ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು, ಬಡರೋಗಿಗಳಿಗೆ ಹೈಟೆಕ್ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 9:42 IST
Last Updated 2 ಫೆಬ್ರುವರಿ 2018, 9:42 IST
ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಆರಂಭವಾದ ತೀವ್ರ ನಿಗಾ ಘಟಕ (ಐಸಿಯು).
ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಆರಂಭವಾದ ತೀವ್ರ ನಿಗಾ ಘಟಕ (ಐಸಿಯು).   

ಚಳ್ಳಕೆರೆ: ಚಿಕಿತ್ಸೆ ಬಯಸಿ ಬರುವ ಗ್ರಾಮೀಣ ಭಾಗದ ಜನ, ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿ ಸಮಸ್ಯೆ, ಅಪಘಾತ, ವಿಷಜಂತು ಕಡಿತ ಸೇರಿದಂತೆ ಹಲವು ತುರ್ತು ಸಮಸ್ಯೆಗಳಿಗೆ ನಗರದಲ್ಲಿ ಈಗ ಹೈಟೆಕ್ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಲಭ್ಯ.

ನಗರದ ನೂರು ಹಾಸಿಗೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಶಾಸಕ ಟಿ.ರಘುಮೂರ್ತಿ ₹ 30 ಲಕ್ಷ ವೆಚ್ಚದ ಹೈಟೆಕ್ ತೀವ್ರ ನಿಗಾ ಘಟಕಕ್ಕೆ (ಐಸಿಯು) ಚಾಲನೆ ನೀಡಿದ್ದು, ಸಾವಿರಾರು ಬಡರೋಗಿಗಳಿಗೆ ಅನುಕೂಲವಾಗಲಿದೆ.

ಜಿಲ್ಲೆಯಲ್ಲಿಯೇ ಅತಿದೊಡ್ಡ ತಾಲ್ಲೂಕು ಕೇಂದ್ರ ಚಳ್ಳಕೆರೆ. ತಾಲ್ಲೂಕಿನಲ್ಲಿ 3 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಸಾರ್ವಜನಿಕರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಇದೆ. ತಾಲ್ಲೂಕಿನಾದ್ಯಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜತೆಗೆ ಅಲ್ಪಸಂಖ್ಯಾತರು ಸಹ ಚಿಕ್ಕಪುಟ್ಟ ವ್ಯವಹಾರದಲ್ಲಿ ತೊಡಗಿ ಜೀವನ ಕಂಡುಕೊಂಡಿದ್ದಾರೆ. ಬಹುತೇಕ ಕೂಲಿ, ಕುಲಕಸುಬು, ಪಶುಪಾಲನೆ ಮತ್ತು ಕುರಿಸಾಕಾಣಿಕೆ ಈ ತಾಲ್ಲೂಕಿನ ಪ್ರಮುಖ ವೃತ್ತಿ ಎನಿಸಿವೆ. ಇಂತಹ ಹಲವು ಕುಟುಂಬಗಳಲ್ಲಿ ಎದುರಾಗುವ ಮಾರಣಾಂತಿಕ ರೋಗಗಳಿಗೆ ಸರ್ಕಾರಿ ಆಸ್ಪತ್ರೆಯ ಐಸಿಯು ಘಟಕ ನೆರವಾಗಲಿದೆ.

ADVERTISEMENT

ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಬರುವ ಸಾರ್ವಜನಿಕರಿಗೆ ಒಳರೋಗಿಗಳಾಗಿ ಪ್ರವೇಶ ನೀಡಿ, ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಹಲವು ಸಂದರ್ಭಗಳಲ್ಲಿ ತೀರ್ವ ನಿಗಾ ಘಟಕದ ಅಗತ್ಯವಿರುವ ರೋಗಿಗಳಿಗೆ ಚಿತ್ರದುರ್ಗ, ದಾವಣಗೆರೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಳಿಸುವ ಅನಿವಾರ್ಯತೆ ಇತ್ತು. ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸುಸಜ್ಜಿತ ತೀವ್ರ ನಿಗಾ ಘಟಕ (ಐಸಿಯು) ಸ್ಥಾಪಿಸುವ ಮೂಲಕ ಶಾಸಕ ಟಿ.ರಘುಮೂರ್ತಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮತಿ ಸದಸ್ಯ ನೇತಾಜಿ ಪ್ರಸನ್ನ.

ತೀವ್ರ ನಿಗಾ ಘಟಕದಲ್ಲಿ ಆರಂಭಿಕವಾಗಿ 3 ಹಾಸಿಗೆಗಳನ್ನು ಹಾಕಲಾಗಿದೆ. ರೋಗಿಗಳಿಗೆ ಅಗತ್ಯವಿರುವ ಆಮ್ಲಜನಕ, ಇಸಿಜಿ ಮತ್ತು ವೆಂಟಿಲೇಟರ್‌ನಂತಹ ಅತ್ಯಾಧುನಿಕ ಚಿಕಿತ್ಸಾ ಸೌಕರ್ಯಗಳನ್ನು ಅಳವಡಿಸಲಾಗಿದೆ. ಇಲ್ಲಿ ಚಿಕಿತ್ಸೆಗೆ ಒಳಪಡುವ ರೋಗಿಗಳ ಆರೈಕೆಗೆ ಅಗತ್ಯ ಶುಶ್ರೂಷಕರು, ಸಿಬ್ಬಂದಿಯನ್ನು ನೇಮಿಸಲಾಗಿದೆ. ತಾಲ್ಲೂಕಿನ ಸಾವಿರಾರು ಬಡರೋಗಿಗಳಿಗೆ ಅತ್ಯಂತ ಕಡಿಮೆ ಮೊತ್ತದಲ್ಲಿ ಹೆಚ್ಚಿನ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಚಳ್ಳಕೆರೆ ಪ್ರಥಮ ಆಸ್ಪತ್ರೆ ಎನಿಸಿದೆ ಎನ್ನುತ್ತಾರೆ ಡಾ.ಅಮಿತ್ ಗುಪ್ತಾ.

ತೀವ್ರ ನಿಗಾ ಘಟಕದ ಜತೆಗೆ ಮಹಿಳಾ ವಿಶೇಷ ಚಿಕಿತ್ಸಾ ಘಟಕ, ಡಯಾಲಿಸಿಸ್ ಕೇಂದ್ರ ಆರಂಭಿಸಿರುವುದರಿಂದ ನೂರಾರು ಬಡರೋಗಿಗಳಿಗೆ ಅನುಕೂಲವಾಗಲಿದೆ. ಮುಖ್ಯವಾಗಿ ಮಹಿಳೆಯರ ಹೆರಿಗೆ ಸಮಯ, ಗರ್ಭಕೋಶ ತೊಂದರೆಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ಈ ಘಟಕಗಳು ಉತ್ತಮ ಸೇವೆ ಒದಗಿಸಲಿವೆ. ತಾಲ್ಲೂಕಿನಲ್ಲಿ ಅತ್ಯಾಚಾರ, ದಬ್ಬಾಳಿಕೆ ಮತ್ತು ಬಹಿಷ್ಕಾರಕ್ಕೆ ಒಳಗಾಗಿರುವ ಮಹಿಳೆಯರಿಗೆ ವಿಶೇಷ ರೀತಿಯಲ್ಲಿ ಸಾಂತ್ವನ ಹೇಳುವ ಮತ್ತು ಚಿಕಿತ್ಸೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುವ ಶುಶ್ರೂಷಕಿಯರಿಗೆ ವಿಶೇಷ ತರಬೇತಿ ನೀಡಿ ಕೆಲಸಕ್ಕೆ ನೇಮಿಸಲಾಗುತ್ತದೆ. ಪರಿಣತ ವೈದ್ಯರ ತಂಡ ಸಹ ಇಲ್ಲಿ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಡಾ.ತಿಪ್ಪೇಸ್ವಾಮಿ ಹೇಳುತ್ತಾರೆ.

* * 

ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು, ಡಯಾಲಿಸಿಸ್ ಕೇಂದ್ರ ಮತ್ತು ವಿಶೇಷ ಮಹಿಳಾ ಚಿಕತ್ಸೆ ಮತ್ತು ಸಾಂತ್ವನ ಕೇಂದ್ರ ಆರಂಭಿಸಿ ಬಡರೋಗಿಗಳಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ.
-ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.