ADVERTISEMENT

ಹೊರಕೆರೆ ದೇವರಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಣೇಹಳ್ಳಿ ಸ್ವಾಮೀಜಿ ಚಾಲನೆ

‘ಅನಕ್ಷರಸ್ಥರನ್ನೂ ಆವರಿಸಿರುವ ಇಂಗ್ಲಿಷ್‌ ವ್ಯಾಮೋಹ’

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 11:38 IST
Last Updated 30 ಜುಲೈ 2014, 11:38 IST
ಹೊಳಲ್ಕೆರೆ ತಾಲ್ಲೂಕು ಹೊರಕೆರೆ ದೇವರಪುರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಜಿ.ಎನ್‌.ಬಸವರಾಜಪ್ಪ, ಚಂದ್ರಶೇಖರ ತಾಳ್ಯ ಹಾಜರಿದ್ದರು
ಹೊಳಲ್ಕೆರೆ ತಾಲ್ಲೂಕು ಹೊರಕೆರೆ ದೇವರಪುರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಜಿ.ಎನ್‌.ಬಸವರಾಜಪ್ಪ, ಚಂದ್ರಶೇಖರ ತಾಳ್ಯ ಹಾಜರಿದ್ದರು   

ಹೊಳಲ್ಕೆರೆ: ಗ್ರಾಮೀಣ ಭಾಗದ ಅನಕ್ಷರಸ್ಥರನ್ನೂ ಇಂಗ್ಲಿಷ್‌ ವ್ಯಾಮೋಹ ಆವರಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈಚೆಗೆ ಹಳ್ಳಿಗಳಲ್ಲೂ ಇಂಗ್ಲಿಷ್‌ ಕಾನ್ವೆಂಟ್‌ಗಳು ಹುಟ್ಟಿಕೊಂಡಿವೆ. ಹಳ್ಳಿಗಳ ರೈತರೂ ತಮ್ಮ ಮಕ್ಕಳನ್ನು ಇಂಗ್ಲಿಷ್‌ ಭಾಷೆಯಲ್ಲಿ ಓದಿಸುತ್ತಿದ್ದಾರೆ. ಸಾವಿರಾರು ರೂಪಾಯಿ ಶುಲ್ಕ ಕಟ್ಟಿ ದೂರದ ಪಟ್ಟಣದ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇಂಗ್ಲಿಷ್‌ ಕಲಿತರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬ ಭ್ರಮೆಯಲ್ಲಿ ಎಲ್ಲರೂ ಇದ್ದಾರೆ.

ಆದ್ದರಿಂದ ಸರ್ಕಾರ ಕನ್ನಡದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಭದ್ರತೆ ಕೊಡಬೇಕು. ಕನ್ನಡದ ಬಗ್ಗೆ ಭಾಷಣ ಮಾಡುವ ಸಾಹಿತಿಗಳು, ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿಸುತ್ತಾರೆ. ಅವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಓದಿಸಬೇಕು ಎಂಬ ಕಾನೂನು ರೂಪಿಸಬೇಕು. ಹಳ್ಳಿಗಳಲ್ಲಿ ಇನ್ನೂ ಕನ್ನಡ ಉಳಿದಿದ್ದು, ಮಾತೃಭಾಷೆಗೆ ಭವಿಷ್ಯ ರೂಪಿಸಬೇಕಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಮಾತನಾಡಿ, ಕನ್ನಡಕ್ಕೆ ಮುಂದೆ ಭವಿಷ್ಯ ಇಲ್ಲ ಎಂದು ಆತಂಕಪಡುವ ಅಗತ್ಯ ಇಲ್ಲ. ಸೂರ್ಯ, ಚಂದ್ರ ಇರುವವರೆಗೆ ಕನ್ನಡ ಬದುಕಿ ಉಳಿಯಲಿದೆ. ಈಚೆಗೆ ತಂತ್ರಜ್ಞಾನದಲ್ಲೂ ಕನ್ನಡದ ಬಳಕೆ ಆಗುತ್ತಿದೆ. ಕನ್ನಡ
ಪತ್ರಿಕೆಗಳು, ಟಿವಿ ಚಾನೆಲ್‌ಗಳು ಹೆಚ್ಚಾಗಿದ್ದು, ಓದುಗರು ಮತ್ತು ವೀಕ್ಷಕರ ಸಂಖ್ಯೆಯೂ ಹೆಚ್ಚಿದೆ.

ಕನ್ನಡದ ಕೃತಿಗಳು, ಜ್ಞಾನವನ್ನು ಇತರೆ ಭಾಷೆಗಳಿಗೆ ತರ್ಜುಮೆ ಮಾಡುವ ಮಟ್ಟಕ್ಕೆ ನಮ್ಮ ಭಾಷೆ ಬೆಳೆದಿದೆ. ಇಂಗ್ಲಿಷ್‌ ಅನ್ನು ಹೊಟ್ಟೆಪಾಡಿಗಾಗಿ ಮಾತ್ರ ಕಲಿಸುತ್ತಿದ್ದು, ನಮ್ಮತನ ಎಂದೂ ಹೋಗುವುದಿಲ್ಲ. ಮುಂದಿನ ತಿಂಗಳು ಅಮೆರಿಕದಲ್ಲಿ ಅಕ್ಕ ಸಮ್ಮೇಳನ ನಡೆಯಲಿದ್ದು, ಅಲ್ಲಿ ನಮ್ಮ ದಲಿತ ಗೀತೆಗಳು, ತಮಟೆ ವಾದ್ಯ ಮೊಳಗಲಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿದ್ದರೂ, ಯಾವುದೇ ಕನ್ನಡ ಶಾಲೆ  ಮುಚ್ಚಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ಕಟ್ಟಲು ₨ 10 ಲಕ್ಷ ಅನುದಾನ ನೀಡಲಾಗುವುದು ಎಂದರು.

ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಕವಿ ಚಂದ್ರಶೇಖರ ತಾಳ್ಯ ಮಾತನಾಡಿ, ‘ಕನ್ನಡಕ್ಕೆ ಗಂಡಾಂತರ ಕಾದಿರುವುದು
ಮರಾಠಿ, ತಮಿಳು, ತೆಲುಗಿನಿಂದ ಅಲ್ಲ. ನಮ್ಮವರಿಂದಲೇ ನಮ್ಮ ಭಾಷೆ ಅವನತಿಯತ್ತ ಸಾಗುತ್ತಿದೆ. ನಮ್ಮ ಅಡುಗೆ ಮನೆಗಳಲ್ಲಿ ಪರಭಾಷೆಗಳು ಸಾಮ್ರಾಜ್ಯ ಸ್ಥಾಪಿಸುತ್ತಿವೆ. ಭಾಷೆಯನ್ನು ಉಳಿಸಲು ಸಮ್ಮೇಳನಗಳನ್ನು ಮಾಡಿ ಜಾಗೃತಿ ಮೂಡಿಸುವ ದುಸ್ಥಿತಿ
ಬಂದಿದೆ. ನಾವು ಸಾಮ್ರಾಜ್ಯಶಾಯಿ ವ್ಯವಸ್ಥೆಯ ಭ್ರಮೆಯಿಂದ ಹೊರಬರಬೇಕು’ ಎಂದರು.

ಅಮೃತ ಸಾರ, ಮಳೆಹನಿ ಕೃತಿಗಳು ಮತ್ತು ಸುದ್ದಿರಶ್ಮಿ ಪತ್ರಿಕೆ ಬಿಡುಗಡೆ ಮಾಡಲಾಯಿತು. ಯುಗಧರ್ಮದ ರಾಮಣ್ಣ ಮತ್ತು
ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಹಾಡುಗಳಿಂದ ರಂಜಿಸಿದರು. ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ ಕುರಿತು ಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ 25 ಕವಿಗಳು ಸ್ವರಚಿತ ಕವನ ವಾಚಿಸಿದರು.

ಸಮ್ಮೇಳನಾಧ್ಯಕ್ಷ ಜಿ.ಎನ್‌.ಬಸವರಾಜಪ್ಪ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಎಂ.ಜಿ.ವೆಂಕಟೇಶ್‌, ಪ್ರೊ.ಡಿ.ಟಿ.ರಂಗಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗಿರಿ ಜಾನಕಲ್‌, ಇಂದಿರಾ ಕಿರಣ್‌, ಪಿ.ಆರ್‌.ಶಿವಕುಮಾರ್‌, ಲಕ್ಷ್ಮೀ ರುದ್ರಪ್ಪ, ಶಾರದಮ್ಮ ರೇವಣ್ಣ, ಎಂ.ಬಿ.ತಿಪ್ಪೇರುದ್ರಪ್ಪ, ರಂಗಯ್ಯ, ಶಿವಮೂರ್ತಿ, ಡಾ.ಕರಿಯಪ್ಪ ಮಾಳಿಗೆ, ರಮಾನಂದ್‌, ಡಾ.ನೆಲ್ಲಿಕಟ್ಟೆ ಸಿದ್ದೇಶ್‌, ತಾಳ್ಯದ ವೇದಮೂರ್ತಿ, ಕಿರಣ್‌ ಕುಮಾರ್‌ ಯಾದವ್‌, ಜಯಪ್ಪ ಹಾಜರಿದ್ದರು.

ಯಾರಿಂದ ಸಭೆಗೆ ಕಳೆ ?
ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಸಮಾರಂಭಕ್ಕೆ ಬರುತ್ತಿದ್ದಂತೆ ನಿರೂಪಕರು ‘ಇದುವರೆಗೆ ಸಮಾರಂಭಕ್ಕೆ ಕಳೆ ಬಂದಿರಲಿಲ್ಲ. ಸಚಿವರು ಬಂದ ನಂತರ ಕಳೆ ಬಂತು’ ಎಂದು ಹೊಗಳಿದರು. ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ ‘ಸಚಿವ ಆಂಜನೇಯ ಬರುವುದಕ್ಕೆ ಮೊದಲು ಸಮಾರಂಭದಲ್ಲಿ ಕಳೆ ಇರಲಿಲ್ಲವೆ? ಈಚೆಗೆ ಎಲ್ಲಾ ಸಮಾರಂಭಗಳಲ್ಲೂ ಜನಪ್ರತಿನಿಧಿಗಳನ್ನು ದೇವೇಂದ್ರನಂತೆ ಹೊಗಳುವುದು ರೂಢಿಯಾಗಿದೆ.

ಸಭೆಗೆ ಕಳೆ ಬರುವುದು ಪ್ರೇಕ್ಷಕರಿಂದಲೇ ಹೊರತು ರಾಜಕಾರಣಿಗಳಿಂದ ಅಲ್ಲ. ಜನಪರ ಕಾಳಜಿ ಇರುವವರು ಮಾತ್ರ ಸಮಾಜ ಕಟ್ಟುತ್ತಾರೆಯೇ ಹೊರತು, ಜನಪ್ರತಿನಿಧಿಗಳಲ್ಲ. ಸಂಘಟಕರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಇಂತಹ ಮಾತುಗಳಿಂದ ವೇದಿಕೆಯ ಮೇಲಿದ್ದವರಿಗೆ ಅಗೌರವ ಸೂಚಿಸಿದಂತೆ ಆಗುತ್ತದೆ’ ಎಂದು ಬುದ್ಧಿವಾದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.