ADVERTISEMENT

ಮೊಳಕಾಲ್ಮುರಿನಿಂದ ಸ್ಪರ್ಧಿಸುವ ಸೂಚನೆ ನೀಡಿದ ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 11:00 IST
Last Updated 24 ಜನವರಿ 2018, 11:00 IST

ನಾಯಕನಹಟ್ಟಿ: ‘ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಭಿಮಾನಿಗಳು, ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ ಪಕ್ಷ ವಹಿಸುವ ಜವಾಬ್ದಾರಿಯನ್ನು ನಿಷ್ಠೆಯಿಂದ ಪಾಲಿಸುತ್ತೇನೆ’ ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್. ಉಗ್ರಪ್ಪ ಹೇಳಿದರು. ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಸಾಧನೆ ಜೈಲಿಗೆ ಹೋಗಿದ್ದು: ‘ರಾಜ್ಯದಲ್ಲಿ ಬಿಜೆಪಿಯವರು ಅಧಿಕಾರಕ್ಕೆ ಬರುತ್ತೇವೆಂಬ ಭ್ರಮೆಯಲ್ಲಿದ್ದಾರೆ. ಆದರೆ, ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಅವರು ರಾಜ್ಯದ ಅಮೂಲ್ಯವಾದ ಗಣಿ ಸಂಪತ್ತನ್ನು ಲೂಟಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ₹ 1 ಲಕ್ಷ ಕೋಟಿ ನಷ್ಟ ಉಂಟು ಮಾಡಿದರು. ಅದರ ಬಗ್ಗೆ ಮೊದಲು ವರದಿ ನೀಡಿದ್ದು ನಾನು. ನಂತರ ಲೋಕಯುಕ್ತ ಚಾರ್ಜ್‌ಶೀಟ್‌ ಸಲ್ಲಿಸಿದರು. ಹೀಗೆ ವಿಚಾರಣೆಗಳು ನಡೆದು, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋದರು. ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆಯನ್ನು ಆರಂಭಿಸಿದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸಹ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದೆ’ ಎಂದರು.

‘ಈ ಬಾರಿ ಮೊಳಕಾಲ್ಮುರು ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲಿನ ಪಕ್ಷದ ಹಿರಿಯ, ಕಿರಿಯ ಮುಖಂಡರು, ಅಭಿಮಾನಿಗಳು ಬಹುದಿನಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಅವರ ಒತ್ತಾಯಕ್ಕೆ ಮಣಿದು, ವಿಶ್ವಾಸಕ್ಕೆ ಬೆಲೆಕೊಟ್ಟು ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಲು ಬಂದಿದ್ದೇನೆ. ಹೈಕಮಾಂಡ್ ನೀಡುವ ಜವಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವೆ’ ಎಂದು ಹೇಳಿದರು.

ADVERTISEMENT

ಡಾ.ನಂಜುಂಡಪ್ಪ ವರದಿಯನ್ವಯ ಮೊಳಕಾಲ್ಮುರು ಕ್ಷೇತ್ರವು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿದ್ದಾರೆ. ಹಲವು ಜ್ವಲಂತ ಸಮಸ್ಯೆಗಳು ದಶಕಗಳಿಂದ ಪರಿಹಾರ ಕಾಣದೆ ಉಳಿದುಕೊಂಡಿವೆ. ಪ್ರಮುಖವಾಗಿ ಕುಡಿಯುವ ನೀರು, ನೀರಾವರಿ ಕೃಷಿ ಯೋಜನೆ ವಿಸ್ತರಣೆ, ಉದ್ಯೋಗ ಅವಕಾಶಗಳು, ಕೈಗಾರಿಕಾ ಕಾರಿಡಾರ್ ನಿರ್ಮಾಣದಂತಹ ಕಾರ್ಯಗಳನ್ನು ಕೈಗೊಂಡರೆ ಕ್ಷೇತ್ರವು ಅಭಿವೃದ್ಧಿಯಾಗುತ್ತದೆ. ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯು ಅಭಿವೃದ್ಧಿ ಹೊಂದಿದರೆ ಬಹುತೇಕ ಎಲ್ಲಾ ಜಿಲ್ಲೆಗಳು ಅಭಿವೃದ್ಧಿ ಪಥದತ್ತ ಮುನ್ನಡೆದಂತೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಕಾಂಗ್ರೆಸ್‌ ಹಿರಿಯ ಮುಖಂಡರಾದ ಜಿ.ಎಸ್.ಪ್ರಭುಸ್ವಾಮಿ, ಪಟೇಲ್‌ ಜಿ.ತಿಪ್ಪೇಸ್ವಾಮಿ, ಬಂಡೇಕಪಿಲೆ ಓಬಣ್ಣ, ಬಂಗಾರಪ್ಪ, ವಿರೂಪಾಕ್ಷಪ್ಪ, ದೊಡ್ಡನಾಗಯ್ಯ, ಎಸ್.ಪಾಲಯ್ಯ, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ, ಧನಂಜಯ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.