ADVERTISEMENT

ಸ್ವಚ್ಛಭಾರತ್‌: ಮೊಳಕಾಲ್ಮುರು ಪ್ರಥಮ

‘ಜಿಯೋಟ್ಯಾಗ್‌’ನಲ್ಲಿ ದೇಶದಲ್ಲಿ ಕರ್ನಾಟಕ ಪ್ರಥಮ, ಜಿಲ್ಲೆಗೆ 26ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 25 ಮೇ 2017, 6:11 IST
Last Updated 25 ಮೇ 2017, 6:11 IST
ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛಭಾರತ್‌ ಯೋಜನೆಯಡಿ ಜಿಯೋಟ್ಯಾಗ್‌ ಜಿಪಿಎಸ್‌ ಆಗಿರುವ ಶೌಚಾಲಯ.
ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛಭಾರತ್‌ ಯೋಜನೆಯಡಿ ಜಿಯೋಟ್ಯಾಗ್‌ ಜಿಪಿಎಸ್‌ ಆಗಿರುವ ಶೌಚಾಲಯ.   

ಮೊಳಕಾಲ್ಮುರು: ಸ್ವಚ್ಛಭಾರತ್‌ ಯೋಜನೆಯಲ್ಲಿ ನಿರ್ಮಿಸಿರುವ ಶೌಚಾಲಯಗಳ ಮಾಹಿತಿಯನ್ನು ಜಿಪಿಎಸ್ ಮೂಲಕ ಅಂತರ್ಜಾಲಕ್ಕೆ ಅಪ್‌ಲೋಡ್‌ ಮಾಡುವ ಕಾರ್ಯದಲ್ಲಿ (ಜಿಯೋ ಟ್ಯಾಗ್‌) ಮೊಳಕಾಲ್ಮುರು ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ.

ಯೋಜನೆ ಸೌಲಭ್ಯ ದುರ್ಬಳಕೆ ಹಾಗೂ ಮರು ಪಡೆಯಬಹುದಾದ ಸಾಧ್ಯತೆಯನ್ನು ತಪ್ಪಿಸುವ ಉದ್ದೇಶದಿಂದ ಸ್ವಚ್ಛಭಾರತ್‌ ಅಭಿಯಾನದಲ್ಲಿ ಈಗಾಗಲೇ ನಿರ್ಮಿಸಿರುವ ಹಾಗೂ ನಿರ್ಮಿಸಲಿರುವ ಶೌಚಾಲಯ ಪೂರ್ಣ ಮಾಹಿತಿಯನ್ನು ಅಪ್‌ಲೋಡ್‌ ಮಾಡುವ ಕಾರ್ಯ ಇದಾಗಿದೆ. ಇದಕ್ಕೆ ‘ ಜಿಯೋ ಟ್ಯಾಗ್‌’ ಎಂದು ಹೆಸರಿಡಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಿ.ಎನ್‌. ಚಂದ್ರಶೇಖರ್‌ ಹೇಳಿದರು.

ಅಂಕಿ–ಅಂಶಗಳ ಪ್ರಕಾರ ‘ಜಿಯೋ ಟ್ಯಾಗ್‌’ ಪ್ರಗತಿಯಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ, ಚಿತ್ರದುರ್ಗ ಜಿಲ್ಲೆ 26 ನೇ ಸ್ಥಾನದಲ್ಲಿದೆ.

ಮೊಳಕಾಲ್ಮುರು  ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ನಂತರ ಸ್ಥಾನದಲ್ಲಿ ಹಿರಿಯೂರು, ಚಳ್ಳಕೆರೆ ತಾಲ್ಲೂಕುಗಳಿವೆ. ಹೊಸದುರ್ಗ ಕೊನೇಯ ಸ್ಥಾನದಲ್ಲಿದೆ ಎಂದು ಹೇಳಿದರು.

ಮೊಳಕಾಲ್ಮುರು ತಾಲ್ಲೂಕಿನಲ್ಲಿ 6,882 ಗುರಿಗೆ 6,287 ಶೌಚಾಲಯ ‘ಜಿಯೋಟ್ಯಾಗ್‌’ ಮಾಡಿ ಶೇ 92.7 ಸಾಧನೆ ಮಾಡಲಾಗಿದೆ. 16 ಗ್ರಾಮ ಪಂಚಾಯ್ತಿ ಪೈಕಿ ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಹಾನಗಲ್‌, ದೇವಸಮುದ್ರ, ಸೇರಿದಂತೆ 10 ಪಂಚಾಯ್ತಿಗಳು ಶೇ 100 ಗುರಿ ಸಾಧಿಸಿವೆ. ತುಮಕೂರ್ಲಹಳ್ಳಿ ಪಂಚಾಯ್ತಿ ಶೇ 76.04 ಸಾಧನೆ ಮಾಡಿ ಕೊನೇಯ ಸ್ಥಾನದಲ್ಲಿದೆ ಎಂದು ಚಂದ್ರಶೇಖರ್ ತಿಳಿಸಿದರು.
– ಕೊಂಡ್ಲಹಳ್ಳಿ ಜಯಪ್ರಕಾಶ

ಅಕ್ಟೋಬರ್‌ ಒಳಗೆ ಬಯಲು ಶೌಚ ಮುಕ್ತ..
ತಾಲ್ಲೂಕನ್ನು ಅಕ್ಟೋಬರ್ 2 ರ ಒಳಗಾಗಿ ಬಯಲು ಶೌಚ ಮುಕ್ತ ತಾಲ್ಲೂಕಾ ಗಿಸಲು ಕ್ರಮ ಕೈಗೊಳ್ಳಲಾಗಿದೆ. 16,373 ಶೌಚಾಲಯ ನಿರ್ಮಾಣ ಬಾಕಿ ಇದ್ದು ಇದರಲ್ಲಿ 11,490 ಶೌಚಾಲಯ ಕ್ರಿಯಾಯೋಜನೆಗೆ ಅನುಮತಿ ನೀಡಲಾಗಿದೆ. ಉಳಿಕೆ 4,872 ಗುರಿಗೆ ಅನುಮತಿ ನೀಡಲಾಗುವುದು.

ಒಟ್ಟು 28,450 ಶೌಚಾಲಯ ನಿರ್ಮಾಣ ಗುರಿ ಹೊಂದಲಾಗಿತ್ತು, 2014–15ರಲ್ಲಿ 3166, 2015–16ರಲ್ಲಿ 1149, 2016–17 ರಲ್ಲಿ 2467 ನಿರ್ಮಾಣ ಮಾಡಲಾಗಿದೆ ಎಂದು ಇಒ ಚಂದ್ರಶೇಖರ್‌ ಮಾಹಿತಿ ನೀಡಿದರು .

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.