೇಷ ಆಹ್ವಾನಿತರಾಗಿ ಶಾಸಕ ಶಾಂತನಗೌಡ, ಮಾಜಿ ಶಾಸಕರಾದ ಕೆ.ಬಿ.ಮಲ್ಲಿಕಾರ್ಜುನ, ಎಂ.ಚಂದ್ರಪ್ಪ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ತರಳಬಾಳು ಜಗದ್ಗುರು ಸಂಗೀತ ಶಾಲೆಯ ಮಕ್ಕಳು ಸಂಗೀತ ಹಾಡಿದರು. ಪರಿಮಳ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.