ADVERTISEMENT

ಆಗಸ್ಟ್‌ 1 ರಿಂದ ಹೊಸ ವ್ಯವಸ್ಥೆ: ಖಾದರ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 9:42 IST
Last Updated 24 ಜೂನ್ 2017, 9:42 IST

ಮಂಗಳೂರು: ಮೀನುಗಾರರಿಗೆ ಸೀಮೆ ಎಣ್ಣೆ ವಿತರಣೆಯಲ್ಲಿ ರಾಜ್ಯ ಸರ್ಕಾರ ಹೊಸ ವ್ಯವಸ್ಥೆಯನ್ನು ಅಳವಡಿಸಲಿದ್ದು, ಮಾರುಕಟ್ಟೆ ದರದಲ್ಲಿಯೇ ಮೀನು ಗಾರರು ಸೀಮೆಎಣ್ಣೆ ಖರೀದಿ ಮಾಡ ಬೇಕು. ಸಬ್ಸಿಡಿ ಹಣವನ್ನು ನೇರವಾಗಿ ಮೀನುಗಾರರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಈ ಯೋಜನೆಯು ಮೀನು ಗಾರಿಕೆ ಆರಂಭವಾಗಲಿರುವ ಆಗಸ್ಟ್‌ 1 ರಿಂದ ಜಾರಿಗೆ ಬರಲಿದೆ ಎಂದರು.

ಸಬ್ಸಿಡಿಯಲ್ಲಿ ಪೂರೈಸುವ ಸೀಮೆ ಎಣ್ಣೆಯ ಕೊರತೆಯಿಂದಾಗಿ ಕರಾವಳಿ ಜಿಲ್ಲೆಗಳ ಮೀನುಗಾರರು ಪ್ರತಿ ವರ್ಷ ಸಂಕಷ್ಟ ಎದುರಿಸುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೀಮೆಎಣ್ಣೆ ಸಬ್ಸಿಡಿಯನ್ನು ಮೀನುಗಾರರ ಬ್ಯಾಂಕ್‌ ಖಾತೆಗೆ ಜಮಾ ಮಾಡಲು ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ADVERTISEMENT

ಮೀನುಗಾರರು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ ಸೀಮೆಎಣ್ಣೆಯನ್ನು ₹62 ದರದಲ್ಲಿ ಖರೀದಿ ಮಾಡಬೇಕು. ಅವ ರಿಗೆ ಪ್ರತಿ ಲೀಟರ್‌ಗೆ ₹25 ಸಬ್ಸಿಡಿ ಹಣ ವನ್ನು ಆರ್‌ಟಿಜಿಎಸ್‌ ಮೂಲಕ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು ಎಂದರು.

ಬಿಪಿಎಲ್ ಪಡಿತರ ಚೀಟಿ ವಿತರ ಣೆಯ ಕುರಿತು ಮಾಹಿತಿ ನೀಡಿದ ಸಚಿವ ಖಾದರ್, ಆನ್‌ಲೈನ್‌ ಮೂಲಕ ಇಲಾಖೆ ಯಿಂದ ಸ್ವೀಕೃತವಾಗಿರುವ ಅರ್ಜಿಗಳನ್ನು ಗ್ರಾಮ ಪಂಚಾಯಿತಿಗಳಲ್ಲಿರುವ ಜನ ಸ್ನೇಹಿ ಕೇಂದ್ರಗಳಿಗೆ ಕಳುಹಿಸಲಾಗಿದ್ದು, ಅಗತ್ಯ ಮಾನದಂಡಗಳ ಪರಿಶೀಲನೆಯ ನಂತರ ಪಡಿತರ ಚೀಟಿಗಳನ್ನು ವಿತರಿಸ ಲಾಗುವುದು ಎಂದು ಹೇಳಿದರು.

ಆಯಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಜನಸ್ನೇಹಿ ಕೇಂದ್ರಗಳಿಗೆ ಅರ್ಜಿಗಳನ್ನು ರವಾನಿಸಲಾಗಿದೆ. ಅಲ್ಲಿ ರುವ ಗ್ರಾಮ ಲೆಕ್ಕಿಗರ, ಅರ್ಜಿದಾರರ ಮನೆಗೆ ತೆರಳಲಿದ್ದು, ಆಧಾರ್‌ ಸಂಖ್ಯೆ ಸೇರಿದಂತೆ ಅಗತ್ಯ ಮಾನದಂಡಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಮಾನದಂಡ ಗಳ ಕುರಿತು ಜನಸ್ನೇಹಿ ಕೇಂದ್ರದ ಮೂಲಕ ಇಲಾಖೆಗೆ ಸಲ್ಲಿಕೆ ಆಗಲಿದ್ದು, ನಂತರ ಅರ್ಹರಿಗೆ ಪಡಿತರ ಚೀಟಿಗಳನ್ನು ಅಂಚೆ ಮೂಲಕ ಮನೆಗಳಿಗೆ ಕಳುಹಿ ಸಲಾಗುವುದು ಎಂದು ವಿವರಿಸಿದರು.

‘ಶಾಂತಿ ಕಾಪಾಡಲು ಸಹಕರಿಸಿ’
ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ಜಿಲ್ಲೆಯ ಜನರು ಸಹಕಾರ ನೀಡಬೇಕು. ಕೆಲವು ಕಿಡಿಗೇಡಿಗಳು ಕಾನೂನು ಕೈಗೆತ್ತಿಕೊಳ್ಳುತ್ತಿದ್ದು, ಅಂಥವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಖಾದರ್‌ ಹೇಳಿದರು.

ವೈಯಕ್ತಿಕ ವಿಷಯಗಳು ಕೋಮುಬಣ್ಣ ಪಡೆಯುತ್ತಿವೆ ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತಪ್ಪಿತಸ್ಥರನ್ನು ಬಂಧಿಸುವಂತೆ ಪೊಲೀಸ್‌ ಅಧಿಕಾರಿ ಗಳಿಗೆ ಸೂಚನೆ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.

ಭೂಷಣ್ ಬೊರಸೆ ಅವರ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಶಾಂತಿ, ಕಾನೂನು, ಸುವ್ಯವಸ್ಥೆ ಕಾಪಾಡಲು ಖಡಕ್ ಅಧಿಕಾರಿಯ ಅಗತ್ಯವಿದೆ ಎಂದಷ್ಟೇ ಹೇಳಿದರು.

‘ಅರಗಿಸಲು ಆಗುತ್ತಿಲ್ಲ’
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಸಹಕಾರ ಬ್ಯಾಂಕ್‌ಗಳಲ್ಲಿನ ₹50 ಸಾವಿರ ಸಾಲಮನ್ನಾ ಮಾಡಿದ್ದು, ಇದನ್ನು ಪ್ರತಿಪಕ್ಷಗಳಿಗೆ ಅರಗಿಸಲು ಆಗುತ್ತಿಲ್ಲ. ಇದಕ್ಕಾಗಿಯೇ ಬಿಜೆಪಿ ಮುಖಂಡರು, ಗೋವಿಂದರಾಜು ಡೈರಿ ಪ್ರಕರಣವನ್ನು ಮತ್ತೆ ಕೆದಕುತ್ತಿದ್ದಾರೆ ಎಂದು ಸಚಿವ ಖಾದರ್‌ ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಎಂದಿಗೂ ಹೇಳಿಲ್ಲ. ಬದಲಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದೀಗ ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ ಸಾಲಮನ್ನಾ ಮಾಡಿದ್ದು, ಬಿಜೆಪಿಯವರು ಕೇಂದ್ರ ಸರ್ಕಾರದ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಲು ಮುಂದಾಗಬೇಕು ಎಂದು ಸವಾಲು ಹಾಕಿದರು.

* * 

ಸಾಂಪ್ರದಾಯಿಕ ಮೀನುಗಾರರಿಗೆ ಸೀಮೆಎಣ್ಣೆ ಅವಶ್ಯಕವಾಗಿದ್ದು, ಈ ವರ್ಷ ಸೀಮೆಎಣ್ಣೆಯ ಸಬ್ಸಿಡಿ ಪ್ರಮಾಣ ₹60 ಕೋಟಿಯಾಗಲಿದೆ.
ಯು.ಟಿ. ಖಾದರ್‌
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.