ADVERTISEMENT

‘ಯುವಜನರಿಗೆ ಸೈನಿಕರು ಆದರ್ಶವಾಗಬೇಕು’

ಸಾಗರ: ಕಾರ್ಗಿಲ್ ವಿಜಯೋತ್ಸವ ನೆನಪಿನ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 9:21 IST
Last Updated 27 ಜುಲೈ 2016, 9:21 IST

ಸಾಗರ: ‘ಯುವಜನರು ಸಿನಿಮಾ ನಟರು ಅಥವಾ ಕ್ರೀಡಾಪಟುಗಳನ್ನು ಆದರ್ಶ ವಾಗಿ ಪರಿಗಣಿಸುವುದಕ್ಕಿಂತ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ದೇಶದ ಗಡಿ ಕಾಯುವ ಸೈನಿಕರನ್ನು ಆದರ್ಶದ ಮಾದರಿಗಳನ್ನಾಗಿ ಕಾಣುವುದು ಸೂಕ್ತ’ ಎಂದು ಉಪನ್ಯಾಸಕ ಎ.ಎಸ್.ವಿನಾಯಕ ಹೇಳಿದರು.

ತಾಲ್ಲೂಕಿನ ಕೇಡಲಸರ ಗ್ರಾಮದ ರೂಪಶ್ರೀ ಪದವಿಪೂರ್ವ  ಹಾಗೂ ಕಾಕಲ್ ಪದವಿ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ನೆನಪಿನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೈನಿಕರ ತ್ಯಾಗ ಹಾಗೂ ಬಲಿದಾನದ ಫಲವಾಗಿಯೇ ನಾವು ದೇಶದಲ್ಲಿ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದೇವೆ ಎನ್ನುವ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಸೈನಿಕರನ್ನು ಹಾಗೂ ಅವರ ಕುಟುಂಬದವರನ್ನು ಗೌರವಾದ ರಗಳಿಂದ ಕಾಣುವ ಮನೋಭಾವ ಬೆಳೆಯಬೇಕು ಎಂದರು.

ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಯುದ್ಧ ಭೂಮಿಯಲ್ಲಿ ಶೌರ್ಯ, ಪರಾಕ್ರಮ ಪ್ರದರ್ಶಿಸಿದ ಭಾರತೀಯ ಸೇನೆಯ ಯೋಧರನ್ನು ಎಷ್ಟು ಕೊಂಡಾಡಿದರೂ ಸಾಲದು. ಇಂತಹ ಸಂಗತಿಗಳೇ ನಮ್ಮ ದೇಶಭಕ್ತಿಯನ್ನು ಜಾಗೃತಗೊಳಿಸಲು ಕಾರಣವಾಗುತ್ತವೆ ಎಂದು ಹೇಳಿದರು.

ಯುವಜನರು ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಗೆ ಒಳಗಾಗಿ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳು ಒಡ್ಡುವ ಆಮಿಷಕ್ಕೆ ಬಲಿಯಾಗುವ ಅಪಾಯವನ್ನು ನೋಡು ತ್ತಿದ್ದೇವೆ. ದೇಶಭಕ್ತಿಯ ಸಂದೇಶವನ್ನು ಅವರಲ್ಲಿ ಜಾಗೃತಗೊಳಿಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ಪ್ರಾಂಶುಪಾಲ  ಎ.ಎಸ್.ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪೂರ್ಣಿಮಾ, ನಾಗರಾಜ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ  ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕರ ಭಟ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನೀಲ್  ಜಮಖಂಡಿ, ತಾಲ್ಲೂಕು ಕಾರ್ಯದರ್ಶಿ ಶ್ರೀನಿಧಿ ಕಲ್ಮನೆ ಹಾಜರಿದ್ದರು. ಅಮೂಲ್ಯ ಪ್ರಾರ್ಥಿಸಿದರು. ಅರ್ಪಿತಾ ಸ್ವಾಗತಿಸಿದರು. ಲಾವಣ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.