ADVERTISEMENT

ಹಣವಿಲ್ಲದೆ ಬದುಕಬಹುದು; ನೀರಿಲ್ಲದೆ ಸಾಧ್ಯವೇ ?

ಸಮಾಗಮ್ 2K18 ಕಾರ್ಯಕ್ರಮದಲ್ಲಿ ಡಾ. ವಾಸುದೇವಭಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 9:56 IST
Last Updated 23 ಮಾರ್ಚ್ 2018, 9:56 IST

ಚಿತ್ರದುರ್ಗ: ಮನುಷ್ಯ ಹಣ ಇಲ್ಲದಿದ್ದರೂ ಬದುಕಬಲ್ಲ. ಆದರೆ, ನೀರಿಲ್ಲದೆ ಜೀವಿಸಲು ಸಾಧ್ಯವೇ ಎಂದು ಕುದಾಪುರ ಐಐಎಸ್‌ಸಿ ಕೇಂದ್ರದ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಪ್ರಶ್ನಿಸಿದರು.

ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ‘ವಿಶ್ವ ಜಲ ದಿನಾಚರಣೆ’ ಅಂಗವಾಗಿ ಹಮ್ಮಿಕೊಂಡಿದ್ದ ಸಮಾಗಮ್ 2K18 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ನೀರಿನ ಹನಿಯು ಅಮೂಲ್ಯವಾಗಿದ್ದು, ಮಳೆ ನೀರು ಸಂಗ್ರಹಕ್ಕೂ ಹೆಚ್ಚಿನ ಮಹತ್ವ ನೀಡಬೇಕು. ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ವ್ಯಾಪಕವಾಗಿ ನಡೆಯಬೇಕು. ಆಗ ಮಾತ್ರ ನೀರಿನ ಸಮಸ್ಯೆ ನಿಭಾಯಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

ನಗರ ಪ್ರದೇಶಗಳಲ್ಲಿ ನಿತ್ಯ ಸಹಸ್ರಾರು ಲೀಟರ್ ನೀರು ಸೋರಿಕೆಯಾಗುತ್ತಿದ್ದು, ಅದನ್ನು ತಡೆಗಟ್ಟಲು ಸರ್ಕಾರದೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ. ನಗರಗಳಲ್ಲಿ ಕುಡಿಯುವ ನೀರನ್ನೇ ಇತರೆ ಉಪಯೋಗಕ್ಕೂ ಬಳಸುತ್ತಿರುವ ಕಾರಣದಿಂದಾಗಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಕುಡಿಯುವ ನೀರನ್ನು ಪ್ರತ್ಯೇಕವಾಗಿ ಪೂರೈಕೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಐಕ್ಯೂಎಸಿ ಸಂಚಾಲಕ ಡಾ.ಕೆ.ಕೆ. ಕಮಾನಿ ಮಾತನಾಡಿ, ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಹಿಂದಿನಿಂದಲೂ ಹೋರಾಟ ನಡೆಯುತ್ತಿದ್ದು, ಉದ್ಯೋಗಸ್ಥರು ನೀರಿಗಾಗಿ ಕೆಲಸ ಬಿಟ್ಟು ಅಲೆದಾಡುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ. ಜನರಲ್ಲಿ ನೀರಿನ ಸಾಕ್ಷರತೆ ಹೆಚ್ಚಿಸಬೇಕು. ಮರುಬಳಕೆಗೆ ಮುಂದಾಗದಿದ್ದರೆ, ಮುಂದಿನ ದಿನಗಳಲ್ಲಿ ಬದುಕು ದುಸ್ತರವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಭೂಮಿಯಲ್ಲಿರುವ ನೀರಿನ ಪ್ರಮಾಣದ ಕುರಿತು ಜನರಿಗೆ ನಿಖರವಾದ ಮಾಹಿತಿ ತಿಳಿದಿಲ್ಲ. 2025 ರ ವೇಳೆಗೆ ಪ್ರಪಂಚದ 34 ಬಿಲಿಯನ್ ಜನರು ನೀರಿನ ಕೊರತೆಯಿಂದ ವಲಸೆ ಹೋಗಬೇಕಾಗುತ್ತದೆ. ನೀರಿಲ್ಲದ ದೇಶಗಳನ್ನು ಜನ ತೊರೆಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆರೆ, ಬಾವಿ, ನದಿಗಳನ್ನು ಸಂರಕ್ಷಿಸಿಕೊಳ್ಳದಿದ್ದರೆ  ನಾಶಕ್ಕೆ ಎಡೆಮಾಡಿಕೊಟ್ಟಂತೆ. ಆದ್ದರಿಂದ ಜಲ ಮೂಲಗಳ ರಕ್ಷಣೆಗೆ ಮುಂದಾಗಬೇಕು. ಪರಿಸರ ದೂಷಿಸುವುದರಿಂದ ಪರಿಹಾರ ಖಂಡಿತ ಸಿಗುವುದಿಲ್ಲ. ಬದಲಾಗಿ ತಪ್ಪುಗಳನ್ನು ತಿದ್ದಿಕೊಂಡು ನೀರಿನ ಸದ್ಬಳಕೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯೆ ಪ್ರೊ.ಟಿ.ವಿ.ಸಣ್ಣಮ್ಮ ಮಾತನಾಡಿ,  ನೀರಿನ ಮೂಲಗಳನ್ನು ಸಮೃದ್ಧಿಗೊಳಿಸಬೇಕು. ನೀರಿನ ಮಿತಬಳಕೆ ಹೆಚ್ಚಿಸಿ ಕೃಷಿ, ಗೃಹಕಾರ್ಯ ಹಾಗೂ ಕಾರ್ಖಾನೆಗಳಲ್ಲಿ ನೀರಿನ ಮರುಬಳಕೆ ಬಗ್ಗೆ ಸುಧಾರಣೆ ತರಬೇಕು ಎಂದರು.

ಡಾ.ಡಿ. ನಾಗರಾಜ್, ಡಾ.ಎ.ವಿ. ಬಣಕಾರ್, ಡಾ. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.