ADVERTISEMENT

ಕಾರಾಗೃಹ ಇಲಾಖೆಗೆ ಸವಾಲಾದ ಮಂಗಳೂರು ಜೈಲು!

ಹಗಲಿರುಳು ಸರ್ಪಗಾವಲು ಇದ್ದರೂ ಭದ್ರತೆ ಕುರಿತು ಪ್ರಶ್ನೆ ಮೂಡಿಸಿದ ಕೈದಿ ಪರಾರಿ ಪ್ರಕರಣ

ವಿ.ಎಸ್.ಸುಬ್ರಹ್ಮಣ್ಯ
Published 13 ಮಾರ್ಚ್ 2017, 6:23 IST
Last Updated 13 ಮಾರ್ಚ್ 2017, 6:23 IST

ಮಂಗಳೂರು: ರಾಜ್ಯದ ಅತ್ಯಂತ ಸೂಕ್ಷ್ಮ ಕಾರಾಗೃಹ ಎಂಬ ಹಣೆಪಟ್ಟಿ ಅಂಟಿಸಿ ಕೊಂಡಿರುವ ಇಲ್ಲಿನ ಜಿಲ್ಲಾ ಕಾರಾಗೃಹದ ನಿರ್ವಹಣೆ ಕಾರಾಗೃಹ ಇಲಾಖೆಯ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಜಿನ್ನಪ್ಪ ಪರವ ಎಂಬ ವಿಚಾರಣಾಧೀನ ಕೈದಿ ಗೋಡೆ ಹಾರಿ ತಪ್ಪಿಸಿ ಕೊಂಡಿರುವುದು ಕಾರಾಗೃಹದ  ಭದ್ರತೆ ಕುರಿತು ಪ್ರಶ್ನೆಗಳು ಏಳುವಂತೆ ಮಾಡಿದೆ.

ವಿಚಾರಣಾಧೀನ ಕೈದಿಗಳಾಗಿದ್ದ ಮಾಡೂರು ಯೂಸುಫ್‌ ಅಲಿಯಾಸ್‌ ಇಸುಬು ಮತ್ತು ಗಣೇಶ್‌ ಶೆಟ್ಟಿ ಎಂಬುವವರನ್ನು ಜೈಲಿನ ಒಳಗಡೆಯೇ ಮತ್ತೊಂದು ಕೈದಿಗಳ ಗುಂಪು 2015ರ ನವೆಂಬರ್‌ 2ರಂದು ಹತ್ಯೆ ಮಾಡಿತ್ತು. ಈ ಪ್ರಕರಣ ಈ ಜೈಲಿನ ಭದ್ರತೆ ಹೆಚ್ಚಳಕ್ಕೆ ಕಾರಣವಾಗಿತ್ತು. ಅಲ್ಲಿಯವರೆಗೂ ಜೈಲಿನ ಭದ್ರತೆಗೆ ಕಾರಾಗೃಹ ಇಲಾಖೆಯ ಸಿಬ್ಬಂದಿಯಷ್ಟೇ ಇದ್ದರು. ಆ ಬಳಿಕ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ (ಕೆಐಎಸ್‌ಎಫ್‌) ಕಮಾಂಡೋಗಳನ್ನು ಮಂಗಳೂರು ಕಾರಾಗೃಹದ ಭದ್ರತೆಗೆ ನಿಯೋಜಿಸಲಾಗಿತ್ತು. ಎರಡು ಹಂತದ ಭದ್ರತೆಯನ್ನು ಭೇದಿಸಿ ಜಿನ್ನಪ್ಪ ಪರಾರಿ ಯಾಗಿರುವುದು ಇಲಾಖೆಯನ್ನು ಚಿಂತೆಗೆ ತಳ್ಳಿದೆ.

250 ಕೈದಿಗಳನ್ನು ಇರಿಸಬಹುದಾದ ಸಾಮರ್ಥ್ಯ ಹೊಂದಿರುವ ಜಿಲ್ಲಾ ಕಾರಾಗೃಹದಲ್ಲಿ ಸದ್ಯ 424 ಕೈದಿಗಳನ್ನು ಇರಿಸಲಾಗಿದೆ. ಇದರಿಂದಾಗಿ ಇಡೀ ಕಾರಾಗೃಹ ಕಿಕ್ಕಿರಿದು ತುಂಬಿದೆ. ಕೈದಿಗಳ ಚಲನವಲನಗಳ ಮೇಲೆ ವೈಯಕ್ತಿಕವಾಗಿ ನಿಗಾ ಇರಿಸಲಾಗದಂತಹ ಒತ್ತಡದ ಸ್ಥಿತಿ ಯಲ್ಲಿ ಕಾರಾಗೃಹದ ಸಿಬ್ಬಂದಿ ಇದ್ದಾರೆ. ಗಂಭೀರ ಸ್ವರೂಪದ ಅಪರಾಧ ಎಸಗಿದ ವರು ಮತ್ತು ಕೋಮು ಸಂಬಂಧಿ ಅಪ ರಾಧ ಕೃತ್ಯಗಳಲ್ಲಿ ಭಾಗಿಯಾದ ಕೈದಿಗಳ ಸಂಖ್ಯೆ ಹೆಚ್ಚಿರುವುದು ಇಲಾಖೆಯ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.

ಸಿಬ್ಬಂದಿ ಕೊರತೆ: ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ 250 ಕೈದಿಗಳ ಸಾಮರ್ಥ್ಯದ ಆಧಾರದಲ್ಲಿ 40 ಹುದ್ದೆಗಳ ಮಂಜೂರಾತಿ ಇದೆ. ಜೈಲರ್‌ಗಳು ಸೇರಿದಂತೆ 20 ಹುದ್ದೆಗಳು ಖಾಲಿ ಇವೆ. ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 20 ಮಂದಿ ಮಾತ್ರ 40 ಜನರ ಕೆಲಸವನ್ನು ಮಾಡುತ್ತಿದ್ದಾರೆ. 424 ಕೈದಿಗಳನ್ನು ಇರಿಸಿಕೊಳ್ಳಲು 75 ಕ್ಕಿಂತಲೂ ಹೆಚ್ಚು ಸಿಬ್ಬಂದಿಯ ಅಗತ್ಯ ವಿದೆ. ದೀರ್ಘ ಕಾಲದಿಂದಲೂ ಈ ಕಾರಾಗೃಹವನ್ನು ಸಿಬ್ಬಂದಿ ಕೊರತೆ ಕಾಡುತ್ತಿದೆ. ಈ ಕಾರಣದಿಂದಾಗಿಯೇ ಆಗಾಗ ದುರ್ಘಟನೆಗಳು ಸಂಭವಿಸುತ್ತಿವೆ ಎಂದು ಕಾರಾಗೃಹ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಈ ಕಾರಾಗೃಹದ ಭದ್ರತೆಗೆ ಕೆಐಎಸ್‌ ಎಫ್‌ನ 50 ಕಮಾಂಡೋ ಗಳನ್ನು ನಿಯೋಜಿಸುವುದಾಗಿ ಕಾರಾಗೃಹ ಇಲಾ ಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಕಮಲ್‌ ಪಂತ್‌ ಅವರು 2015ರ ನವೆಂಬರ್‌ನಲ್ಲಿ ಪ್ರಕಟಿ ಸಿದ್ದರು. ಆದರೆ, 26 ಕಮಾಂಡೋಗ ಳನ್ನು ಮಾತ್ರ ನಿಯೋಜನೆ ಮಾಡ ಲಾಗಿತ್ತು. ಅವರಲ್ಲಿ ಏಳು ಮಂದಿ ಬೇರೆ ಉದ್ಯೋ ಗಗಳಿಗೆ ಆಯ್ಕೆಯಾಗಿದ್ದು, ಕಾರಾಗೃಹದ ಭದ್ರತಾ ಕೆಲಸದಿಂದ ಬಿಡುಗಡೆಯಾಗಿದ್ದಾರೆ. 19 ಕಮಾಂ ಡೋಗಳು ಮಾತ್ರ ಕಾರಾಗೃಹಕ್ಕೆ ಭದ್ರತೆ ಒದಗಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತನಿಖೆಗೆ ಸೂಚನೆ: ರಾಜ್ಯದ ಇತರೆ ಕಾರಾಗೃಹಗಳಿಗೆ ಹೋಲಿಸಿದರೆ ಮಂಗ ಳೂರು ಕಾರಾಗೃಹದಲ್ಲಿರುವ ಕೈದಿಗಳಿಗೆ ಹೊರಗಿನಿಂದ ಆಹಾರ ಮತ್ತು ಇತರೆ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ನಿತ್ಯವೂ ಹತ್ತಾರು ಮಂದಿ ಕೈದಿಗಳಿಗಾಗಿ ಆಹಾರ, ತರಕಾರಿ, ಹಣ್ಣುಹಂಪಲು, ಬಟ್ಟೆ ಮತ್ತಿತರ ವಸ್ತುಗಳನ್ನು ತಂದು ಕೊಡುತ್ತಿದ್ದಾರೆ. ವಿಚಾರಣಾಧೀನ ಕೈದಿಗಳ ಕೊಠಡಿಗಳಲ್ಲಿ ಮೊಬೈಲ್‌, ಸಿಮ್‌ಕಾರ್ಡ್‌ಗಳು, ಗಾಂಜಾ, ಚೂರಿ ಮತ್ತಿತರ ವಸ್ತುಗಳು ಪೊಲೀಸರ ತಪಾಸಣೆ ವೇಳೆ ಪತ್ತೆಯಾಗಿದ್ದವು. ಇದಕ್ಕೆ ಹೊರಗಿನಿಂದ ಆಹಾರ, ತರಕಾರಿ ಪೂರೈಕೆಗೆ ಅವಕಾಶ ನೀಡಿರುವುದೇ ಕಾರಣ ಎಂದು ಆಕ್ಷೇಪ ವ್ಯಕ್ತಪಡಿಸಿ ನಗರ ಪೊಲೀಸ್ ಕಮಿಷನರ್‌ ಎಂ.ಚಂದ್ರಶೇಖರ್‌ ಈ ಹಿಂದೆ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿ ಯಿಸಿದ ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರ್ದೇಶಕ ಎಚ್‌.ಎನ್‌. ಸತ್ಯನಾರಾಯಣ ರಾವ್, ‘ಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ಹೊರಗಿನಿಂದ ಆಹಾರ, ತರಕಾರಿ, ಹಣ್ಣುಹಂಪಲು ಪೂರೈಕೆಯಾಗುತ್ತಿರುವ ಬಗ್ಗೆ ದೂರುಗಳಿವೆ. ಕೈದಿಗಳನ್ನು ಭೇಟಿ ಮಾಡಲು ಅವಕಾಶ ನೀಡುವುದು ಜೈಲು ಅಧಿಕಾರಿಯ ವಿವೇಚನಾ ಅಧಿಕಾರದ ವ್ಯಾಪ್ತಿಯಲ್ಲಿದೆ. ಅದನ್ನು ಸರಿಯಾಗಿ ಬಳಕೆ ಮಾಡದಿದ್ದರೆ ಕ್ರಮ ಜರುಗಿಸುತ್ತೇವೆ. ಈ ಬಗ್ಗೆಯೂ ತನಿಖೆ ನಡೆಸುವಂತೆ ಕೈದಿ ಪರಾರಿ ಪ್ರಕರಣದ ತನಿಖೆ ನಡೆಸುತ್ತಿರುವ ಬೆಳಗಾವಿ ಕೇಂದ್ರ ಕಾರಾಗೃಹದ ಡಿಐಜಿ ಟಿ.ಪಿ.ಶೇಷ ಅವರಿಗೆ ನಿರ್ದೇಶನ ನೀಡಲಾಗಿದೆ’ ಎಂದರು.

ತನಿಖೆ ಆರಂಭಿಸಿದ ಡಿಐಜಿ
ಕೈದಿ ಜಿನ್ನಪ್ಪ ಪರವ ಪರಾರಿ ಪ್ರಕರಣದ ತನಿಖೆಗೆ ಕಾರಾಗೃಹ ಇಲಾಖೆ ಯಿಂದ ನಿಯೋಜನೆ ಗೊಂಡಿರುವ ಡಿಐಜಿ ಟಿ.ಪಿ.ಶೇಷ ಭಾನುವಾರದಿಂದ ತಮ್ಮ ಕೆಲಸ ಆರಂಭಿಸಿದ್ದಾರೆ.

ಭಾನುವಾರ ಬೆಳಿಗ್ಗೆಯೇ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಅವರು, ಸ್ಥಳ ಪರಿಶೀಲನೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದರು. ಅಧೀಕ್ಷಕ ವಿ.ಕೃಷ್ಣಮೂರ್ತಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.