ADVERTISEMENT

ಕದ್ರಿ ಕ್ಷೇತ್ರದಲ್ಲಿ ಕೃಷ್ಣರ ಕಲರವ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 9:36 IST
Last Updated 14 ಸೆಪ್ಟೆಂಬರ್ 2017, 9:36 IST
ಕದ್ರಿ ಕ್ಷೇತ್ರದಲ್ಲಿ ಕೃಷ್ಣರ ಕಲರವ
ಕದ್ರಿ ಕ್ಷೇತ್ರದಲ್ಲಿ ಕೃಷ್ಣರ ಕಲರವ   

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ರಾಷ್ಟ್ರಮಟ್ಟದ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ನಡೆಯಿತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಏಕಕಾಲದಲ್ಲಿ ಒಟ್ಟು 30 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಸಂಘಟಕ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಪಿ. ಜಯರಾಮ ಭಟ್‌, ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ, ಮಾಜಿ ಮೇಯರ್‌ ಹರಿನಾಥ, ಪಾಲಿಕೆ ಸಚೇತಕ ಎಂ. ಶಶಿಧರ್‌ ಹೆಗ್ಡೆ, ಹರಿಕೃಷ್ಣ ಪುನರೂರು, ಪ್ರಮುಖರಾದ ರತ್ನಾಕರ ಜೈನ್‌, ದಿನೇಶ್‌ ದೇವಾಡಿಗ, ವಿಜಯಲಕ್ಷ್ಮೀ ಶೆಟ್ಟಿ, ಐತಪ್ಪ ನಾಯಕ್‌, ಲೀಲಾಕ್ಷ ಕರ್ಕೇರ, ಕದ್ರಿ ನವನೀತ್‌ ಶೆಟ್ಟಿ, ಸುಧಾಕರ ರಾವ್‌ ಪೇಜಾವರ ವೇದಿಕೆಯಲ್ಲಿದ್ದರು.

ಕೃಷ್ಣ ಕಲರವ: ಶ್ರೀ ಕೃಷ್ಣವೇಷ ಸ್ಪರ್ಧೆ ಈ ಬಾರಿ ವಿಶೇಷವಾಗಿ ಶ್ರೀಕೃಷ್ಣ ಗಾನ ವೈಭವ ಎಂಬ ವಿಭಾಗ ಸೇರಿದಂತೆ ಒಟ್ಟು 30 ವಿಭಾಗಗಳಲ್ಲಿ ನಡೆಯಿತು. ಕಂದ ಕೃಷ್ಣ ವಿಭಾಗ, ಮುದ್ದು ಕೃಷ್ಣ , ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ , ಗೀತಾ ಕೃಷ್ಣ, ಯಕ್ಷ ಕೃಷ್ಣ, ರಾಧಾಕೃಷ್ಣ, ಯಶೋದೆ ಕೃಷ್ಣ, ಶಂಖನಾದ, ಶಂಖ ಉದ್ಘೋಷ, ದೇವಕಿ ಕೃಷ್ಣ, ವಸುದೇವ ಕೃಷ್ಣ, ನಂದಗೋಕುಲ, ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸ ಪ್ರಶ್ನೆ ಸ್ಪರ್ಧೆ, ಛಾಯಾಕೃಷ್ಣ, ಶ್ರೀಕೃಷ್ಣ ವರ್ಣ ವೈಭವ ಚಿತ್ರಕಲಾ ಸ್ಪರ್ಧೆಗಳು ನಡೆದವು.

ADVERTISEMENT

ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಉಡುಗೊರೆಗಳು ಹಾಗೂ ಪ್ರಶಂಸಾ ಪತ್ರ ನೀಡಲಾಯಿತು. ಎಲ್ಲ ವಿಭಾಗದ ವಿಜೇತರಿಗೆ ಜತೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು. ಅತಿ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿದ ವಿದ್ಯಾ ಸಂಸ್ಥೆಗೆ ಪಾರಿತೋಷಕ, ಸ್ಪರ್ಧಿಸಿದ ಮಕ್ಕಳಿಗೆ ಬಿಸಿ ಹಾಲು, ಪೇಡಾ, ಐಸ್‌ಕ್ರೀಮ್‌, ಚಾಕಲೇಟ್‌ ನೀಡಲಾಯಿತು.

ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ, ಬೆಳೆಸುವ ಉದ್ದೇಶದಿಂದ ಕಳೆದ ಮೂರು ದಶಕಗಳಿಂದ ಈ ಸ್ಪರ್ಧೆ ಆಯೋಜಿಸಿಕೊಂಡು ಬರಲಾಗಿದೆ. ಪುಟಾಣಿ ಮನಸ್ಸುಗಳಲ್ಲಿ ಶ್ರೀಕೃಷ್ಣನ ಸ್ವರೂಪ ಕಂಡುಕೊಳ್ಳುವ, ಆ ಮೂಲಕ ಧಾರ್ಮಿಕ ಜಾಗೃತಿ ಸಮಾಜದಲ್ಲಿ ಮೂಡಿಸುವ ವಿಶೇಷ ಪ್ರಯತ್ನ ನಡೆಸಲಾಗಿದೆ. ಒಟ್ಟು 8 ವೇದಿಕೆಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಯಿತು. ಜತೆಗೆ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಉತ್ಸವದಲ್ಲಿ ಜೋಡಿಸಲಾಗಿತ್ತು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.