ADVERTISEMENT

ಆಳ್ವಾಸ್‌ನಲ್ಲಿ ಗಮನ ಸೆಳೆದ ಮೋಟೋರಿಗ್

ಸಾಹಸ ದೃಶ್ಯಗಳಿಗೆ ಸಾಕ್ಷಿಯಾದ ಶೋಭಾವನ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:36 IST
Last Updated 22 ಮೇ 2017, 5:36 IST
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 4ನೇ ವರ್ಷದ ಆಳ್ವಾಸ್ ಮೋಟೋರಿಗ್–-2017 ಆಟೊ ಎಕ್ಸ್‌ಪೊ, ಸಾಹಸ ಪ್ರದರ್ಶನ ನಡೆಯಿತು
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 4ನೇ ವರ್ಷದ ಆಳ್ವಾಸ್ ಮೋಟೋರಿಗ್–-2017 ಆಟೊ ಎಕ್ಸ್‌ಪೊ, ಸಾಹಸ ಪ್ರದರ್ಶನ ನಡೆಯಿತು   

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 4ನೇ ವರ್ಷದ ಆಳ್ವಾಸ್ ಮೋಟೋರಿಗ್-2017 ಆಟೊ ಎಕ್ಸ್‌ಪೊ, ಸಾಹಸ ಪ್ರದರ್ಶನ ಮಿಜಾರಿನ ಶೋಭಾವನದಲ್ಲಿ ಭಾನುವಾರ ನಡೆಯಿತು. 200ಕ್ಕೂ ಹೆಚ್ಚು ದ್ವಿಚಕ್ರ ವಾಹನ, ಕಾರುಗಳು ಪ್ರದರ್ಶನಗೊಂಡವು.

ಸೂಪರ್ ಬೈಕ್ಸ್, ಸೂಪರ್ ಕಾರು, ಲಕ್ಸುರಿ ಕಾರು, ವಿಂಟೇಜ್ ಕಾರುಗಳ ಪ್ರದರ್ಶನ ಗಮನ ಸೆಳೆಯಿತು. ಅಂತರರಾಷ್ಟ್ರೀಯ ಖ್ಯಾತಿಯ ಗೌರವ್ ಖಾತ್ರಿ ಜೈಪುರ ಅವರಿಂದ ಫ್ರೀ ಸ್ಟೈಲ್ ಜಂಪ್ ಮೋಟೋರಿಗ್‌ನ ವಿಶೇಷ ಆಕರ್ಷಣೆಯಾಗಿತ್ತು.

ನ್ಯಾಷನಲ್ ಫ್ರೀ ಸ್ಟೈಲ್ ಮೋಟಾರ್ ಸ್ಪೋರ್ಟ್‌ ರೈಡರ್ ಗೌರವ್ ಖಾತ್ರಿ ಅವರು 75 ಅಡಿ ಉದ್ದಕ್ಕೆ ಐದು ಬಸ್‌ಗಳ ಮೇಲಿನಿಂದ ಜಿಗಿದು ದಾಖಲೆಯ ಪ್ರದರ್ಶನ ನೀಡಿದರು. ಭಾರತದಲ್ಲಿ ಬಸ್ ಮೇಲಿನಿಂದ ಫ್ರೀ ಸ್ಟೆಲ್ ಜಂಪ್ ಮಾಡಿದ ಅಪರೂಪ ಕ್ಷಣಕ್ಕೆ ಶೋಭಾವನ ಸಾಕ್ಷಿಯಾಯಿತು.

ಕಾರುಗಳ ಮೇಲೆಯೂ ಜಿಗಿದು ಗೌರವ್  ಸಾಹಸವನ್ನು ಪ್ರದರ್ಶಿಸಿದರು. ಇಂಡಿಯನ್ ಮೋಟಾರ್ ರ‍್ಯಾಲಿ  ಸೂಪರ್ ಕ್ರಾಸ್ ಚಾಂಪಿಯನ್ ಅದ್ನಾನ್ ಹಾಗೂ ಸುದೀಪ್ ಕೊಠಾರಿಯವರಿಂದ ಸೂಪರ್ ಕ್ರಾಸ್ ಸಿಕ್ವೇನ್ಸ್ ಸ್ಟಂಟ್‌ಗಳು ನಡೆದವು.

ಎಕ್ಸೋಟಿಕ್ ಹಾಗೂ ಪ್ರೀಮಿಯಂ ಕಾರುಗಳ ರ‍್ಯಾಂಪ್‌ ಷೋ. ಮಂಗಳೂರಿನ ಇಂಡಿಯನ್ ರ‍್ಯಾಲಿ ಚಾಂಪಿಯನ್ ಅರ್ಜುನ್ ರಾವ್ ಹಾಗೂ ಇಂಡಿಯನ್ ರ‍್ಯಾಲಿ ಚಾಂಪಿಯನ್ ರಾಹುಲ್ ಕಾಂತರಾತ್‌ ಅವರಿಂದ ರ‍್ಯಾಲಿ ಸಿಕ್ವೇನ್ಸ್, ಸ್ಟಂಟ್, ಉಡುಪಿಯ ಹಾಟ್ ಪಿಸ್ಟನ್ಸ್ ಗ್ರೂಪ್‌ನಿಂದ ದ್ವಿಚಕ್ರ ವಾಹನಗಳಿಂದ ಫ್ರೀ ಸ್ಟೈಲ್ ಸಾಹಸ ಪ್ರದರ್ಶನಗಳು ನಡೆದವು.  ಟಿಎಎಸ್ಸಿ, ಐಎಂಎಸ್ಸಿ, ಕೋಸ್ಟಲ್ ರೈಡರ್ಸ್, ಕೆಎಲ್14 ಹಾಗೂ ಟೀಮ್ ಬೆದ್ರ ಯುನೈಟೆಡ್ ಅವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಅದಾನಿ ಯುಪಿಸಿಎಲ್ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಎಂ ಕಿಶೋರ್ ಆಳ್ವ ಉದ್ಘಾಟಿಸಿದರು. ಕೆಎಲ್14 ನೇತೃತ್ವ ವಹಿಸಿದ್ದ ಮೂಸ ಶರೀಫ್, ಇಂಡಿಯನ್ ರ‍್ಯಾಲಿ ಚಾಂಪಿಯನ್ ಅಶ್ವಿನ್ ನಾಯ್ಕ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, ಮೂಡುಬಿದಿರೆಯ ಉದ್ಯಮಿ.

ಅಬುಲ್ ಆಲಾ ಪುತ್ತಿಗೆ, ಮಂಗಳೂರಿನ ಮಾಂಡವಿ ಪ್ರೈವೇಟ್ ಲಿಮಿಟೆಡ್‌ನ  ನಿರ್ದೇಶಕ ಸಂಜಯ್ ರಾವ್, ವಿಜ್ಞಾನಿ ಡಾ.ಹರೀಶ್ ಭಟ್, ನಿಶ್ಮಿತಾ ಗ್ರೂಪ್‌ನ ಮಾಲೀಕ ನಾರಾಯಣ ಪಿ.ಎಂ. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್, ಮೋಟೊರಿಗ್ ಸಂಯೋಜಕ ಮುದ್ದುಕೃಷ್ಣ, ಅಕ್ಷಯ್ ಜೈನ್ ಉಪಸ್ಥಿತರಿದ್ದರು.  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ  ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.