ADVERTISEMENT

₹ 671 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 8:34 IST
Last Updated 25 ಡಿಸೆಂಬರ್ 2017, 8:34 IST
ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಚಿತ್ರದುರ್ಗದ ಹೋಲಿ ಫ್ಯಾಮಿಲಿ ಕ್ಯಾಥೋಲಿಕ್‌ ಚರ್ಚ್‌ನ ಒಳಾಂಗಣ ಭಾನುವಾರ ಸಿಂಗಾರಗೊಂಡು ಜಗಮಗಿಸುತ್ತಿರುವ ದೃಶ್ಯ.
ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಚಿತ್ರದುರ್ಗದ ಹೋಲಿ ಫ್ಯಾಮಿಲಿ ಕ್ಯಾಥೋಲಿಕ್‌ ಚರ್ಚ್‌ನ ಒಳಾಂಗಣ ಭಾನುವಾರ ಸಿಂಗಾರಗೊಂಡು ಜಗಮಗಿಸುತ್ತಿರುವ ದೃಶ್ಯ.   

ಚಿತ್ರದುರ್ಗ: ಕ್ರಿಸ್‌ಮಸ್ ಹಬ್ಬದ ಆಚರಣೆ ಅಂಗವಾಗಿ ನಗರದ ವಿವಿಧೆಡೆಯ ಚರ್ಚ್‌ಗಳಲ್ಲಿ ಭಾನುವಾರ ಸಂಜೆ ವಿದ್ಯುತ್‌ ದೀಪಾಲಂಕಾರ, ಗೋದಲಿ ಮಾದರಿ ನಿರ್ಮಾಣ ಸೇರಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.

ಇಲ್ಲಿನ ಸೇಂಟ್‌ ಜೋಸೆಫ್‌ ಶಾಲೆಯ ಹತ್ತಿರವಿರುವ ಹೋಲಿ ಫ್ಯಾಮಿಲಿ ಕ್ಯಾಥೋಲಿಕ್‌ ಚರ್ಚ್‌ ಆವರಣ ಸೋಮವಾರ ನಡೆಯುವ ಕ್ರಿಸ್‌ಮಸ್‌ ಆಚರಣೆ ಹಿನ್ನೆಲೆಯಲ್ಲಿ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.

ಏಸುಕ್ರಿಸ್ತ ಹುಟ್ಟಿದ ಸಂದರ್ಭದಲ್ಲಿ ಇದ್ದಂಥ ವಾತಾವರಣದ ‘ಗೋದಲಿ’ ಮಾದರಿಯನ್ನು ಕ್ಯಾಥೋಲಿಕ್ ಚರ್ಚ್‌ನ ಐಸಿವೈಎಂ ಸದಸ್ಯರು ಚರ್ಚ್‌ನ ಆವರಣದಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಿದ್ದರು.

ADVERTISEMENT

ಕ್ರಿಸ್‌ಮಸ್‌ ಅಂಗವಾಗಿ ಈ ಬಾರಿ ಮಹಿಳೆಯರಿಗಾಗಿ ಮ್ಯೂಸಿಕಲ್ ಚೇರ್, ಹಗ್ಗಜಗ್ಗಾಟ ಸೇರಿದಂತೆ ವಿಶೇಷ ಕ್ರೀಡಾಕೂಟ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಕಿರಿಯರಿಂದ ಹಿರಿಯರವರೆಗೂ ಕ್ರಿಕೆಟ್ ಪಂದ್ಯಾವಳಿ ನಡೆಸಲಾಯಿತು. ಹಿರಿಯರ ತಂಡದವರು ಜಯಗಳಿಸಿದರು ಎಂದು ಚರ್ಚ್‌ನ ಧರ್ಮ ಕೇಂದ್ರದ ಧರ್ಮಗುರು ಲ್ಯಾನ್ಸಿ ಡಿಸೋಜಾ ತಿಳಿಸಿದರು.

ಕ್ರಿಸ್‌ಮಸ್‌ ಕುರಿತು ಹಾಡು ಹೇಳುವ ಸ್ಪರ್ಧೆ ಕೂಡ ನಡೆಯಿತು. ಬಾಲ ಏಸು ಸಮೂಹ, ಸಂತ ಅಂಥೋನಿ ಸಮೂಹ, ಸಂತ ಫ್ರಾನ್ಸಿಸ್‌ ಸಮೂಹ, ಸಂತ ಪೌಲ್ ಸಮೂಹ, ಸಂತ ಮದರ್ ತೆರೇಸಾ ಸಮೂಹ, ಸಂತ ಥಾಮಸ್ ಸಮೂಹ, ಪವಿತ್ರ ಕುಟುಂಬ ಸಮೂಹ, ಇಮ್ಯಾನ್‌ವೆಲ್ ಸಮೂಹ ಸೇರಿ ಒಟ್ಟು 12 ಸಮೂಹಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜೋಸ್‌ಮಿನ್ ಅಂಡ್ ಕೋ ಸಮೂಹ ಪ್ರಥಮ, ಪವಿತ್ರ ಹೃದಯ ಸಮೂಹ ದ್ವಿತೀಯ ಹಾಗೂ ಪವಿತ್ರ ಜೋಸೆಫರ ಸಮೂಹ ತೃತೀಯ ಬಹುಮಾನ ಪಡೆದುಕೊಂಡಿದೆ ಎಂದು ಲ್ಯಾನ್ಸಿ ಡಿಸೋಜಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕ್ರಿಸ್‌ಮಸ್‌ಗೂ ಮುನ್ನ ಕ್ರಿಶ್ಚನ್ನರ ಮನೆಗಳಿಗೆ ಭೇಟಿ ನೀಡಿ ಬೈಬಲ್ ಓದುತ್ತೇವೆ. ಕುಟುಂಬದ ಸದಸ್ಯರಿಗೆ ಒಳಿತಾಗಲಿ ಎಂದು ಏಸುವಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ’
ಎಂದು ಕ್ಯಾಥೋಲಿಕ್‌ ಚರ್ಚ್‌ನ ಅಧ್ಯಕ್ಷ ಸ್ಟಾಲಿನ್ ತಿಳಿಸಿದರು.

ಭಾನುವಾರ ರಾತ್ರಿ 10ರಿಂದ 11ರವರೆಗೆ ಕ್ರಿಸ್ತನ ಜನನ ಸಂದೇಶ ಸಾರುವ ಕ್ರಿಸ್‌ಮಸ್‌ ಹಾಡುಗಳ ಕಾರ್ಯಕ್ರಮ ನಡೆಯಿತು. ರಾತ್ರಿ 11 ರಿಂದ ಪೂಜೆ ಅರ್ಪಣೆ, ಸಾಮೂಹಿಕ ಪ್ರಾರ್ಥನೆ ಹಾಗೂ ಸಿಹಿ ಹಂಚುವ ಮೂಲಕ ಕ್ರಿಸ್‌ಮಸ್‌ ಹಬ್ಬ ಆಚರಿಸಲಾಯಿತು ಎಂದು ಚರ್ಚ್‌ನ ಕಾರ್ಯದರ್ಶಿ ಪ್ರಸಾದ್‌ ತಿಳಿಸಿದರು.

ಸೋಮವಾರ ಬೆಳಿಗ್ಗೆ 9ಕ್ಕೆ ಸಾಮೂಹಿಕ ಪ್ರಾರ್ಥನೆ, ಪೂಜೆ ನೆರವೇರಲಿದೆ. ಸಂಜೆ 6ರಿಂದ 9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಾತ್ಯರಾಜನ್ ಅತಿಥಿಗಳಾಗಿ ಭಾಗವಹಿಸುವರು. ಒಂದು ವಾರದವರೆಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಐಸಿವೈಎಂ ಸದಸ್ಯ ವಿವೇಕ್‌ ತಿಳಿಸಿದರು. ನಗರದ ಸುಮಾರು 20 ಪ್ರೊಟೆಸ್ಟಂಟ್‌ ಚರ್ಚ್‌ಗಳಲ್ಲೂ ಕ್ರಿಸ್‌ಮಸ್‌ ಹಬ್ಬ ಆಚರಿಸಲಾಯಿತು.

ಅಭಿವೃದ್ಧಿ ಕಾಮಗಾರಿ

‘ಕಾಮನಬಾವಿ ಬಡಾವಣೆ ಸಮೀಪದಲ್ಲಿ ಆರೋಗ್ಯ ಮಾತೆಯ ನೂತನ ಚರ್ಚ್‌ ನಿರ್ಮಿಸಲಾಗುತ್ತಿದೆ. ನಮ್ಮ ಕ್ಯಾಥೋಲಿಕ್ ಚರ್ಚ್‌ನಲ್ಲಿ ಗುಣಮಟ್ಟದ ಸ್ಟೇಜ್, ತಡೆಗೋಡೆ, ನಾಲ್ಕು ತಂಗುದಾಣ ನಿರ್ಮಿಸಲು ಮುಂದಾಗಿದ್ದೇವೆ. ಪ್ರತಿ ವರ್ಷವೂ ಒಂದಿಲ್ಲೊಂದು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ’ ಎಂದು ಧರ್ಮಗುರು ಲ್ಯಾನ್ಸಿ ಡಿಸೋಜ ತಿಳಿಸಿದರು.

* * 

ಅನೇಕ ಚರ್ಚ್‌ಗಳ ಧರ್ಮಗುರು ಮತ್ತು ಸಿಸ್ಟರ್‌ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಪ್ರೀತಿ– ವಿಶ್ವಾಸದೊಂದಿಗೆ ಎಲ್ಲರ ಜತೆ ಆಚರಿಸುತ್ತೇವೆ. 
ಸ್ಟಾಲಿನ್‌, ಹೋಲಿ ಫ್ಯಾಮಿಲಿ ಚರ್ಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.