ADVERTISEMENT

ಸೂರಗೊಂಡನಕೊಪ್ಪ ಯಾತ್ರಾಸ್ಥಳವಾಗಿ ಅಭಿವೃದ್ಧಿ

ಸಂತ ಸೇವಾಲಾಲ್‌ ಜಯಂತ್ಯುತ್ಸವದಲ್ಲಿ ಸಚಿವ ರುದ್ರಪ್ಪ ಲಮಾಣಿ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 6:48 IST
Last Updated 15 ಫೆಬ್ರುವರಿ 2017, 6:48 IST
ಹೊನ್ನಾಳಿ ತಾಲ್ಲೂಕು ಭಾಯ್‌ಗಡ ಸೂರಗೊಂಡನಕೊಪ್ಪದಲ್ಲಿ ಮಂಗಳವಾರ ನಡೆದ ಸಂತ ಸೇವಾಲಾಲ್‌ ಅವರ 278ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ಭಕ್ತಗಣ.
ಹೊನ್ನಾಳಿ ತಾಲ್ಲೂಕು ಭಾಯ್‌ಗಡ ಸೂರಗೊಂಡನಕೊಪ್ಪದಲ್ಲಿ ಮಂಗಳವಾರ ನಡೆದ ಸಂತ ಸೇವಾಲಾಲ್‌ ಅವರ 278ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ಭಕ್ತಗಣ.   

ನ್ಯಾಮತಿ: ಬಂಜಾರ ಸಮುದಾಯದ ಏಕೈಕ ಜಗದ್ಗುರು ಸಂತ ಸೇವಾಲಾಲ್ ಅವರ ಜನ್ಮಸ್ಥಳವನ್ನು ಪವಿತ್ರ ಯಾತ್ರಾ ಸ್ಥಳವನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ಜವಳಿ ಹಾಗೂ ಮುಜರಾಯಿ ಸಚಿವ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಎಂ.ಲಮಾಣಿ ಭರವಸೆ ನೀಡಿದರು.

ಸಮೀಪದ ಭಾಯಗಡ್‌ ಸೂರಗೊಂಡನ ಕೊಪ್ಪದಲ್ಲಿ ಮಂಗಳವಾರ ಸಂತ ಸೇವಾಲಾಲ್‌ ಅವರ 278ನೇ ಜಯಂತ್ಯುತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಪ್ರಾಸ್ತಾವಿಕ ಮಾತನಾಡಿದರು.

ಹಿಂದೆ ಮಟ್ಟಿಯ ರೂಪದಲ್ಲಿದ್ದ ಜನ್ಮಸ್ಥಳವನ್ನು ಪವಿತ್ರ ಯಾತ್ರಾ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ₹ 1 ಕೋಟಿ ಅನುದಾನ ನೀಡಿದ್ದರು, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹12 ಕೋಟಿಗಿಂತ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದು, 13.5 ಎಕರೆ  ಜಮೀನು ಮಂಜೂರಾತಿ ನೀಡಿದ್ದಾರೆ. ಈಗ ಬಯಲು ರಂಗಮಂದಿರ, ಗೆಸ್ಟ್‌ಹೌಸ್‌, ಮೂರು ಅಂತಸ್ತಿನ ಮಂದಿರ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಮಾಡಿ, ಜನ್ಮಸ್ಥಳಕ್ಕೆ ಕಾಯಂ ಆಗಿ 200 ಕೆವಿ ವಿದ್ಯುತ್‌ ಪರಿವರ್ತಕ, ಸಮಾಜದಿಂದ ಕೆಪಿಎಸ್‌ಸಿ ಮತ್ತು ವಿಶ್ವವಿದ್ಯಾಲಯಕ್ಕೆ  ಕುಲಪತಿ ಸ್ಥಾನ ಹಾಗೂ ಸಂತ ಸೇವಾಲಾಲ್‌ ಜನ್ಮ ದಿನ  ಫೆ. 14ರಂದು ಸರ್ಕಾರದ ವತಿಯಿಂದ ಜಯಂತಿ ಆಚರಿಸಲು ಅವಕಾಶ, ಅಲೆಮಾರಿ ಜನಾಂಗವಾಗಿರುವ ಲಂಬಾಣಿ ಮಕ್ಕಳಿಗೆ ಮೊರಾರ್ಜಿ ವಸತಿ ಶಾಲೆಯ ರೀತಿ 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ವರೆಗೆ ವಸತಿ ಶಾಲೆಯನ್ನು ತೆರೆಯುವಂತೆ ಮನವಿ ಮಾಡಿದರು.

ಬಂಜಾರ ಸಮುದಾಯದವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಸಮಾಜದ ಮುಖ್ಯವಾಹಿನಿಗೆ ತನ್ನಿ ಎಂದು ಅವರು ಕರೆ ನೀಡಿದರು. ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂಧನ ಸಚಿವ ಡಿ.ಕೆ. ಶಿವಕುಮಾರ, ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ, ಕುಡಚಿ ಶಾಸಕ ಪಿ. ರಾಜೀವ್‌, ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಜಿ.ಪಂ. ಅಧ್ಯಕ್ಷೆ ಉಮಾ ರಮೇಶ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಮಾತನಾಡಿದರು.

ಐರಣಿ ಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಸಿದ್ದಲಿಂಗದೇವರು, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಬಾಲರಾಜ್‌, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌.ಸುರೇಂದ್ರನಾಯ್ಕ, ತಾ.ಪಂ. ಅಧ್ಯಕ್ಷೆ ಸುಲೋಚನಮ್ಮ,  ಜಿ.ಪಂ. ಸದಸ್ಯ ಸುರೇಂದ್ರನಾಯ್ಕ, ಚಿನ್ನಿಕಟ್ಟೆ ಗ್ರಾಪಂ. ಅಧ್ಯಕ್ಷ ಎನ್‌.ಕೆ.ಬಸವರಾಜಪ್ಪ, ಜಲಜಾನಾಯ್ಕ, ಮನೋಹರ ಐನಾಪುರ, ರಾಮಪ್ಪ ಲಮಾಣಿ, ಥಾವರನಾಯ್ಕ, ಬಸವರಾಜನಾಯ್ಕ, ನೀಲಕಂಠ ರಾಠೋಡ್‌, ಬಿ. ಹೀರಾನಾಯ್ಕ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ, ಜಿ.ಪಂ. ಸಿಇಒ ಎಸ್‌.ಅಶ್ವತಿ, ಎಸ್‌ಪಿ ಭೀಮಾಶಂಕರ ಎಸ್‌. ಗುಳೇದ, ಡಾ.ಈಶ್ವರನಾಯ್ಕ, ಇಂದಿರಾ ದೇವನಾಯ್ಕ, ಶಿವಾನಾಯ್ಕ, ಸೇರಿದಂತೆ ವಿವಿಧ ಗಣ್ಯರು ಇದ್ದರು. ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ರಾಮಪ್ಪ ನಿರೂಪಿಸಿದರು.

ವ್ಯವಸ್ಥೆಗೆ ಮೆಚ್ಚುಗೆ
ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬಂದಿದ್ದ ಭಕ್ತಾದಿಗಳಿಗೆ ನೀರು, ವಸತಿ, ವಾಹನ ವ್ಯವಸ್ಥೆ ಕಲ್ಪಿಸಿದ್ದ ಜಿಲ್ಲಾಡಳಿತಕ್ಕೆ ಅತಿಥಿಗಳು ಹಾಗೂ ವ್ಯವಸ್ಥಾಪಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರಿಂದ ಹಿಡಿದು ಕಾರ್ಯಕ್ರಮದಲ್ಲಿ ಸ್ವಾಗತಿಸಿದ ರಾಘವೇಂದ್ರ ನಾಯ್ಕ ಕೂಡ ಜಿಲ್ಲಾಡಳಿತದ ನಡೆಸಿದ್ದ ಪೂರ್ವಸಿದ್ಧತೆಗಳ ಬಗ್ಗೆ ವಿಶೇಷವಾಗಿ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿದರು.

ADVERTISEMENT

ಮೂರು ಗಂಟೆ ತಡ!
ಮಧ್ಯಾಹ್ನ 2.30ಕ್ಕೆ ಆರಂಭವಾಗಬೇಕಾಗಿದ್ದ ಸಭಾ ಕಾರ್ಯಕ್ರಮ ಆರಂಭವಾಗಿದ್ದು ಸಂಜೆ 5.30ಕ್ಕೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬರುವುದು ತಡವಾಗಿದ್ದರಿಂದ ಕಾರ್ಯಕ್ರಮದ ಉದ್ಘಾಟನೆ ಮೂರು ಗಂಟೆ ವಿಳಂಬವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.