ADVERTISEMENT

ಹೋಟೆಲ್‌ಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 6:55 IST
Last Updated 6 ಡಿಸೆಂಬರ್ 2017, 6:55 IST

ಹಿರಿಯೂರು: ಹೋಟೆಲ್ ಗಳಿಗೆ ಬರುವ ಗ್ರಾಹಕರಿಗೆ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನೇ ಕೊಡಬೇಕು. ಯಾರಾದರೂ ಬಿಸಿನೀರು ಕೇಳಿದರೆ ಇಲ್ಲವೆನ್ನಬಾರದು ಎಂದು ನಗರಸಭಾಧ್ಯಕ್ಷ ಟಿ. ಚಂದ್ರಶೇಖರ್ ಹೋಟೆಲ್ ಮಾಲೀಕರಿಗೆ ತಾಕೀತು ಮಾಡಿದರು. ಮಂಗಳವಾರ ಸ್ವಚ್ಛತೆ ನಿರ್ವಹಣೆ ಕುರಿತು ಹೋಟೆಲ್ ಮಾಲೀಕರಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೋಟೆಲ್ ಒಳಗೆ ಧೂಮಪಾನ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ನಾಮಫಲಕ ಹಾಕಬೇಕು. ಕಡ್ಡಾಯವಾಗಿ ಮೂತ್ರಾಲಯ, ಶೌಚಾಲಯ ಹೊಂದಿರಬೇಕು. ಜತೆಗೆ ನಿರ್ವಹಣೆ ಉತ್ತಮವಾಗಿರಬೇಕು. ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ನೆಲವನ್ನು ಕ್ರಿಮಿನಾಶಕ ಬಳಸಿ ಸ್ವಚ್ಛಗೊಳಿಸಬೇಕು. ಕಟ್ಟಡಕ್ಕೆ ಕನಿಷ್ಠ 6 ತಿಂಗಳಿಗೊಮ್ಮೆ ಸುಣ್ಣ ಬಣ್ಣ ಬಳಿಸಬೇಕು ಎಂದು ಅವರು ಸೂಚಿಸಿದರು.

‘ಆಹಾರ ಸರಬರಾಜು ಮಾಡುವವರು ಉಗುರು ಕತ್ತರಿಸಿಕೊಂಡಿರಬೇಕು. ಅಡುಗೆಗೆ ತಾಜಾ ತರಕಾರಿ ಬಳಸಬೇಕು. ಕೆಲಸಗಾರರಿಗೆ ಮಲಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಕಾಲ ಕಾಲಕ್ಕೆ ಉದ್ದಿಮೆ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು.

ADVERTISEMENT

ಆಹಾರ ಸಾಮಗ್ರಿಗಳ ದರಪಟ್ಟಿಯನ್ನು ಎಲ್ಲರಿಗೂ ಕಾಣುವಂತೆ ಹಾಕಬೇಕು. ಆಹಾರ ಸಾಮಗ್ರಗಿಗಳು ಇಲಿ, ಹೆಗ್ಗಣ, ಕ್ರಿಮಿ ಕೀಟಗಳಿಗೆ ಸಿಗದಂತೆ ಎಚ್ಚರ ವಹಿಸಬೇಕು. ವಾರಕ್ಕೊಮ್ಮೆ ನೀರಿನ ತೊಟ್ಟಿಗಳನ್ನು ತೊಳೆಯಬೇಕು. ಸ್ವಚ್ಛತೆಯ ಕಡೆಗೆ ಎಲ್ಲರೂ ಸೇರಿ ದಿಟ್ಟ ಹೆಜ್ಜೆ ಇಡೋಣ’ ಎಂದು ಚಂದ್ರಶೇಖರ್ ಮನವಿ ಮಾಡಿದರು. ಉಪಾಧ್ಯಕ್ಷೆ ಇಮ್ರಾನ್ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ದಾದಾಪೀರ್, ಪೌರಾಯುಕ್ತ ರಮೇಶ್ ಸುಣಗಾರ್ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.