ADVERTISEMENT

‘ಹವಾಮಾನಕ್ಕೆ ಹೊಂದುವ ಬೆಳೆ ಬೆಳೆಯಿರಿ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 5:55 IST
Last Updated 14 ಜುಲೈ 2017, 5:55 IST

ಹಿರಿಯೂರು: ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕ ಮಾಡಿಕೊಂಡಿರುವ ಪ್ರಗತಿಪರ ರೈತರಿಂದ ಮಾಹಿತಿ ಪಡೆದು ಕೃಷಿ ಚಟುವಟಿಕೆ ನಡೆಸಬೇಕು ಎಂದು  ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್.ಗೌಡ ಸಲಹೆ ನೀಡಿದರು.

ತಾಲ್ಲೂಕಿನ ಬಬ್ಬೂರು ಫಾರ್ಮ್‌ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಪ್ರಗತಿಪರ ರೈತರಿಂದ ರೈತರಿಗಾಗಿ ತರಬೇತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹ ಸಂಶೋಧನಾ ನಿರ್ದೇಶಕ ಡಾ.ಡಿ.ಚಂದ್ರಪ್ಪ, ‘ರೈತರು ಪ್ರಾಚೀನ ಕೃಷಿ ಪದ್ಧತಿ ಬಿಟ್ಟು, ಮಣ್ಣು ಪರೀಕ್ಷೆ ಮಾಡಿಸಿ, ಇಲ್ಲಿನ ಹವಾಮಾನಕ್ಕೆ, ಮಳೆಯ ಪ್ರಮಾಣಕ್ಕೆ ಹೊಂದಿಕೆಯಾಗುವ ಬೆಳೆ ಬೆಳೆಯಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಮಾತ್ರ ಕೃಷಿಯಲ್ಲಿ ಲಾಭ ಮಾಡಿಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಸ್.ಓಂಕಾರಪ್ಪ, ಪ್ರಗತಿಪರ ರೈತ ದೇವರಮರಿಕುಂಟೆ ದಯಾನಂದಮೂರ್ತಿ ಅವರು ವಿವಿಧ ಬೆಳೆಗಳಲ್ಲಿ ನೀರು ನಿರ್ವಹಣೆ, ಬೆಳೆ ಪದ್ಧತಿಗಳು, ಹೈನುಗಾರಿಕೆ, ಕುರಿ ಸಾಕಾಣಿಕೆಯ ಬಗ್ಗೆ ಮಾಹಿತಿ ನೀಡಿದರು. 

ಪ್ರಗತಿಪರ ರೈತಮಹಿಳೆ ವದ್ದಿಕೆರೆ ನಾಗವೇಣಿ ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿರುವ ಕೃಷಿ, ತೋಟಗಾರಿಕೆ, ಅರಣ್ಯ, ಹುಲ್ಲಿನ ಬೆಳೆಗಳು, ಕೃಷಿಹೊಂಡ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಜೇನುಸಾಕಾಣಿಕೆ, ಬಯೋಡೈಜಸ್ಟರ್, ಎರೆಹುಳು ಘಟಕ, ಮೀನು ಸಾಕಾಣಿಕೆ ಮತ್ತು ಹೈನುಗಾರಿಕೆ ತಂತ್ರಜ್ಞಾನ ವಿವರಿಸಿದರು.

ಗೀತಾಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಕಾಶ್ ಕೆರೂರ ಸ್ವಾಗತಿಸಿದರು. ಡಾ. ರುದ್ರಗೌಡ ವಂದಿಸಿದರು. ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಪಾತಲಿಂಗಪ್ಪ, ಕೃಷಿ ಅಧಿಕಾರಿ ಮುಸ್ತಾಫ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.