ADVERTISEMENT

ಹೊಸದುರ್ಗ: ಈಜುಕೊಳದ ಸೇವೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:40 IST
Last Updated 23 ಮೇ 2017, 6:40 IST

ಹೊಸದುರ್ಗ:  ತಾಲ್ಲೂಕು ಕ್ರೀಡಾಂಗಣ ದಲ್ಲಿ ಇರುವ ಈಜುಕೊಳದ ಸೇವೆ ನೀರಿನ ಅಭಾವದಿಂದ ಸ್ಥಗಿತವಾಗಿದೆ. ಗೂಳಿಹಟ್ಟಿ ಡಿ.ಶೇಖರ್‌ ಯುವಜನ ಸೇವೆ, ಕ್ರೀಡೆ ಹಾಗೂ ಜವಳಿ ಖಾತೆ ಸಚಿವರಾಗಿದ್ದಾಗ ಇಲ್ಲಿನ 5 ಎಕರೆ ವಿಸ್ತೀರ್ಣದಲ್ಲಿ ಕೋಟ್ಯಂತರ ವೆಚ್ಚದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಿಂಥೆಟಿಕ್‌ ಟ್ರ್ಯಾಕ್‌, ಉದ್ದ ಜಿಗಿತ, ಶಾಟ್‌ಪುಟ್‌, ಜಾವಲಿನ್‌, ಬಾಸ್ಕೆಟ್‌ಬಾಲ್‌ ಮೈದಾನ, ಈಜುಕೊಳ, ಗರಡಿ ಮನೆ ನಿರ್ಮಿಸಿದ್ದರು.

ತಾಲ್ಲೂಕು ಮಟ್ಟದಲ್ಲಿ ಈ ರೀತಿಯ ಅತ್ಯಾಧುನಿಕವಾದ ಕ್ರೀಡಾ ವ್ಯವಸ್ಥೆ ನಿರ್ಮಾಣ ಆಗಿದ್ದು ಕ್ರೀಡಾಸಕ್ತರಿಗೆ ಸಂತಸವನ್ನುಂಟು ಮಾಡಿತ್ತು. ಆದರೆ ಸಿಂಥೆಟಿಕ್‌ ಟ್ರ್ಯಾಕ್‌ಗೆ ರಕ್ಷಣೆ ಇಲ್ಲವಾದ್ದ ರಿಂದ ವಾಯುವಿಹಾರಿಗಳ ಮೈದಾನ ವಾಗಿ ಪರಿವರ್ತನೆಯಾಗಿದೆ. ಇದರಿಂದ ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿರುವ ಅಂತರರಾಷ್ಟ್ರೀಯ ಮಟ್ಟದ ಟ್ರ್ಯಾಕ್‌ ಹಾಳಾಗುತ್ತಿದೆ.

ಈಜುಕೊಳದ ನೀರನ್ನು ಶುದ್ಧೀಕರಿಸಲು ಇಲ್ಲಿದ್ದ ಯಂತ್ರವನ್ನು ಅಧಿಕಾರಿಗಳು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇಷ್ಟು ಸಾಲದೆಂಬಂತೆ ನೀರಿನ ಅಭಾವವಿದೆ ಎಂಬ ಕಾರಣದಿಂದ ಕಳೆದ ಮಾರ್ಚ್‌ 29ರಿಂದಲೂ ಈಜುಕೊಳದ ಸೇವೆ ಸ್ಥಗಿತಗೊಳಿಸಿದ್ದಾರೆ. ಬಿಸಿಲಿನ ತಾಪ ಹೆಚ್ಚಾಗಿದ್ದು ಈಜುಪ್ರಿಯರಿಗೆ ಈಜಲು ಅವಕಾಶ ಕಲ್ಪಿಸಬೇಕಿದೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾ ಗಲಿ ಆಸಕ್ತಿ ವಹಿಸದಿರುವುದು ಬೇಸರದ ಸಂಗತಿ ಎನ್ನುತ್ತಾರೆ ಕ್ರೀಡಾಪಟುಗಳಾದ ನಾಗರಾಜು, ಶಿವಣ್ಣ, ಕುಮಾರ್‌.

ADVERTISEMENT

ಕ್ರೀಡಾಂಗಣದಲ್ಲಿ ನಿರ್ಮಾಣ ಆಗಬೇಕಿದ್ದ ಕೊಕ್ಕೊ, ಕಬಡ್ಡಿ, ವಾಲಿಬಾಲ್‌, ಥ್ರೋಬಾಲ್‌, ಬಾಲ್‌ಬ್ಯಾಡ್ಮಿಂಟನ್‌, ಟೆನಿಕಾಯ್ಟ್‌, ಫುಟ್‌ಬಾಲ್‌, ಹ್ಯಾಂಡ್‌ಬಾಲ್‌ ಆಟದ ಮೈದಾನ ಐದು ವರ್ಷ ಕಳೆದರೂ ನಿರ್ಮಾಣ ಆಗಿಲ್ಲ. ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಮೈದಾನದ ಸುತ್ತಲೂ ಸಮರ್ಪಕವಾಗಿ ತಡೆಗೋಡೆ ನಿರ್ಮಿಸಿಲ್ಲ. ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳುವ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಕ್ರೀಡಾಪಟುಗಳಿಗೆ ಬೇಕಾದ ಮೂಲಸೌಕರ್ಯ ಒದಗಿಸಲು ಮುಂದಾಗುತ್ತಿಲ್ಲ ಎಂಬುದು ಕ್ರೀಡಾಸಕ್ತರ ಅಳಲು.

ಇಲ್ಲಿ ನಡೆಯುವ ತಾಲ್ಲೂಕು ಮಟ್ಟದ ವಿವಿಧ ಕ್ರೀಡಾಕೂಟಕ್ಕೆ ಬರುವ ವಿದ್ಯಾರ್ಥಿಗಳು ಶೌಚ ಹಾಗೂ ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ದರೂ ಮೂಲಸೌಕರ್ಯ ಒದಗಿಸದಿರುವುದಕ್ಕೆ ಜನಪ್ರತಿನಿಧಿಗಳ ಅಸಡ್ಡೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬುದು ಅವರ ದೂರು.

ಇನ್ನಾದರೂ ಸಂಬಂಧಪಟ್ಟ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಜುಕೊಳಕ್ಕೆ ನೀರು ಹಾಯಿಸುವುದು ಸೇರಿದಂತೆ ಕ್ರೀಡಾಂಗಣಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು ಎಂಬುದು ಕ್ರೀಡಾಪಟುಗಳ ಮನವಿಯಾಗಿದೆ.
 

* *

ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಮೂಲಸೌಕರ್ಯ ಸಮಸ್ಯೆಯಿಂದ ಸೊರಗುತ್ತಿದೆ.
ಗೂಳಿಹಟ್ಟಿ ಡಿ.ಶೇಖರ್‌ ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.