ADVERTISEMENT

ಅಲೆಗಳ ಅಬ್ಬರ: ಕುಟುಂಬಗಳ ಸ್ಥಳಾಂತರ

ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 11:34 IST
Last Updated 23 ಏಪ್ರಿಲ್ 2018, 11:34 IST
ಸೋಮೇಶ್ವರ ಉಚ್ಚಿಲದಲ್ಲಿ ಮನೆಯ ಅಂಗಳಕ್ಕೆ ಸಮುದ್ರದ ನೀರು ನುಗ್ಗಿರುವುದು.
ಸೋಮೇಶ್ವರ ಉಚ್ಚಿಲದಲ್ಲಿ ಮನೆಯ ಅಂಗಳಕ್ಕೆ ಸಮುದ್ರದ ನೀರು ನುಗ್ಗಿರುವುದು.   

ಉಳ್ಳಾಲ: ಸೋಮೇಶ್ವರದ ಉಚ್ಚಿಲ ಸಮುದ್ರ ತೀರದಲ್ಲಿ ಅಲೆಗಳ ರಭಸ ಶನಿವಾರ ತಡರಾತ್ರಿಯಿಂದ ಹೆಚ್ಚಿದ್ದು, 50  ಮನೆಗಳಿಗೆ ನೀರು ಅಪ್ಪಳಿಸುತ್ತಿದ್ದರೆ, ಮೂರು ಕುಟುಂಬವನ್ನು ಭಾನುವಾರ ಸಂಜೆಯ ವೇಳೆ ಸ್ಥಳಾಂತರಿಸಲಾಗಿದೆ.

ಶನಿವಾರ ತಡರಾತ್ರಿ ಸಮುದ್ರದಲ್ಲಿ ಬೀಸಿದ ಗಾಳಿಯಿಂದ ಕಡಲಬ್ಬರ ಜೋರಾಗಿದೆ. ಸೋಮೇಶ್ವರದ ಉಚ್ಚಿ ಲದ ತೀರಾ ಅಪಾಯದಲ್ಲಿದ್ದ ಬೀಚ್ ರೋಡ್ ನಿವಾಸಿ ಮರಳಿ ಮನೋಹರ್ ಉಚ್ಚಿಲ್, ರಾಮಚಂದ್ರ, ಸುಧೀರ್ ಎಂಬುವರ ಕುಟುಂಬಗಳನ್ನು ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ಉಚ್ಚಿಲ ಬೀಚ್ ರೋಡ್ ಬಳಿಯಿ ರುವ ಸುಮಾರು 50 ಮನೆಗಳಿಗೆ ಸಮುದ್ರದ ಅಲೆಗಳು ಭಾನುವಾರ ಸಂಜೆಯವರೆಗೂ ಅಪ್ಪಳಿಸುತ್ತಲೇ ಇದ್ದವು. ಹಲವೆಡೆ ಮನೆ ಒಳಗಡೆ ನೀರು ನುಗ್ಗಿದ್ದು, ಹಲವು ಮನೆಗಳ ಅಂಗಳ ಸಂಪೂರ್ಣ ಸಮುದ್ರದ ನೀರಿನಿಂದ ಆವೃತವಾಗಿದೆ.

ADVERTISEMENT

ಅಗ್ನಿ ಶಾಮಕ ದಳ  ಕಾರ್ಯಾಚರಣೆ: ಭಾನುವಾರ ಮಧ್ಯಾಹ್ನ ವೇಳೆ ಸಮುದ್ರದ ಅಲೆಗಳು ಜೋರಾಗಿ ಹೊಡೆ ಯಲು ಆರಂಭವಾದ ಕಾರಣ ಸೋಮೇಶ್ವರ ಗ್ರಾಮ ಪಂಚಾಯಿತಿ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ ನೀಡಿದೆ. ಸಿಬ್ಬಂದಿ ಮನೆಮಂದಿಯನ್ನು ಸ್ಥಳಾಂತ ರಿಸುವಲ್ಲಿ ಸಹಕರಿಸಿದರು. ಮನೆ ಅಂಗಳದಲ್ಲಿ ತುಂಬಿದ ನೀರು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಮುಂಜಾಗ್ರತಾ ಕ್ರಮವಾಗಿ ಉಚ್ಚಿಲ ಸಮುದ್ರ ತೀರದಲ್ಲೇ ಬೀಡುಬಿಟ್ಟಿದ್ದಾರೆ.

ಜಿಲ್ಲಾಧಿಕಾರಿ-ಕಂದಾಯ ಇಲಾಖೆ ಭೇಟಿ: ಸೋಮೇಶ್ವರ ಉಚ್ಚಿಲ ಸಮುದ್ರ ತೀರದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಉಪವಿಭಾಗಾಧಿಕಾರಿ ಮಹೇಶ್ ಕರ್ಜಗಿ, ಭೇಟಿ ನೀಡಿದರು. ತಹಶೀಲ್ದಾರ್ ಸಂತೋಷ್ , ಕಂದಾಯ ಅಧಿಕಾರಿ ಜೋಸ್ಲಿನ್ ಸ್ಟೀಫನ್ ಗ್ರಾಮಕರಣಿಕ ಲಾವಣ್ಯ, ಸೋಮೇಶ್ವರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ್, ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ , ತಾಲ್ಲೂಕು ಪಂಚಾಯಿತಿ ಸದಸ್ಯ ರವಿಶಂಕರ್ , ಪಂಚಾಯಿತಿ ಸದಸ್ಯರಾದ ಅಜಿತ್ ಕುಮಾರ್ ಶೆಟ್ಟಿ, ಸಚಿನ್ ಸಹಿತ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಪಾಯದಂಚಿನಲ್ಲಿರುವ ಮನೆಮಂದಿಗೆ ಸ್ಥಳಾಂತರವಾಗುವಂತೆ ಸೂಚಿಸಿದ್ದಾರೆ. ಸ್ಥಳದಲ್ಲಿ ಉಳ್ಳಾಲ ಠಾಣಾ ಪೊಲೀಸರು ಠಿಕಾಣಿ ಹೂಡಿದ್ದಾರೆ.

‘ಕಣ್ಣೂರಿನಿಂದ ಮೀನುಗಾರಿಕೆ ಬಿಟ್ಟು ಹಿಂತಿರುಗಿದೆವು': ಶನಿವಾರ ಬೆಳಿಗ್ಗೆ ಪರ್ಸೀನ್ ಬೋಟಿನಲ್ಲಿ ಉಳ್ಳಾಲದಿಂದ ನಾಲ್ವರ ತಂಡ ಮೀನುಗಾರಿಕೆಗೆಂದು ತೆರಳಿದ್ದೆವು. ಕಣ್ಣೂರು ಭಾಗದಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸುವ ಸಂದರ್ಭ ಸಮುದ್ರದ ಅಲೆ ಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಬಳಿಕ ಜೋರಾಗಿ ಗಾಳಿ ಬೀಸಲು ಆರಂಭವಾಗಿತ್ತು. ತದನಂತರ ಕೆಲವೇ ನಿಮಿಷಗಳಲ್ಲಿ ಹವಾಮಾನ ಇಲಾಖೆಯ ಸಂದೇಶ ಮೊಬೈಲಿಗೆ ಬರುತ್ತಿದ್ದಂತೆ ಮೀನುಗಾರಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೆ ಉಳ್ಳಾಲದತ್ತ ವಾಪಸ್ಸಾಗಿದ್ದು, ಭಾನುವಾರ ನಸುಕಿನ ಜಾವ ಉಳ್ಳಾಲದತ್ತ ತಲುಪಿದ್ದೇವೆ. ಅಳಿವೆಬಾಗಿಲು ಬಳಿ ದೋಣಿ ಸಾಗಲು ಕಷ್ಟವಾಗಿತ್ತು ಎಂದು ಮೀನುಗಾರ ಶರತ್ ತಿಳಿಸಿದರು.

ಹಲವು ದೋಣಿಗಳು ವಾಪಸ್‌ : ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ದೋಣಿಗಳು ಬಹುತೇಕ ವಾಪಸಾಗಿವೆ. ಕರಾವಳಿ ರಕ್ಷಣಾ ಪಡೆಯವರು ಧ್ವನಿವರ್ಧಕ ಮೂಲಕ  ಸಮುದ್ರದಲ್ಲಿ ಘೋಷಣೆ ಹಾಕಿದ ಹಿನ್ನೆಲೆಯಲ್ಲಿ ಅಪಾಯವನ್ನರಿತು ದೋಣಿಗಳು ವಾಪಸ್‌ ದಡ ಸೇರಿವೆ. ಹವಾಮಾನ ಇಲಾಖೆಯಿಂದ ಮೂರು ದಿನಗಳ ಹಿಂದೆಯೇ ಸಮುದ್ರದಲ್ಲಿ ಜೋರಾಗಿ ಗಾಳಿ ಬೀಸುವ ಸಂಭವ ಇರುವ ಬಗ್ಗೆ ಸೂಚನೆಯಿತ್ತು.

ರಸ್ತೆಗೆ ನುಗ್ಗಿದ ನೀರು: ಉಳ್ಳಾಲದ ಕೋಟೆಪುರ ಮೀನಿನ ತೈಲ ಸಂಸ್ಕರಣಾ ಘಟಕದ ಎದುರುಗಡೆ ದಂಡೆಗೆ ಸಮುದ್ರ ಅಲೆಗಳು ಹೊಡೆಯುತ್ತಿರುವ ರಭಸಕ್ಕೆ ರಸ್ತೆಯಿಡೀ ನೀರು ತುಂಬಿವೆ. ಘಟಕಗಳಿಗೆ ತೆರಳುವ ವಾಹನಗಳು ಸಂಚಾರ ಸ್ಥಗಿತಗೊಳಿಸಿವೆ.

ಉಳ್ಳಾಲ ಮೊಗವೀರಪಟ್ನ ತೀರ ದಲ್ಲಿ ಭಾನುವಾರವಾಗಿದ್ದರಿಂದ ಪ್ರವಾಸಿಗರು ಸ್ಥಳಕ್ಕಾಗಮಿಸಿದರೂ ಸಮುದ್ರದ ಅಲೆಗಳು ಅಪ್ಪಳಿಸಿ ವಾಹನ ನಿಲ್ಲಿಸುವ ಸ್ಥಳದಲ್ಲಿ ನೀರು ಶೇಖರಣೆಗೊಂಡಿದ್ದರಿಂದ ಹಲವರು  ಹಿಂತಿರುಗಿದರು. ಈ ಭಾಗದಲ್ಲಿ ಮನೆಗಳಿಗೆ ಹಾನಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.