ADVERTISEMENT

ಸಂತೋಷ್ ಹತ್ಯೆಗೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 8:36 IST
Last Updated 3 ಫೆಬ್ರುವರಿ 2018, 8:36 IST

ಚಿತ್ರದುರ್ಗ: ಬೆಂಗಳೂರಿನ ಜೆ.ಸಿ.ನಗರದಲ್ಲಿ ಈಚೆಗೆ ಬಿಜೆಪಿ ಕಾರ್ಯಕರ್ತ ಸಂತೋಷ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಇಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ವೃತ್ತದ ಮುಂಭಾಗದಲ್ಲಿ ಕೆಲಕಾಲ ಪ್ರತಿಭಟಿಸಿದರು. ನಂತರ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

3 ವರ್ಷಗಳಿಂದ ವಿವಿಧೆಡೆ 24 ಮಂದಿ ಬಿಜೆಪಿ ಮತ್ತು ಆರ್‌ಎಸ್‍ಎಸ್ ಕಾರ್ಯಕರ್ತರ ಹತ್ಯೆಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್ ಮಾತನಾಡಿ, ‘ಕೇವಲ ವೋಟಿಗಾಗಿ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಷ್ಕೃತ್ಯದಲ್ಲಿ ತೊಡಗಿದವರ ಮೇಲಿನ 125 ಪ್ರಕರಣ ಹಿಂದಕ್ಕೆ ಪಡೆದು ಮುಸ್ಲಿಂ ಸಮುದಾಯದವರಿಂದ ಶಬ್ಬಾಸ್ ಗಿರಿ ಪಡೆಯಲು ಹೊರಟಿದ್ದಾರೆ. ಸಿಎಂ ಇಂತಹ ಕೀಳುತನದ ರಾಜಕಾರಣ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರಾದ ರತ್ನಮ್ಮ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಜಿತೇಂದ್ರ, ರೇವಣಸಿದ್ದಪ್ಪ, ಶಿವಣ್ಣಾಚಾರ್, ವಿ.ಎಸ್.ಮೋಹನ್, ಡಿ.ರಮೇಶ್, ಪಿ.ಲೀಲಾದರ್ ಠಾಕೂರ್, ಸುರೇಶ್ ಸಿದ್ದಾಪುರ, ಭೀಮರಾಜ್, ಶಂಭು, ಕಾರ್ಯಕರ್ತರು, ಪದಾಧಿಕಾರಿಗಳೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.