ADVERTISEMENT

ಹೊಸ ವರ್ಷಕ್ಕೆ ಕೋಟೆಗೆ ಪ್ರವಾಸಿಗರ ಲಗ್ಗೆ!

ಮುರುಘಾ ಮಠ, ಚಂದ್ರವಳ್ಳಿಗೆ ಇಂದು ಸಾವಿರಾರು ಜನ ಬರುವ ನಿರೀಕ್ಷೆ

ಕೆ.ಎಸ್.ಪ್ರಣವಕುಮಾರ್
Published 1 ಜನವರಿ 2018, 6:55 IST
Last Updated 1 ಜನವರಿ 2018, 6:55 IST
ಹೊಸ ವರ್ಷಕ್ಕೆ ಕೋಟೆಗೆ ಪ್ರವಾಸಿಗರ ಲಗ್ಗೆ!
ಹೊಸ ವರ್ಷಕ್ಕೆ ಕೋಟೆಗೆ ಪ್ರವಾಸಿಗರ ಲಗ್ಗೆ!   

ಚಿತ್ರದುರ್ಗ: ಐತಿಹಾಸಿಕ ನಗರಿಯ ಕಲ್ಲಿನ ಕೋಟೆ, ಚಂದ್ರವಳ್ಳಿ, ಆಡು ಮಲ್ಲೇಶ್ವರ ಮೃಗಾಲಯ, ಮುರುಘಾ ಮಠ ಹೀಗೆ ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಲು ಸಾವಿರಾರು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ!

ನವೆಂಬರ್‌ ತಿಂಗಳಿನಿಂದ ಡಿಸೆಂಬರ್‍ ಅಂತ್ಯದವರೆಗೂ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದು ಸಾಮಾನ್ಯ. ಅದೇ ರೀತಿ ಈ ಬಾರಿಯೂ ಬಂದು ಹೋಗಿದ್ದಾರೆ. ಈಗಾಗಲೇ ಶಾಲಾ–ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಬಂದು ಸಂಭ್ರಮಿಸಿದ್ದಾರೆ. ಜ.1ರಂದು
ಕೂಡ ಹೆಚ್ಚು ಮಂದಿ ಬರುವ ನಿರೀಕ್ಷೆ ಇದೆ.

‘ಮದಕರಿನಾಯಕರ ಆಳ್ವಿಕೆಯ ಬಗ್ಗೆ ಇತಿಹಾಸದ ಪುಟಗಳಲ್ಲಿ ಕೇಳಿದ್ದೆವು. ಆದರೆ, ಕೋಟೆ ನೋಡಿದ ಮೇಲೆ ನಿಜ ಎನಿಸಿತು. ಇದು ಅತ್ಯಂತ ಸುಂದರವಾಗಿದೆ. ಇನ್ನಷ್ಟು ಅಭಿವೃದ್ಧಿ ಪಡಿಸುವ ಮೂಲಕ ರಾಜ್ಯದಲ್ಲೇ ಮಾದರಿ ಪ್ರವಾಸಿ ತಾಣವನ್ನಾಗಿ ಮಾಡಬೇಕು’ ಎನ್ನುತ್ತಾರೆ ಯಾದಗಿರಿ ಜಿಲ್ಲೆಯ ಮೊರಾರ್ಜಿ ದೇಸಾಯಿ ಶಾಲೆಯೊಂದರ ಪ್ರಾಚಾರ್ಯ ಅಶೋಕ್.

ADVERTISEMENT

‘ಪ್ರವಾಸಿಗರಿಗೆ ಅಲ್ಲಲ್ಲಿ ನೀರಿನ ಸೌಕರ್ಯ, ಪುರುಷ ಮತ್ತು ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ, ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕೋಟೆಯ ಸ್ವಚ್ಛತೆ ವಿಚಾರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬೇಕು’ ಎಂದು ಯಾದಗಿರಿ ಜಿಲ್ಲೆಯ ಶಿಕ್ಷಕರಾದ ಪಾಟೀಲ್ ಮತ್ತು ಬಸಮ್ಮ ಮನವಿ ಮಾಡಿದರು.

‘ಕಾಲೇಜು ದಿನಗಳಲ್ಲಿ ಕೋಟೆ ನೋಡಲು ಸ್ನೇಹಿತರೊಂದಿಗೆ ಬಂದಿದ್ದೆ. ಈಗ ಇಲ್ಲಿನ ಕೆಲವು ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಓಬವ್ವನ ಕಿಂಡಿ, ಗೋಪಾಲಸ್ವಾಮಿ ಹೊಂಡ ಸೇರಿದಂತೆ ಮೇಲುದುರ್ಗವನ್ನು ನೋಡಿ ಕೆಳಗಿಳಿಯುತ್ತಿದ್ದೇವೆ. ನನಗೆ ಅತ್ಯಂತ ಖುಷಿ ಕೊಡುವ ಸ್ಥಳ ಚಿತ್ರದುರ್ಗದ ಕಲ್ಲಿನ ಕೋಟೆ’ ಎಂದು ಹಾಸನ ಜಿಲ್ಲೆಯ ಲೋಕೇಶ್ ತಿಳಿಸಿದರು. ಅವರು ಪತ್ನಿಯೊಂದಿಗೆ ಕೋಟೆ ನೋಡಲು ಭಾನುವಾರ ಇಲ್ಲಿಗೆ ಬಂದಿದ್ದರು.

ನಾಗರಹಾವು ಚಿತ್ರ ಬಂದಾಗ ಅದನ್ನು ನೋಡಿದ ಅನೇಕರು ಕೋಟೆ ನೋಡಲು ಬಂದಿದ್ದು ಈಗ ಇತಿಹಾಸ. ಅದೇ ರೀತಿ ಕನ್ನಡದ ಹಿರಿಯ ನಟ ವಿಷ್ಣುವರ್ಧನ್ ನಿಧನರಾದ ನಂತರ ಕೋಟೆಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಬೆಂಗಳೂರು ಮತ್ತು ಉತ್ತರ ಕರ್ನಾಟಕದಿಂದ ಬಂದಿದ್ದ ವಿಷ್ಣುವರ್ಧನ್‌ ಅಭಿಮಾನಿಗಳು ಅಭಿಪ್ರಾಯಪಟ್ಟರು.

ಹೊರಗಿನವರ ಸಂಖ್ಯೆ ಕಡಿಮೆಯಾಗಬಹುದು: 2017ರಲ್ಲಿ ಹೊಸ ವರ್ಷದಂದು ಏಳುಸುತ್ತಿನ ಕೋಟೆ, ಚಂದ್ರವಳ್ಳಿಗೆ 17 ಸಾವಿರ, ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ 4,320, ಮುರುಘಾಮಠದ ಮುರುಘಾವನಕ್ಕೆ ಸುಮಾರು 20 ಸಾವಿರ ಮಂದಿ ಭೇಟಿ ನೀಡಿದ್ದರು ಎಂಬ ಮಾಹಿತಿ ಇದೆ. ಈ ಬಾರಿ ಹೊಸ ವರ್ಷ ಸೋಮವಾರ ಬಂದಿರುವುದರಿಂದ ಹೊರ ಜಿಲ್ಲೆಗಳ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಬಹುದು.  ಆದರೆ, ಅಕ್ಕಪಕ್ಕದ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಿಂದ ಹೆಚ್ಚುಮಂದಿ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಪ್ರವಾಸಿ ಮಾರ್ಗದರ್ಶಿ ಮೊಹಿದ್ದೀನ್.

ಸೋಮವಾರ ಬೆಳಿಗ್ಗೆ 7ರಿಂದ ಪ್ರವಾಸಿಗರ ಹೊಸ ವರ್ಷದ ಸಂಭ್ರಮ ಆರಂಭವಾಗುತ್ತದೆ. ತರುಣ–ತರುಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಕೋಟೆಯ ಮದ್ದುಗುಂಡು ಬೀಸುವ ಕಲ್ಲು, ಒಂಟಿಕಲ್ಲಿನ ಬಸವಣ್ಣ, ಬಂದಿಖಾನೆ, ಮಧ್ಯರಂಗ, ತುಪ್ಪದ ಕೊಳ, ಇಲ್ಲಿನ ಐತಿಹಾಸಿಕ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ ಎನ್ನುತ್ತಾರೆ ಪ್ರವಾಸಿ ಮಾರ್ಗದರ್ಶಿ ಜನಾರ್ದನ್.

ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ: ‘ನಾನು ಅಧಿಕಾರಿಯಾಗಿ ಇಲ್ಲಿಗೆ ಬಂದ ನಂತರ ಪ್ರವಾಸಿಗರ ಅನುಕೂಲಕ್ಕಾಗಿ 11 ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ. ಕೋಟೆಯಲ್ಲಿ ಶೌಚಾಲಯ ವ್ಯವಸ್ಥೆಯೂ ಇದೆ. ಈ ಹಿಂದೆ ನೀರಿನ ಸಮಸ್ಯೆ ಇದ್ದಾಗ ಪ್ರವಾಸಿಗರಿಗಾಗಿ ನೀರು ಪೂರೈಸುವಂತೆ ನಗರಸಭೆಗೆ ಪತ್ರ ಬರೆದಿದ್ದೇನೆ. ಆದರೆ, ನಗರಸಭೆಯಿಂದ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್ ತಿಳಿಸಿದ್ದಾರೆ.

‘ಕೋಟೆಯ ಕೆಳಗಿನಿಂದ ಕಲ್ಲು ಬಂಡೆಗಳ ಮಧ್ಯೆ ಮೇಲುದುರ್ಗದವರೆಗೂ ನೀರು ಪೂರೈಸುವುದು ಸುಲಭದ ಮಾತಲ್ಲ. ಆದರೂ, ಕೊಳವೆಬಾವಿಗಳ ಸಂಪರ್ಕದ ಮೂಲಕ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇವೆ. ನಮಗೆ ವಿವಿಧ ಇಲಾಖೆಗಳು ಸಹಕಾರ ನೀಡಿದರೆ, ಶಕ್ತಿ ಮೀರಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಮುಂದಾಗುತ್ತೇನೆ’ ಎಂದು ಅವರು ಭರವಸೆ ನೀಡಿದ್ದಾರೆ.

‘ಪ್ರವಾಸಿಗರಿಗೆ ನೀರಿಲ್ಲ ಎನ್ನಲು ಸಾಧ್ಯವೇ?’

‘ನೀರು ಪೂರೈಕೆಗಾಗಿ ಪುರಾತತ್ವ ಇಲಾಖೆ ಅಧಿಕಾರಿಗಳು ಬರೆದಿರುವ ಪತ್ರ ನನಗೆ ತಲುಪಿಲ್ಲ. ನನ್ನನ್ನು ಒಳಗೊಂಡಂತೆ ನಗರಸಭೆಯ ಅಧ್ಯಕ್ಷರು, ಸದಸ್ಯರಿಗೆ ನೀರು ಪೂರೈಸಲು ಮನವಿ ಮಾಡಿದ್ದರೆ, ಖಂಡಿತ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೆವು. ನಗರದ ಶಾಲಾ- ಕಾಲೇಜು, ವಸತಿನಿಲಯಗಳಿಗೂ ನೀರು ಪೂರೈಸುತ್ತೇವೆ. ಪ್ರವಾಸಿಗರಿಗೆ ಇಲ್ಲ ಎಂದು ಹೇಳಲು ಸಾಧ್ಯವೇ’ ಎಂದು ಪೌರಾಯುಕ್ತ ಚಂದ್ರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*

ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ಪ್ರವಾಸ ಡಿ. 31ಕ್ಕೆ ಅಂತ್ಯವಾಗಿದೆ. ಶಾಲಾ ಅವಧಿಯಲ್ಲಿ ಪ್ರವಾಸ ತೆರಳಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

- ರೇವಣಸಿದ್ದಪ್ಪ, ಡಿಡಿಪಿಐ

*

ಭದ್ರತೆಗಾಗಿ ಇಲ್ಲಿನ ಎಲ್ಲ ಪ್ರಮುಖ ಸ್ಥಳಗಳಲ್ಲೂ ಪೊಲೀಸ್‍ ಸಿಬ್ಬಂದಿ ನಿಯೋಜಿ<br/>ಸಲಾಗುವುದು. ಜನ ಸಂತೋಷದಿಂದ ಪ್ರವಾಸಿ ತಾಣ ವೀಕ್ಷಿಸಲಿ.

- ಶ್ರೀನಾಥ್‍ ಎಂ. ಜೋಷಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.