ADVERTISEMENT

29ಕ್ಕೆ ರೈತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 25 ಮೇ 2017, 6:05 IST
Last Updated 25 ಮೇ 2017, 6:05 IST

ಚಿತ್ರದುರ್ಗ: ‘ಅಖಂಡ ಕರ್ನಾಟಕ ರೈತ ಸಂಘದಿಂದ ಮೇ 29ರಂದು ಬೆಳಿಗ್ಗೆ10 ಕ್ಕೆ ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ರಾಜ್ಯ ಮಟ್ಟದ ಬೃಹತ್ ರೈತರ ಸಮಾವೇಶ ಆಯೋಜಿಸಲಾಗಿದೆ’ ಎಂದು ರೈತ ಸಂಘದ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಸೋಮಗುದ್ದು ಕೆ.ರಂಗಸ್ವಾಮಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಮಾವೇಶ ಕುರಿತು ಮಾತನಾಡಿದ ಅವರು, ‘ಶಿವಮೂರ್ತಿ ಶರಣರು ರೈತರ ಸಮಾವೇಶದ ಸಾನಿಧ್ಯ ವಹಿಸುವರು. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಾಬಾಗೌಡ ಪಾಟೀಲ್, ಸಿನಿಮಾ ನಟ ಯಶ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಐದು ಸಾವಿರ ರೈತರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.

‘ಕೆರೆಹೂಳು ತೆಗೆಸಬೇಕು. ಬರ ಪರಿಹಾರ ಹಾಗೂ ಬೆಳೆ ವಿಮೆಯನ್ನು ಸಮರ್ಪಕವಾಗಿ ವಿತರಿಸಬೇಕು. ಬೆಳೆ ವಿಮೆ ಕಂತನ್ನು ಸರ್ಕಾರವೇ ಭರಿಸಬೇಕು. ರೈತರ ಮಕ್ಕಳಿಗೆ ಶೇ 10 ಕೃಪಾಂಕ ನೀಡಬೇಕು. ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣ ಗೊಳಿಸಬೇಕು. ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು.

ಬರಗಾಲದಿಂದ ಒಣ ಗಿರುವ ಒಂದು ಎಕರೆ ತೆಂಗು ಬೆಳೆಗೆ ₹1.5 ಲಕ್ಷ ಹಾಗೂ ಒಂದು ಎಕರೆ ಅಡಿಕೆ ಬೆಳೆಗೆ ₹ 2.5 ಲಕ್ಷ ತಾತ್ಕಾಲಿಕ ಪರಿಹಾರ ನೀಡಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿರುವ ಪ್ರಧಾನಿ ನರೇಂದ್ರಮೋದಿ ರಾಜ್ಯದ ರೈತರ ಸಾಲ ಯಾಕೆ ಮನ್ನಾ ಮಾಡ ಬಾರದು ಎಂದು ಸಮಾವೇಶದಲ್ಲಿ ಪ್ರಶ್ನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಕುರುಬರಹಳ್ಳಿ ಶಿವಣ್ಣ, ಪ್ರಧಾನ ಕಾರ್ಯ ದರ್ಶಿ ಎಚ್.ಗಿರೀಶ್‌ರೆಡ್ಡಿ, ತಾಲೂಕು ಅಧ್ಯಕ್ಷ ಎಂ.ಸಿದ್ದಪ್ಪ, ಕಾರ್ಯದರ್ಶಿ ಷಣ್ಮುಖಪ್ಪ, ಮುರುಗೇಶ್, ಗೌರವಾಧ್ಯಕ್ಷ ನಾರಪ್ಪ, ಸಂಘಟನಾ ಕಾರ್ಯದರ್ಶಿ ಎಲ್.ಬಸವರಾಜ್, ಸಂಚಾಲಕ ಸತೀಶ್‌, ಮೇಘರಾಜು, ಶಿವಕುಮಾರ್, ಗುರು ಸಿದ್ದಣ್ಣ, ಮಹದೇವಪ್ಪ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.