ADVERTISEMENT

ಸುಧಾರಿತ ಜಿಎಸ್‌ಟಿ: ತಪ್ಪದೇ ಬಿಲ್ ಪಡೆದುಕೊಳ್ಳಿ

ಸರಕು ಮತ್ತು ಸೇವಾ ತೆರಿಗೆ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಶ್ರೀರಂಗಯ್ಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 5:35 IST
Last Updated 15 ಜುಲೈ 2017, 5:35 IST

ಚಿತ್ರದುರ್ಗ: ‘ಜುಲೈ 1ರಿಂದ ದೇಶದ ಎಲ್ಲೆಡೆ ಜಾರಿಯಾಗಿರುವ ಏಕರೂಪ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ ಟಿ) ಕುರಿತು ಗ್ರಾಹಕರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಎಸ್‌ಟಿ ಕುರಿತು ಸಂಘ ಸಂಸ್ಥೆಯವರಿಗೆ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಎಸ್‌ಟಿ ಅತ್ಯಂತ ಸುಧಾರಿತ ತೆರಿಗೆ ಪದ್ಧತಿಯಾಗಿದ್ದು, ಗ್ರಾಹಕರು ಅಂಗಡಿಯವರಿಂದ ತಾವು ಖರೀದಿಸಿದ ವಸ್ತುಗಳಿಗೆ ಬಿಲ್ ಕೇಳಿ ಪಡೆಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸುಧಾರಿತ ತೆರಿಗೆ ಜಾರಿಯಿಂದ ಎಲ್ಲಾ ವಸ್ತುಗಳಿಗೆ ಒಂದೇ ತೆರಿಗೆ ವಿಧಿಸಲಾಗುತ್ತಿದೆ. ಈ ಹಿಂದೆ ಇದ್ದಂತೆ ಕೇಂದ್ರ ತೆರಿಗೆ, ರಾಜ್ಯ ತೆರಿಗೆ ಎಂದು ಮುಂದೆ ಇರುವುದಿಲ್ಲ. ಮಾರಾಟಗಾರರೂ ಜಿಎಸ್‌ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ದೇಶಾದ್ಯಂತ ಒಂದೇ ತೆರಿಗೆ ಕಾನೂನು ಜಾರಿಯಲ್ಲಿದ್ದು ತೆರಿಗೆಗಳ್ಳರ ಮೇಲೆ ಕಠಿಣ ಕ್ರಮಗಳು ಜರುಗಲಿವೆ. ಜಿಎಸ್‌ಟಿ ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆಯಾಗಿದ್ದು ಅತ್ಯಂತ ಸರಳವಾಗಿದೆ’ ಎಂದರು.

ಕೇಂದ್ರ ಸೇವಾ ತೆರಿಗೆ ಇಲಾಖೆ ಸಹಾಯಕ ಆಯುಕ್ತ ದ್ಯಾಮಣ್ಣ ಮಾತನಾಡಿ, ‘ಜಿಎಸ್‌ಟಿ ಬಗ್ಗೆ ಗ್ರಾಹಕರಿಗಾಗಲಿ, ಮಾರಾಟಗಾರರಿಗಾಗಲಿ ಗೊಂದಲಗಳು ಬೇಡ. ಈ ಹಿಂದೆ ಹಲವು ತೆರಿಗೆಗಳು ಒಂದು ವಸ್ತುವಿನ ಮೇಲೆ ವಿಧಿಸಲಾಗುತ್ತಿತ್ತು. ಯಾವ ಯಾವ ತೆರಿಗೆಗಳು ಇದರ ಮೇಲಿದೆ ಎಂದು ಗ್ರಾಹಕರಿಗೆ ಗೊತ್ತಾಗುತ್ತಿರಲಿಲ್ಲ’ ಎಂದು ವಿವರಣೆ ನೀಡಿದರು.

‘ಭಾಗಶಃ ಅಥವಾ ಸಂಪೂರ್ಣ ಹವಾನಿಯಂತ್ರಿತ ಅಥವಾ ಮದ್ಯ ಮಾರಾಟ ಮಾಡುತ್ತಿರುವ ರೆಸ್ಟೋರೆಂಟ್‌ಗಳಲ್ಲಿ ಹಿಂದೆ ಶೇ 15ರಷ್ಟು ಸೇವಾ ತೆರಿಗೆ ಮತ್ತು ಶೇ 14.5ರಷ್ಟು ವ್ಯಾಟ್ ವಿಧಿಸಲಾಗಿತ್ತು. ಈಗ ಶೇ 18 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.

ರೆಸ್ಟೋರೆಂಟ್‌ಗಳು ₹75 ಲಕ್ಷಗಳವರೆಗೆ  ಶೇ 5 ರಷ್ಟು ತೆರಿಗೆ ಪಾವತಿಸಬೇಕು. ಆದರೆ ಇದನ್ನು ಗ್ರಾಹಕರಿಂದ ಪಡೆಯಬಾರದು ಇದು ಸಂಯುಕ್ತ ತೆರಿಗೆ ಪದ್ಧತಿಯಲ್ಲಿ ಸೇರ್ಪಡೆಯಾಗಲಿದೆ. ಗ್ರಾಹಕರಿಗೆ ಬಿಲ್ ನೀಡುವಾಗ ನಮೂದು ಮಾಡಿದ್ದರೂ ಗ್ರಾಹಕರಿಂದ ಜಿಎಸ್‌ಟಿ ಪಡೆಯಬಾರದು ಎಂದು ಮಾಹಿತಿ ನೀಡಿದರು.

ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಸಹಾಯಕ ಆಯುಕ್ತ ಸಚ್ಚಿದಾನಂದ ಮಾತನಾಡಿ, ‘ಜಿಎಸ್‌ಟಿ ಜಾರಿಯಾದಾಗಿನಿಂದ ಇತರ ಎಲ್ಲಾ ತೆರಿಗೆಗಳು ರದ್ದಾಗಿವೆ. ಇನ್ನು ಮುಂದೆ ಯಾವುದೇ ತೆರಿಗೆ ಅರಾಜಕತೆ ಇರುವುದಿಲ್ಲ.

ಜುಲೈ 1 ರ ನಂತರ ಹಳೇ ವಸ್ತುಗಳ ಸಂಗ್ರಹವಾಗಿದ್ದಲ್ಲಿ ಹಳೆ ಎಂಆರ್‌ಪಿ ಜಿಎಸ್‌ಟಿಯಂತೆ ಹೊಸ ಎಂಆರ್‌ಪಿ ದರ ನಮೂದಿಸಬೇಕು. ಜಿಎಸ್‌ಟಿ ದರವನ್ನು ಅಷ್ಟು ಸುಲಭದಲ್ಲಿ ಬದಲು ಮಾಡಲು ಸಾಧ್ಯವಿಲ್ಲ, ಇದಕ್ಕಾಗಿ ಮಂಡಳಿ ಸ್ಥಾಪಿಸಲಾಗಿದ್ದು, ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಮಂಡಳಿಯಲ್ಲಿದ್ದಾರೆ’ ಎಂದರು.

ಕಾರ್ಯಾಗಾರದಲ್ಲಿ ಕೇಂದ್ರ ಸೇವಾ ತೆರಿಗೆ ಅಧಿಕಾರಿಗಳಾದ ಸಂದೀಪ್‌ಕುಮಾರ್, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ತುಳಸಿಕುಮಾರ್, ನಾಗರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

***

ಅಧಿಕಾರಿಗಳು ನೀಡಿದ ತೆರಿಗೆಯ ವಿವರ

ಮಿಲ್ಕ್‌ ಪೌಡರ್‌ಗೆ ಹಿಂದೆ ಶೇ 6 ಈಗ ಜಿಎಸ್‌ಟಿ ಶೇ 5, ಮೊಸರು, ಲಸ್ಸಿ, ಬೆಣ್ಣೆಗೆ ಶೇ 4 ಇತ್ತು ಇದಕ್ಕೆ ಜಿಎಸ್‌ಟಿ ಇಲ್ಲ, ಮುದ್ರೆ ಹಾಕದ ಪ್ರಾಕೃತಿಕ ಜೇನುತುಪ್ಪ ಶೇ6 ಇತ್ತು ಈಗ ತೆರಿಗೆ ಇಲ್ಲ, ಗೋಡಂಬಿಗೆ ಶೇ 7 ಇತ್ತು ಇದಕ್ಕೆ ಜಿ.ಎಸ್.ಟಿ. ಶೇ 5, ಒಣದ್ರಾಕ್ಷಿ, ಮಸಾಲೆಗಳು, ಚಹಾ ಸೋಯಾಬಿನ್, ಎಣ್ಣೆ, ಕಡಲೆಕಾಯಿ ಎಣ್ಣೆ, ಪಾಮ್ಆಯಿಲ್ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆಗೆ ಶೇ 6 ತೆರಿಗೆ ಇತ್ತು. ಈಗ ಶೇ 5 ರಷ್ಟು ಜಿಎಸ್‌ಟಿ ಇದೆ.

ಗೋಧಿಗೆ ಶೇ 2.5, ಅಕ್ಕಿಗೆ ಶೇ 2.75 ತೆರಿಗೆ ಇತ್ತು. ಈಗ ತೆರಿಗೆ ಇಲ್ಲ. ಮುದ್ರೆಹಾಕದ ಹಿಟ್ಟು ಶೇ 3.50 ಈಗ ತೆರಿಗೆ ಇಲ್ಲ, ಸಾಬೂನು ಶೇ 25 ಇತ್ತು ಈಗ ಶೇ 18, ಹಿಂದೆ ₹ 500ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳಿಗೆ ಶೇ 10 ರಷ್ಟು ತೆರಿಗೆ ಇತ್ತು. ಈಗ ಶೇ 5 ಜಿಎಸ್‌ಟಿ ಇತರೆ ಪಾದರಕ್ಷೆಗಳು ಹಿಂದೆ ಶೇ 21 ಇದ್ದು ಈಗ ಶೇ 18, ಎಲ್‌ಪಿಜಿ ಸ್ಟೌವ್‌ಗೆ ಶೇ 21 ಇದ್ದದ್ದು ಶೇ 18, ಟ್ರ್ಯಾಕ್ಟರ್ ಟೈರ್ ಮತ್ತು ಟೂಬ್‌ಗೆ ಶೇ 20ರಿಂದ 18 ಕ್ಕೆ ಇಳಿಕೆಯಾಗಿದೆ. ಇದೇ ರೀತಿ ಬಹುತೇಕ ವಸ್ತುಗಳ ಬೆಲೆ ಜಿಎಸ್‌ಟಿಯಿಂದ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.