ADVERTISEMENT

₹ 4.57 ಕೋಟಿ ವೆಚ್ಚದಲ್ಲಿ ಡಾಂಬರು ರಸ್ತೆ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಶಾಸಕ ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 5:50 IST
Last Updated 13 ಜುಲೈ 2017, 5:50 IST

ನಾಯಕನಹಟ್ಟಿ: ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ಗ್ರಾಮಗಳ ಪ್ರಗತಿ ಸಾಧ್ಯ ಎಂದು ಶಾಸಕ ಎಸ್.ತಿಪ್ಪೇಸ್ವಾಮಿ ಹೇಳಿದರು.

ಸಮೀಪದ ಮಲ್ಲೂರಹಟ್ಟಿ ಮತ್ತು  ಬೋಸೇದೇವರಹಟ್ಟಿ ಗ್ರಾಮದಲ್ಲಿ ಬುಧವಾರ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ಹಳ್ಳಿಗಳಿದ್ದು, ಎಲ್ಲೆಡೆ ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸಲಾಗಿದೆ. ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ಪ್ರತಿ ಹಳ್ಳಿಗಳಲ್ಲಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ನಗರ ಹಾಗೂ ಗ್ರಾಮಗಳ ಮಧ್ಯೆ ಸುಗಮ ಸಂಚಾರ ಏರ್ಪಡಲಿದೆ. ರಸ್ತೆ ಉತ್ತಮವಾಗಿದ್ದರೆ ಅಪಘಾತಗಳು ಕಡಿಮೆಯಾಗುತ್ತವೆ ಎಂದು ಅವರು ಹೇಳಿದರು.

ADVERTISEMENT

ಬೋಸೆದೇವರಹಟ್ಟಿ ಗ್ರಾಮದಿಂದ ನಾಯಕನಹಟ್ಟಿವರೆಗೆ ₹ 2.82 ಕೋಟಿ ವೆಚ್ಚದಲ್ಲಿ  3.5 ಕಿ.ಮೀ. ಉದ್ದ ಮತ್ತು ಜಾಗನೂರಹಟ್ಟಿ ಗ್ರಾಮದಿಂದ ಮಲ್ಲೂರ ಹಟ್ಟಿ ಗ್ರಾಮದವರೆಗೆ ₹ 1.75 ಕೋಟಿ ವೆಚ್ಚದಲ್ಲಿ 2.40 ಕಿ.ಮೀ. ಉದ್ದದ ಡಾಂಬರು ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತಿಪ್ಪಮ್ಮ, ತಾಲ್ಲೂಕು ಪಂಚಾಯ್ತಿ ಸದಸ್ಯ ತಿಪ್ಪೇಸ್ವಾಮಿ (ಜಂಬಣ್ಣ), ಪಟ್ಟಣ ಪಂಚಾಯ್ತಿ ಸದಸ್ಯೆ ಸಿದ್ದಲಿಂಗಮ್ಮ ನಾಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಕಾರ್ಯದರ್ಶಿ ಪಿ.ಶಿವಣ್ಣ, ಮುಖಂಡರಾದ ಬಿ.ತಿಪ್ಪೇಶ್, ತಿಪ್ಪೇರುದ್ರಸ್ವಾಮಿ, ಗೋವಿಂದಪ್ಪ, ಶಿವಲಿಂಗಪ್ಪ, ಕಾಕಸೂರಯ್ಯ, ಗುತ್ತಿಗೆದಾರ ಕೆ.ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.