ADVERTISEMENT

ಎಂಡೊ ಪೀಡಿತರಿಗೆ ಪುನರ್ವಸತಿ ಕೇಂದ್ರ

₹7.50 ಕೋಟಿ ವೆಚ್ಚದ ಪ್ರಸ್ತಾವ: ಸಚಿವ ಪ್ರಮೋದ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 8:53 IST
Last Updated 16 ಫೆಬ್ರುವರಿ 2017, 8:53 IST
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಎಂಡೊ ಸಾಮಾನ್ಯ ಸಮಿತಿ ಸಭೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. 				                    ಪ್ರಜಾವಾಣಿ ಚಿತ್ರ
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಎಂಡೊ ಸಾಮಾನ್ಯ ಸಮಿತಿ ಸಭೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಪ್ರಜಾವಾಣಿ ಚಿತ್ರ   
ಉಡುಪಿ: ಜಿಲ್ಲೆಯ ಎಂಡೊ ಪೀಡಿತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪಿಸಲು ₹7.50 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಮೀನುಗಾರಿಕೆ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
 
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಎಂಡೊ ಸಾಮಾನ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂಡೊ ಪೀಡಿತರ ಶಾಶ್ವತ ಪುನರ್ವಸತಿ ಕೇಂದ್ರ ಪ್ರಾರಂಭಿಸಲು 5 ಎಕರೆ ಜಾಗದ ಅವಶ್ಯಕತೆಯಿದೆ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಂಡೊ ಪೀಡಿತರಿರುವ ಕುಂದಾಪುರ ತಾಲ್ಲೂಕಿನಲ್ಲಿ ಕೇಂದ್ರ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಬೈಂದೂರು ವ್ಯಾಪ್ತಿಯಲ್ಲಿ ಜಾಗ ಇದ್ದರೆ ಗುರುತಿಸಿ ಎಂದು ತಹಶೀಲ್ದಾರ್ ಅವರಿಗೆ ತಾಕೀತು ಮಾಡಿದರು. ಬೈಂದೂರು ವಲಯದಲ್ಲಿರುವ ಕೆಲವು ಶಾಲೆಗಳಿಗೆ ಹೊಂದಿಕೊಂಡಂತೆ ಜಾಗವಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಿ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
 
ಸವಲತ್ತುಗಳನ್ನು ವಿತರಿಸುವಾಗ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಮಾಸಾಶನಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಿ. ಎಂಡೊ ಪೀಡಿತರಿಗೆ ಬಸ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳಿ, ಈ ಬಾರಿ ಬಜೆಟ್‌ನಲ್ಲಿ ಅಂಗವಿಕಲರಿಗೆ ಹಲವು ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅಗತ್ಯ ಬೇಡಿಕೆಗಳ ಕುರಿತು ಸಂಘ ಸಂಸ್ಥೆ ಗಳಿಂದ ಮನವಿ ಸ್ವೀಕರಿಸಿ ಎಂದರು.
 
ಸಮೀಕ್ಷೆಯಿಂದ ಬಿಟ್ಟುಹೋದ ಎಂಡೊ ಪೀಡಿತರಿಗಾಗಿ ಜಿಲ್ಲೆಯಲ್ಲಿ 28 ಸ್ಕ್ರೀನಿಂಗ್ ಶಿಬಿರ ನಡೆಸಲಾಗಿದೆ. ಜಿಲ್ಲೆಯಲ್ಲಿ ಪ್ರಾರಂಭದಲ್ಲಿ ಒಟ್ಟು 1,328 ಎಂಡೊ ಪೀಡಿತರಿದ್ದು, ಅವರಲ್ಲಿ 33 ಮಂದಿ ಮರಣಹೊಂದಿದ್ದು, ಪ್ರಸ್ತುತ 1295 ಮಂದಿಗೆ ಮಾಸಾಶನ ವಿತರಿಸ ಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಮಾಹಿತಿ ನೀಡಿದರು.  
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾ ಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧ, ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿ ಗಳು ಇದ್ದರು.
 
* ಎಂಡೊ ಪೀಡಿತರನ್ನು ಗುರುತಿಸುವಾಗ ಮತ್ತು ಸವಲತ್ತುಗಳನ್ನು ವಿತರಿಸುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಸರಿಸಿರುವ ಮಾನದಂಡಗಳನ್ನೇ ಅನುಸರಿಸಿ.
- ಪ್ರಮೋದ್ ಮಧ್ವರಾಜ್, ಸಚಿವ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.