ADVERTISEMENT

18ರಿಂದ ನಾಮಪತ್ರ, ಫೆ.28ಕ್ಕೆ ಚುನಾವಣೆ

ಕಸಾಪ; ಮತದಾರರ ಪಟ್ಟಿ ಆಕ್ಷೇಪಣೆಗೆ 19 ಕೊನೆ ದಿನ; ಚುನಾವಣಾಧಿಕಾರಿ ಮಲ್ಲಿಕಾರ್ಜುನ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 11:28 IST
Last Updated 1 ಡಿಸೆಂಬರ್ 2015, 11:28 IST

ಚಿತ್ರದುರ್ಗ: ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕಾಗಿ ಫೆ.28, 2016ರಂದು ಚುನಾವಣೆ ನಡೆಸಲಾಗುವುದು’ ಎಂದು ಸಾಹಿತ್ಯ ಪರಿಷತ್ತಿನ ಜಿಲ್ಲಾ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ನಗರದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಹಾಲಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯವರ ಅಧಿಕಾರಾವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಜಿಲ್ಲೆ, ತಾಲ್ಲೂಕು, ರಾಜ್ಯಮಟ್ಟದಲ್ಲಿ ಹೊಸ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಾಗುತ್ತಿದೆ’ ಎಂದರು.

‘ಚುನಾವಣೆ ಸಂಬಂಧ ನ.30ರಂದು ಜಿಲ್ಲಾವಾರು ಮತದಾರ ಸದಸ್ಯರ ಕರಡು ಪಟ್ಟಿಯನ್ನು ಆಯಾ ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯ ಕುರಿತು ಆಕ್ಷೇಪಣೆ ಗಳಿದ್ದರೆ, ಡಿ.9ರೊಳಗೆ, ಆಯಾ ಜಿಲ್ಲಾ ಕೇಂದ್ರದಲ್ಲಿರುವ ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು’ ಎಂದರು.

‘ಜ.18ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಜ.25 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವರು ಜಿಲ್ಲಾ ಕೇಂದ್ರದ ತಹಶೀಲ್ದಾರ್ ಅವರಿಂದ (ಕಸಾಪ ಚುನಾವಣಾ ಅಧಿಕಾರಿಗಳು) ಅರ್ಜಿ ಪಡೆಯಬೇಕು.

ನಾಮಪತ್ರ ಸ್ವೀಕರಿಸುವ ದಿನಾಂಕಗಳಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ (ರಜಾದಿನಗಳನ್ನು ಹೊರತುಪಡಿಸಿ) ನಾಮಪತ್ರ ಸ್ವೀಕರಿಸ ಲಾಗುತ್ತದೆ. ನಾಮಪತ್ರ ಸ್ವೀಕಾರಕ್ಕೆ ಜ.25 ಕೊನೆದಿನ. ಅಂದು ಸಂಜೆ 5 ಗಂಟೆ ವರೆಗೂ ನಾಮಪತ್ರ ಸ್ವೀಕರಿಸಲಾಗುತ್ತದೆ’ ಎಂದು ವಿವರಿಸಿದರು.

‘ಜ.28ರಂದು ನಾಮಪತ್ರಗಳ ಪರಿಶೀಲನೆಗೆ ಕೊನೆ ದಿನ. ಆಯಾ ಜಿಲ್ಲಾ ಕೇಂದ್ರದ ತಾಲ್ಲೂಕು ತಹಶೀಲ್ದಾರರ ಕಚೇರಿಗಳಲ್ಲಿ ನಾಮಪತ್ರ ಪರಿಶೀಲನೆ ನಡೆಯುತ್ತದೆ. ಫೆ.1 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನ. ಅದೇ ದಿನ ಮಧ್ಯಾಹ್ನ ಮೂರು ಗಂಟೆಯ ನಂತರ ಕಣದಲ್ಲಿ ಉಳಿದ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಕೇಂದ್ರದ ತಾಲ್ಲೂಕು ಕಚೇರಿಯಲ್ಲಿ ಪ್ರಕಟಿಸಲಾಗುತ್ತದೆ’ ಎಂದು ತಿಳಿಸಿದರು.

ಗಡಿನಾಡು/ ಹೊರನಾಡು ಮತದಾರರಿಗೆ ಕೇಂದ್ರ ಚುನಾವಣಾ ಅಧಿಕಾರಿ ಕಚೇರಿಯಿಂದ ರಿಜಿಸ್ಟರ್ಡ್ ಅಂಚೆಯ ಮೂಲಕ ಮತಪತ್ರಗಳು ರವಾನೆಯಾಗಲಿದ್ದು, ಅದಕ್ಕೆ ಫೆ.12 ಕೊನೆ ದಿನವಾಗಿದೆ. ಫೆ.28ರಂದು ಜಿಲ್ಲೆಯ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ಸಾವಿರ ಮತದಾರರಿಗೆ ಒಂದು ಮತಗಟ್ಟೆ ಕೇಂದ್ರ ತೆರೆಯಲಾಗುತ್ತಿದೆ.

ಜಿಲ್ಲೆಯಲ್ಲಿ ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ ಸಾವಿರ ದಾಟಿದ ಮತದಾರರಿದ್ದು, ಈ ಎರಡು ಕಡೆ ಎರಡು ಮತಗಟ್ಟೆಗಳನ್ನು ತೆರೆಯಲಾ ಗುತ್ತದೆ. ಉಳಿದ ಎಲ್ಲ ತಾಲ್ಲೂಕುಗಳಲ್ಲಿ ಒಂದೊಂದು ಮತಗಟ್ಟೆಯಿರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಫೆ.28ರಂದು ಮತದಾನ ಮುಗಿದ ಬೆನ್ನಲ್ಲೇ ಮತ ಎಣಿಕೆ ಆರಂಭವಾಗಿ, ಫಲಿತಾಂಶವನ್ನು ಘೋಷಿಸಲಾಗುತ್ತದೆ. ಮತದಾನ ಮುಗಿದ ಕೂಡಲೇ ಎಲ್ಲ ತಾಲ್ಲೂಕು ಕೇಂದ್ರದ ಸಹಾಯಕ ಚುನಾವಣಾ ಅಧಿಕಾರಿಗಳು, ಮತ ಎಣಿಕೆ ವಿವರವನ್ನು ಅಧಿಕೃತ ನಮೂನೆ ಯಲ್ಲಿ ಜಿಲ್ಲಾ ಕೇಂದ್ರದ ಚುನಾವಣಾ ಅಧಿಕಾರಿಗೆ (ತಹಶೀಲ್ದಾರ್‌) ಕಳುಹಿಸಿ ಕೊಡುತ್ತಾರೆ. ಜಿಲ್ಲಾ ಕೇಂದ್ರದಲ್ಲಿರುವ ಕೇಂದ್ರ ಚುನಾವಣಾಧಿಕಾರಿ, ಇವೆಲ್ಲವನ್ನೂ ಸಂಗ್ರಹಿಸಿ, ಕ್ರೋಡೀಕರಿಸಿ, ಜಿಲ್ಲಾ ಘಟಕಗಳ ಅಧ್ಯಕ್ಷರ ಚುನಾವಣಾ ಅಂತಿಮ ಫಲಿತಾಂಶವನ್ನು ಘೋಷಿಸು ಸತ್ತಾರೆ.

ಗಡಿನಾಡು/ ಹೊರನಾಡು ಮತದಾರರು ರಿಜಿಸ್ಟರ್ಡ್ ಅಂಚೆಯ ಮೂಲಕ ಕಳುಹಿಸುವ ಮತಪತ್ರಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣಾ ಫಲಿತಾಂಶ ಪ್ರಕಟಿಸುವ ದಿನಾಂಕಕ್ಕೆ ಒಂದು ದಿನ ಮುಂಚಿತವಾಗಿ (ಮಾರ್ಚ್ 1, 2016ರಂದು, ಬೆಳಿಗ್ಗೆ 11 ಗಂಟೆಯೊಳಗೆ) ಮತಪತ್ರಗಳನ್ನು ಬೆಂಗಳೂರಿನ ಕೇಂದ್ರ ಪರಿಷತ್ತಿಗೆ ಸಲ್ಲಿಸಬೇಕು’ ಎಂದು ಹೇಳಿದರು.

‘ಮಾರ್ಚ್‌ 2ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಕೇಂದ್ರ ಚುನಾವಣಾಧಿಕಾರಿ ಮತ ಎಣಿಕೆ ಮಾಡಿ ಪರಿಷತ್ತಿನ ಅಧ್ಯಕ್ಷರ ಆಯ್ಕೆ ಯನ್ನು ಘೋಷಿಸುತ್ತಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.