ADVERTISEMENT

120 ಅಡಿಗೆ 10 ಇಂಚು ನೀರು!

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 5:18 IST
Last Updated 19 ಜುಲೈ 2017, 5:18 IST
ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕ್‌ನಲ್ಲಿ ಮಂಗಳವಾರ ಕೊರೆಸಿದ ಕೊಳವೆಬಾವಿಯಿಂದ ನೀರು ಉಕ್ಕುತ್ತಿರುವುದನ್ನು ವೀಕ್ಷಿಸುತ್ತಿರುವ ನಗರಸಭೆ ಅಧ್ಯಕ್ಷ ಎಚ್.ಎನ್.ಮಂಜುನಾಥ ಗೊಪ್ಪೆ ಮತ್ತು ಸದಸ್ಯರು
ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕ್‌ನಲ್ಲಿ ಮಂಗಳವಾರ ಕೊರೆಸಿದ ಕೊಳವೆಬಾವಿಯಿಂದ ನೀರು ಉಕ್ಕುತ್ತಿರುವುದನ್ನು ವೀಕ್ಷಿಸುತ್ತಿರುವ ನಗರಸಭೆ ಅಧ್ಯಕ್ಷ ಎಚ್.ಎನ್.ಮಂಜುನಾಥ ಗೊಪ್ಪೆ ಮತ್ತು ಸದಸ್ಯರು   

ಚಿತ್ರದುರ್ಗ: ಕುಡಿಯುವ ನೀರು ಪೂರೈಕೆಗಾಗಿ ನಗರಸಭೆಯವರು ಇಲ್ಲಿನ ದಾವಣಗೆರೆ ರಸ್ತೆಯ ಯೂನಿಯನ್ ಪಾರ್ಕಿನಲ್ಲಿ  ಮಂಗಳವಾರ ಕೊರೆಸಿದ ಕೊಳವೆಬಾವಿಯಲ್ಲಿ 120 ಅಡಿಗೆ 10 ಇಂಚು ನೀರು ಲಭ್ಯವಾಗಿದೆ.

ಶಾಂತಿಸಾಗರ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡ ನಂತರ, ವಾಣಿವಿಲಾಸ ಸಾಗರ ಜಲಾಶಯದ ನೀರು ಆಶ್ರಯಿಸಿರುವ ನಗರಸಭೆ, ವಿವಿಧೆಡೆ ಹೊಸ ಕೊಳವೆಬಾವಿಗಳನ್ನು ಕೊರೆಸುತ್ತಿದೆ. ಅದರಲ್ಲಿ ಯೂನಿಯನ್ ಪಾರ್ಕ್‌ನಲ್ಲಿ ಕೊರೆಸಿದ ಕೊಳವೆಬಾವಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಲಭ್ಯವಾಗಿದೆ.

ಈಗಾಗಲೇ ಆ ಪಾರ್ಕ್‌ನಲ್ಲಿ ಮೂರು ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಎಲ್ಲದರಲ್ಲೂ ಮೂರರಿಂದ ನಾಲ್ಕು ಇಂಚಿನವರೆಗೂ ನೀರಿನ ಇಳುವರಿ ಲಭ್ಯವಾಗಿದೆ. ಈಗ ಕೊರೆಸಿರುವುದು ನಾಲ್ಕನೇ ಕೊಳವೆಬಾವಿ.

ADVERTISEMENT

ಕೊಳವೆಬಾವಿ ಕೊರೆಸುವ ವೇಳೆ ಹಾಜರಿದ್ದ ನಗರಸಭೆ ಅಧ್ಯಕ್ಷ ಎಚ್.ಎನ್. ಮಂಜುನಾಥ ಗೊಪ್ಪೆ ಮಾಧ್ಯಮಗಳಿಗೆ ಮಾಹಿತಿ ನೀಡಿ, ‘ಈ ಕೊಳವೆಬಾವಿಯ ನೀರನ್ನು ನಗರದ 4, 5, 7, 8 ಮತ್ತು 9ನೇ ವಾರ್ಡ್‌ಗೆ ಪೂರೈಸಲಾಗುತ್ತದೆ. ಮೊದಲು ಪಾರ್ಕ್‌ನಲ್ಲಿರುವ ಸಂಪ್‌ಗೆ ನೀರು ಭರ್ತಿ ಮಾಡಿಕೊಂಡ ನಂತರ ಬುರುಜನಹಟ್ಟಿ ಕೆಎಸ್‌ಆರ್ ಟ್ಯಾಂಕ್  (2 ಲಕ್ಷ ಲೀಟರ್‌), ಸಾವಧಾನ್ ಹಟ್ಟಿಯ ಮೇಕೆ ಬಂಡಿ ಟ್ಯಾಂಕ್ (3 ಲಕ್ಷ ಲೀ) ಹಾಗೂ ಏಕನಾಥೇಶ್ವರಿ ದೇವಸ್ಥಾನದ ಪಾದಗುಡಿ ಹಿಂಭಾಗದಲ್ಲಿರುವ 3 ಲಕ್ಷ ಲೀಟರ್ ಟ್ಯಾಂಕ್‌ಗಳಿಗೆ ಕೊಳವೆಬಾವಿಯಿಂದ ನೀರು ತುಂಬಿಸಿ, ಮನೆಗಳಿಗೆ ಪೂರೈಸಲಾಗುತ್ತದೆ. ಹಾಗಾಗಿ ಇನ್ನು ಮುಂದೆ ಆ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘10 ಇಂಚು ನೀರು ಸಿಕ್ಕಿದ್ದನ್ನು ಸಂಭ್ರಮಿಸುವುದಕ್ಕಿಂತ ಮಿತವಾಗಿ ಬಳಸಬೇಕು. ಭದ್ರಾ ಜಲಾಶಯ ಭರ್ತಿಯಾಗಿ ಶಾಂತಿಸಾಗರ ಜಲಾಶಯಕ್ಕೆ ನೀರು ಪೂರೈಕೆ ಆಗುವವರೆಗೂ ಐದು ವಾರ್ಡ್‌ಗಳಿಗೂ ಇದೇ ಕೊಳವೆಬಾವಿಯಿಂದ ಪೂರೈಕೆಯಾಗಬೇಕು’ ಎಂದರು. ನಗರಸಭೆ ಸದಸ್ಯ ಮಲ್ಲಿಕಾರ್ಜುನ್, ಪೌರಾಯುಕ್ತ ಚಂದ್ರಪ್ಪ, ನೀರು ಪೂರೈಕೆ ಹಾಗೂ ವಿದ್ಯುತ್ ಸರಬರಾಜು ವಿಭಾಗದ ಎಂಜಿನಿಯರ್ ಪ್ರಶಾಂತ್‌ಕುಮಾರ್‌ಶೆಟ್ಟಿ  ಹಾಜರಿದ್ದರು.

ಬರದಲ್ಲಿ ಇಷ್ಟು ನೀರು ಹೇಗೆ ಬರುತ್ತದೆ?
ಎಲ್ಲೆಡೆ ಸಾವಿರ ಅಡಿ ಕೊರೆದರೂ ನೀರು ಸಿಗದಿದ್ದಾಗ, ಈ ಜಾಗದಲ್ಲಿ ಇಷ್ಟು ಕಡಿಮೆ ಆಳದಲ್ಲಿ, ಹೆಚ್ಚು ನೀರು  ಹೇಗೆ ಸಿಕ್ಕಿದೆ... ಇದು ಎಲ್ಲರಲ್ಲೂ ಮೂಡುವ ಸಹಜ ಪ್ರಶ್ನೆ. ಅದಕ್ಕೆ ಜಲತಜ್ಞ ಎನ್. ಜೆ. ದೇವರಾಜರೆಡ್ಡಿ ಹೀಗೆ ಉತ್ತರಿಸುತ್ತಾರೆ.

‘ಯೂನಿಯನ್ ಪಾರ್ಕ್ ಇರುವ ಪ್ರದೇಶ ಇಳಿಜಾರಿನಲ್ಲಿದೆ. ಹಾಗಾಗಿ ಕೋಟೆ, ಸಿಹಿನೀರು ಹೊಂಡ ಮತ್ತು ಹೊಳಲ್ಕೆರೆ ರಸ್ತೆ ಭಾಗದಿಂದ ಹರಿಯುವ ಅಂತರ್ಜಲ ಇಲ್ಲಿ ಶೇಖರಣೆಯಾಗಿದೆ. ಆ ಪ್ರದೇಶದ ಸುತ್ತ ಕಡಿಮೆ ಆಳದಲ್ಲಿ ಹೆಚ್ಚು ನೀರು ಸಿಗುತ್ತದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಕಲ್ಯಾಣಿ ಇದ್ದು, ಅದರಲ್ಲಿ ಇವತ್ತಿಗೂ 35 ಅಡಿ ಆಳದಲ್ಲಿ ನೀರಿದೆ’ ಎನ್ನುತ್ತಾರೆ.

‘ಹೀಗೆ ಮೇಲ್ಭಾಗದಲ್ಲೇ ಸಿಗುವ ನೀರು ಅಂತರ್ಜಲವಾಗಿರುವುದಿಲ್ಲ. ಹಾಗೆಯೇ ಶಾಶ್ವತವೂ ಅಲ್ಲ. ಮಿತವಾಗಿ ಬಳಸುವುದೊಂದೇ ಪರಿಹಾರ’ ಎನ್ನುತ್ತಾರೆ. ‘ಈ ಭಾಗದ ಭೂಮಿಯಲ್ಲಿ ಬಂಡೆಗಳು ಹೆಚ್ಚಾಗಿವೆ. ಹೀಗಾಗಿ ಇಲ್ಲಿನ ನೀರಿನಲ್ಲಿ ಗಡುಸತನ ಪ್ರಮಾಣ 1,100 ಟಿಡಿಎಸ್ ಇರುತ್ತದೆ (400 ಟಿಡಿಎಸ್‌ಗಿಂತ ಕಡಿಮೆ ಇರಬೇಕು). ಇಂಥ ನೀರನ್ನು ಮಿದುವಾಗಿಸಿ ಕುಡಿಯಬೇಕು’ ಎಂದು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.