ADVERTISEMENT

ಸುಳ್ಳು ಜಾತಿ ಪ್ರಮಾಣಪತ್ರ: ಕ್ರಮಕ್ಕೆ ಆಗ್ರಹ

‘2 ಎ’ ವರ್ಗಕ್ಕೆ ಸೇರಿದ ವಿವಿಧ ಸಮುದಾಯಗಳ ಮುಖಂಡರ ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 5:48 IST
Last Updated 13 ಜುಲೈ 2017, 5:48 IST

ಚಿತ್ರದುರ್ಗ: ತಮ್ಮದಲ್ಲದ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಕೋಟಾದ ಅಡಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವಿ ಕಾಲೇಜಿಗೆ ಪ್ರವೇಶ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿರುವಂತಹ ವ್ಯವಸ್ಥಿತ ಜಾಲವೊಂದು ರಾಜ್ಯದಲ್ಲಿದ್ದು, ಇಂಥವುಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಬಿ.ಎಸ್. ಪ್ರಭಾಕರ್ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ 2ಎ ವರ್ಗಕ್ಕೆ ಸೇರಿದ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಗಣಕೀಕೃತ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. 

ಮೂರು ವರ್ಷಗಳಿಂದ (2014) ಇಂಥ ಪ್ರಕರಣಗಳು ನಡೆಯುತ್ತಿವೆ. 2017ರ ಸಿಇಟಿಯಲ್ಲೂ ಇಂಥ ಅಕ್ರಮ ಪ್ರಮಾಣ ಪತ್ರ ನೀಡಿದ್ದಾರೆ. ಇಂಥ ಅರ್ಜಿಗಳನ್ನೂ ಅರ್ಹ ಎಂದು ಪರಿಗಣಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಜಿನಿಯರ್ ಪದವಿಗೆ ಪ್ರವೇಶ ನೀಡಿದೆ. ಈ ಅಕ್ರಮದಲ್ಲಿ ಕೆಲವು ಇಲಾಖಾ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಈ ಎಲ್ಲ ಆರೋಪಗಳಿಗೆ ದಾಖಲೆಗ­ಳಿದ್ದು, ಇಂಥ ವ್ಯಕ್ತಿ ಮತ್ತು ಅವರಿಗೆ ಬೆಂಬಲ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.   

ADVERTISEMENT

‘ಈಗ ಸಲ್ಲಿಸಿರುವ ಎಲ್ಲ ದಾಖಲೆಗಳಲ್ಲೂ 2ಬಿ ವರ್ಗಕ್ಕೆ ಸೇರಿರುವ ವಿದ್ಯಾರ್ಥಿಗಳು, 2ಎ ಜಾತಿ ಪ್ರಮಾಣ ಪತ್ರ ಪಡೆದು ವಂಚಿಸಿದ್ದಾರೆ. 2ಎ ಪ್ರವರ್ಗದ ಅಡಿಯಲ್ಲಿ 102 ಜಾತಿಗಳಿದ್ದು, 350ಕ್ಕೂ ಹೆಚ್ಚು ಉಪ ಪಂಗಡಗಳಿವೆ (ಕುರುಬ, ದೇವಾಂಗ, ಭಾವಸಾರ ಕ್ಷತ್ರಿಯ, ಹಾಲುಮತ, ಅಗಸ, ಕುಂಬಾರ, ವಿಶ್ವಕರ್ಮ, ಈಡಿಗ, ಪಟ್ಟಸಾಲಿ, ಪಂಚಮಸಾಲಿ).

ಈ ಎಲ್ಲಾ ಸಮುದಾಯಗಳು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಈ ಸಮುದಾಯಗಳಿಗೆ ಅನ್ಯಾಯವಾಗುತ್ತಿದ್ದು, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ  ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರಮೇಶ್(ಕರವೇ), ಭಾವಸಾರ ಕ್ಷತ್ರಿಯ ಸಮಾಜದ ಮಧುಕುಮಾರ್, ಪ್ರವೀಣ್, ರಾಮಚಂದ್ರಪ್ಪ, ಪದ್ಮಸಾಲಿ ಸಂಘದ ಅಧ್ಯಕ್ಷ ಗೋವಿಂದಪ್ಪ, ಚಂದ್ರಶೇಖರ್, ಮಲ್ಲಿಕಾರ್ಜುನ್, ನಾರಾಯಣಪ್ಪ, ಜಾನಕಿರಾಮ್, ಈಡಿಗ ಸಮುದಾಯದ ಶ್ರೀನಿವಾಸ ಇದ್ದರು.

***

‘ಪ್ರವೇಶಕ್ಕೊಂದು, ಸಾಲಕ್ಕೊಂದು!’

‘ಪ್ರವರ್ಗ 2 ಬಿಗೆ ಸೇರುವ ಜಾತಿಯವರು 2 ಎ ಪ್ರಮಾಣ ಪತ್ರ ಪಡೆದು ಸರ್ಕಾರಿ ಕೋಟಾದ ಅಡಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಕೆಲಸ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಶಿಕ್ಷಣ ಸಾಲವನ್ನು ಪಡೆದಿದ್ದಾರೆ. ವಿಚಿತ್ರವೆಂದರೆ, ವ್ಯಕ್ತಿಯೊಬ್ಬರು ಸರ್ಕಾರಿ ಕೋಟಾದಡಿ ಕಾಲೇಜು ಪ್ರವೇಶಕ್ಕಾಗಿ ಪ್ರವರ್ಗ 2ಎ ಪಡೆದಿದ್ದು, ಅದೇ ವ್ಯಕ್ತಿ ಶಿಕ್ಷಣ ಸಾಲಕ್ಕಾಗಿ ತನ್ನ ಮೂಲ 2ಬಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ 2ಎ/3ಎ/3ಬಿ/ಸಿ1 ಸೇರುವ ಜಾತಿ ಮತ್ತು ಒಳ ಪಂಗಡಗಳಿಗೆ ಅನ್ಯಾಯವಾಗಿದೆ’ ಎಂದು ಪ್ರಭಾಕರ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.