ADVERTISEMENT

ಸಮಾಜ ತಿದ್ದಲು ನಿಷ್ಠರವಾದಿಯಾದ ವೇಮನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 9:11 IST
Last Updated 20 ಜನವರಿ 2018, 9:11 IST

ಚಿತ್ರದುರ್ಗ: ಯೋಗಿ ವೇಮನ ಸಮಾಜದಲ್ಲಿನ ಲೋಪದೋಷಗಳನ್ನು ಕಂಡಲ್ಲಿಯೇ ನಿಷ್ಠುರವಾಗಿ ಖಂಡಿಸಿರುವ  ಚಿಂತಕ. ಆತ ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್‌ ಅವರಂತೆ ಮಹಾನ್ ದಾರ್ಶನಿಕ ಎಂದು ಉಪನ್ಯಾಸಕ ಭೀಮಾರೆಡ್ಡಿ ಪ್ರತಿಪಾದಿಸಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಸಮಾರಂಭದಲ್ಲಿ ಅವರು ಯೋಗಿ ವೇಮನ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇಮನನ ಹುಟ್ಟಿನ ಬಗ್ಗೆ ಮಾಹಿತಿ ನೀಡಿದ ಭೀಮಾರೆಡ್ಡಿ, ಹಳೆಯ ಮತ್ತು ಹೊಸ ವಿಚಾರಗಳು ಮತ್ತು ಹಲವು ಗೊಂದಲಗಳ ಕುರಿತು ವಿಶ್ಲೇಷಿಸಿದರು.

‘ಇಂಗ್ಲಿಷ್ ಸಂಶೋಧಕ ಸಿ.ಪಿ.ಬ್ರೌನ್ ಅವರು ‘ವರ್ಷನ್ ಆಫ್ ವೇಮನ’ ಕೃತಿಯಲ್ಲಿ ವೇಮನನ ಕುರಿತು 2 ಸಾವಿರ ವಚನಗಳನ್ನು ರಚಿಸಿದ್ದಾರೆ. ಕನ್ನಡದ ಲೇಖಕ ಎಸ್. ಆರ್. ಪಾಟೀಲ್ ವೇಮನನ ಹುಟ್ಟು ಮತ್ತು ಬೆಳವಣಿಗೆಗಳನ್ನು ದಾಖಲಿಸಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಬ್ರೌನ್ ದಾಖಲಿಸಿರುವ ಪ್ರಕಾರ ವೇಮನ 1652ರಲ್ಲಿ ಹುಟ್ಟಿದ್ದಾರೆ. ಪಾಟೀಲರ ನೀಡಿರುವ ದಾಖಲೆ ಪ್ರಕಾರ ವೇಮನ 1412ನೇ ಇಸವಿಯಲ್ಲಿ ಆಶ್ವಯುಜ , ಶುದ್ಧ, ಪೌರ್ಣಮಿಯಂದು ಜನಿಸಿದ್ದಾರೆ. ಗಿರರೆಡ್ಡಿ – ಮಲ್ಲಮ್ಮ ದಂಪತಿಯ ಮೂರನೇ ಪುತ್ರ ಭರಮ ರಡ್ಡಿ, ನಾಲ್ಕನೇ ಪುತ್ರನೇ ವೇಮನ. ಭರಮರಡ್ಡಿಯ ಪತ್ನಿ ಶಿವಶರಣೆ ಹೇಮ ರಡ್ಡಿ ಮಲ್ಲಮ್ಮ’ ಎಂದು ವಿವರಿಸಿದರು.

‘ವೇಮನ ಯೌವ್ವನದಲ್ಲಿದ್ದಾಗ ದುಶ್ಚಟಗಳಿಗೆ ಬಲಿಯಾಗುತ್ತಾನೆ. ವೇಶ್ಯೆಯರ ಸಂಘ ಮಾಡುತ್ತಾನೆ. ವೇಶ್ಯೆಯೊಬ್ಬಳ ಆಸೆ ಈಡೇರಿಸಲು ತನ್ನ ಅತ್ತಿಗೆ ಮಲ್ಲಮ್ಮನ ಮೂಗುತಿ ಕೇಳುತ್ತಾನೆ. ಮೂಗುತಿ ಕೊಡುವ ಮಲ್ಲಮ್ಮ, ಕರಾರು ವಿಧಿಸುವ ಮೂಲಕ ಮೈದುನನ ಮನಸ್ಥಿತಿಯನ್ನು ಬದಲಿಸುತ್ತಾಳೆ . ಮುಂದೆ ವೇಮನ ವಿರಾಗಿಯಾಗಿ, ಮಹಾಯೋಗಿಯಾತ್ತಾನೆ’ ಎಂದು ವಿವರಿಸಿದರು.

ಸಮಾಜದಲ್ಲಿ ಜನ ಮೋಹಕ್ಕೆ ಒಳಗಾಗುತ್ತಿದ್ದಾರೆ. ಪೂಜೆಗಳ ಹೆಸರಿನಲ್ಲಿ ನಿಜ ಜೀವನದ ಸತ್ವವನ್ನೇ ಅರಿಯದೇ ಕೇವಲ ವಿಗ್ರಹಾರಾಧನೆಯಲ್ಲಿ ಕಾಲಕಳೆಯುತ್ತಿದ್ದಾರೆ ಎಂಬುದು ವೇಮನನ ಚಿಂತನೆಯಾಗಿತ್ತು. ಅದಕ್ಕಾಗಿಯೇ ‘ಆತ್ಮಶುದ್ಧಿಯಿಲ್ಲದ ಆಚಾರದಿಂದ ಪ್ರಯೋಜವಿಲ್ಲ. ಪಾತ್ರೆ ಶುದ್ಧಿಯಿಲ್ಲದೆ ಅಡುಗೆ ತಯಾರಿಸಿದಂತೆ. ಹಾಗೆಯೇ ಮನಸ್ಸು ಶುದ್ಧಿಯಿಲ್ಲದೆ ಶಿವ ಪೂಜೆ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ವೇಮನ ಪ್ರತಿಪಾದಿಸಿದ್ದರು ಎಂದರು.

ಸಮಾಜದಲ್ಲಿರುವ ಸಾಮಾನ್ಯ ಮನುಷ್ಯರನ್ನು ಉಪ್ಪು–ಕರ್ಪೂರಗಳಿಗೆ ಹೋಲಿಸಬಹುದು. ಎರಡೂ ನೋಡಲು ಒಂದೇ ರೀತಿ. ಆದರೆ, ರುಚಿ ಬೇರೆ ಬೇರೆ. ಹಾಗೆಯೇ ಪುರುಷರಲ್ಲೂ ನೋಟ ಒಂದೇ ಆಗಿದ್ದರೂ ಬೇರೆ ಬೇರೆ ಗುಣವುಳ್ಳವರಾಗಿರುತ್ತಾರೆ ಎಂಬ ಎಂದು ಉದಾಹರಣೆಗಳನ್ನು ವಚನಗಳ ಮೂಲಕ ವೇಮನ ಸಂದೇಶ ನೀಡಿದ್ದಾನೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ‘ರೆಡ್ಡಿ ಸಮುದಾಯದ ಇತಿಹಾಸಕ್ಕಿಂತ ವೇಮನರ ಆದರ್ಶಗಳು ಮುಖ್ಯವಾಗಬೇಕು. ಆತನ, ಹುಟ್ಟು ಮತ್ತು ಬೆಳವಣಿಗೆಗಿಂತ, ವೇಮನನ ಸಿದ್ದಾಂತ ಜನರಿಗೆ ತಿಳಿಸುವ ಕೆಲಸವಾಗಬೇಕು. ನನಗೂ ಸಹ ವೇಮನರ ಜೀವನ ಚರಿತ್ರೆಯ ಕುರಿತು ತಿಳಿದುಕೊಳ್ಳಲು ಆಸಕ್ತಿಯಿದೆ. ಸರ್ಕಾರ ಇದೇ ಮೊದಲ ಬಾರಿಗೆ ವೇಮನನ ಜಯಂತಿಗೆ ಚಾಲನೆ ನೀಡಿದೆ. ಮುಂದಿನ ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ವೇಮನರ ಆದರ್ಶ ಮತ್ತು ಸಮುದಾಯಕ್ಕೆ ಕೊಡುಗೆಗಳ ಮಹತ್ವ ತಿಳಿಸುವ ಕೆಲಸ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಡಿವೈಎಸ್‌ಪಿ ನಾಗರಾಜ್, ಜಲತಜ್ಞ ದೇವರಾಜ ರೆಡ್ಡಿ, ರೆಡ್ಡಿ ಜನಸಂಘ ಕಾರ್ಯದರ್ಶಿ ಜಯರಾಮ ರೆಡ್ಡಿ, ಸಮುದಾಯದ ಮುಖಂಡರಾದ ಕಲ್ಲಂಸೀತಾರಾಮರಡ್ಡಿ, ವಿಶ್ವನಾಥರೆಡ್ಡಿ ಹಾಜರಿದ್ದರು.

ನಗರದಲ್ಲಿ ವೇಮನ ಜಯಂತಿ ಮೆರವಣಿಗೆ

ಮಹಾಯೋಗಿ ವೇಮನ ಜಯಂತಿ ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ವೇಮನ ಭಾವಚಿತ್ರ ಮತ್ತು ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ರೆಡ್ಡಿ ಸಮುದಾಯದವರು, ರೆಡ್ಡಿ ಜನಸಂಘದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ನಗರದ ಪ್ರಮುಖ ರಸ್ತೆಯಲ್ಲಿ ಸಾಗಿದ ಮೆರವಣಿಗೆ, ಪ್ರವಾಸಿ ಮಂದಿರ, ವಾಸವಿ ಸರ್ಕಲ್, ಜಿಲ್ಲಾಧಿಕಾರಿ ಕಚೇರಿ ವೃತ್ತ, ಮದಕರಿ ವೃತ್ತದ ಮೂಲಕ ತರಾಸು ರಂಗಮಂದಿರ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.