ADVERTISEMENT

ಅಂತರ್ಜಲ ಅಭಿವೃದ್ಧಿಗೆ ಪಣತೊಡಿ

​ಪ್ರಜಾವಾಣಿ ವಾರ್ತೆ
Published 28 ಮೇ 2017, 7:18 IST
Last Updated 28 ಮೇ 2017, 7:18 IST

ಮುಡಿಪು: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಭವಿಷ್ಯದಲ್ಲಿ ಈ ಸಮಸ್ಯೆಗೆ ಮುಕ್ತಿ ನೀಡಬೇಕಾದರೆ ಅಂತರ್ಜಲ ಮಟ್ಟ ಹೆಚ್ಚಿಸಿ ಅಭಿವೃದ್ಧಿಪ ಡಿಸಲು ನಾವೆಲ್ಲರೂ ಪಣತೊಡ ಬೇಕಾಗಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.ನರಿಂಗಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋರ್ಲ ಎಂಬಲ್ಲಿ  ಜಿಲ್ಲಾ ಪಂಚಾಯಿತಿ ಹಾಗೂ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟನ್ನು ಶನಿವಾರ ಉದ್ಘಾಟಿಸಿ ಅವರು ಮಾತ ನಾಡಿದರು.

‘ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನಡಿ ಈಗಾಗಲೇ ಜಿಲ್ಲೆಯಲ್ಲಿ ಸುಮಾರು 1000 ಸಾವಿರ ಕಿಂಡಿ ಅಣೆ ಕಟ್ಟನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಲ್ಲಿ ಸುಮಾರು 400 ಕಿಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಈ ಯೋಜನೆ ಯಲ್ಲಿ ನಿರ್ಮಾಣವಾದ ಕಿಂಡಿ ಅಣೆ ಕಟ್ಟುಗಳ ಪೈಕಿ ನರಿಂಗಾನದಲ್ಲಿ ನಿರ್ಮಾ ಣವಾದ ಕಿಂಡಿ ಅಣೆಕಟ್ಟನ್ನು ಪ್ರಥಮ ವಾಗಿ ಉದ್ಘಾಟಿಸಲಾಗಿದೆ’ ಎಂದರು.

‘ನರೇಗಾ ಯೋಜನೆಯಡಿ ದುಡಿಯುವ ಮಹಿಳಾ ಕಾರ್ಮಿಕರಿಗೆ ಅವರ ಪುಟ್ಟ ಮಕ್ಕಳಿಗೆ ಕೆಲಸದ ಸ್ಥಳದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯನ್ನು ಕೂಡಾ ಸರ್ಕಾರ ಮಾಡುತ್ತಿದ್ದು. ಕೆಲಸ ಮಾಡಿದ 15 ದಿವಸದೊಳಗೆ ಕೂಲಿ ಸಿಗುವಂತಹ ವ್ಯವಸ್ಥೆಯನ್ನು ಕೂಡಾ ಸಮರ್ಪಕವಾಗಿ ಮಾಡಲಾಗಿದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯು ಸಮೃದ್ಧ ಜಲಸಂಪತ್ತಿಗೆ ಹೆಸರು ವಾಸಿಯಾಗಿತ್ತು. ಆದರೆ ಇತ್ತೀಚೆಗೆ ಸರ್ಕಾರವು ಬಂಟ್ವಾಳ ಮತ್ತು ಮಂಗ ಳೂರು ತಾಲೂಕನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವುದು ಆಶ್ಚರ್ಯ ತಂದಿದೆ. ಅಂದರೆ ಇಲ್ಲಿ ಯಥೇಚ್ಚವಾಗಿ ಮಳೆ ಬಂದರೂ ಅದು ಸಮುದ್ರ ಸೇರುತ್ತಿವೆ.

ಹಿಂದಿನ ಕಾಲದಲ್ಲಿ ಅಣೆಕಟ್ಟುಗಳ ಮೂಲಕ ನೀರನ್ನು ನಿಲ್ಲಿಸಿ ಸಂರಕ್ಷಿಸುವ ಕೆಲಸ ನಡೆಯುತ್ತಿತ್ತು. ಇದೀಗ ಜಿಲ್ಲಾ ಪಂಚಾಯಿತಿ ಕೂಡಾ ನರೇಗ ಯೋಜನೆಯಡಿ ನೀರನ್ನು ಸಂರಕ್ಷಿಸುವ ದೃಷ್ಟಿಯಿಂದ ಕಿಂಡಿ ಅಣೆಕಟ್ಟು ನಿರ್ಮಿ ಸುವ ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ‘ನರಿಂಗಾನ ಮೋರ್ಲದ ಕಿಂಡಿ ಅಣೆಕಟ್ಟಿನ ನರೇಗ ಕಾಮಗಾರಿಯಡಿ ಮಹಿಳಾ ಕಾರ್ಮಿಕರೇ ದುಡಿದಿರುವುದು ವಿಶೇಷ. ಈ ಕಿಂಡಿ ಅಣೆಕಟ್ಟಿನಿಂದ ಈ ಭಾಗದ ನೀರಿನ ಸಮಸ್ಯೆ ಪರಿಹಾರ ಕಾಣಲಿದೆ’ ಎಂದು ಹೇಳಿದರು.

ನರಿಂಗಾನ ಗ್ರಾಮದ ಮೊಂಟೆ ಪದವು ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ಈ ಭಾರಿಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಹಮ್ಮದ್ ನೌಷದ್, ತಸ್ಲಿಮಾ, ಪ್ರತಿಜ್ಞಾ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ತಾಲ್ಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ಪದ್ಮನಾಭ ನರಿಂಗಾನ, ಮಹಮ್ಮದ್ ಅಸೈ, ಜನಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಪಿಡಿಒ ನಳಿನಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.