ADVERTISEMENT

ಕಿಲ್ಲೆ ಮೈದಾನದಲ್ಲಿ ಸಂತೆಗೆ ಜೀವಕಳೆ!

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 7:44 IST
Last Updated 14 ಮಾರ್ಚ್ 2017, 7:44 IST
ನಗರಸಭೆಯ ಆಡಳಿತ ಪಕ್ಷದಿಂದ ಸಂತೆ ಉದ್ಘಾಟನೆ
ನಗರಸಭೆಯ ಆಡಳಿತ ಪಕ್ಷದಿಂದ ಸಂತೆ ಉದ್ಘಾಟನೆ   

ಪುತ್ತೂರು: ನಗರದಲ್ಲಿ ಕಳೆದ ಏಳು ತಿಂಗಳಿನಿಂದ ನಡೆದು ಬಂದಿದ್ದ ವಾರದ ‘ಸಂತೆ’ ರಗಳೆಗೆ ಸಂಪೂರ್ಣ ತೆರೆಬಿ ದ್ದಿದ್ದು, ಸೋಮವಾರ ಈ ಹಿಂದಿ ನಂತೆಯೇ ಕಿಲ್ಲೆ ಮೈದಾನದಲ್ಲೇ ವಾರದ ಸಂತೆ ನಡೆಯುವ ಮೂಲಕ ಸಂತೆ ಮತ್ತೆ ಜೀವಕಳೆ ಪಡೆದುಕೊಂಡಿದೆ!

ಸಂತೆ ಆರಂಭವಾಗುವುದರಲ್ಲಿಯೂ ನಗರಸಭೆಯ ಕಾಂಗ್ರೆಸ್ ಆಡಳಿತ ಮತ್ತು ವಿರೋಧ ಪಕ್ಷ ಬಿಜೆಪಿಯಿಂದ ಪ್ರತ್ಯೇಕ ವಾಗಿ ಉದ್ಘಾಟನೆಯ ಮೂಲಕ ದೊಂಬರಾಟ ನಡೆದಿರುವುದು ಇಲ್ಲಿನ ವಿಚಿತ್ರ ರಾಜಕೀಯಕ್ಕೊಂದು ಸಾಕ್ಷಿಯಾಗಿದೆ.

ಸಂತೆ ವ್ಯಾಪಾರಿಗಳ ಹಾಗೂ ನಗರ ಸಭೆಯಲ್ಲಿ ಬಹುಮತ ಹೊಂದಿದ್ದ ವಿರೋಧ ಪಕ್ಷ ಬಿಜೆಪಿ ಸದಸ್ಯರ ವಿರೋ ಧದ ನಡುವೆಯೇ ವಾರದ ಸಂತೆಯನ್ನು ಉಪ ವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಕಿಲ್ಲೆ ಮೈದಾನದಿಂದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದ ನಗರಸಭೆಯ ಕಾಂಗ್ರೆಸ್ ಆಡಳಿತ ಎಪಿಎಂಸಿ ಪ್ರಾಂಗಣದಲ್ಲಿ ಸಂತೆಗೆ ಪೂರಕ ಸ್ಪಂದನೆ ಸಿಗದ ಕಾರಣ ಆ ಬಳಿಕ ಕಿಲ್ಲೆ ಮೈದಾನದಲ್ಲೇ ಭಾನುವಾರ ನಡೆಸುವ ತೀರ್ಮಾನ ಕೈಗೊಂಡಿತ್ತು. ಆದರೆ ಭಾನು ವಾರದ ಸಂತೆಗೂ ನಿರೀಕ್ಷಿತ ಬೆಂಬಲ ವ್ಯಕ್ತವಾಗಿರಲಿಲ್ಲ. ಅಂತಿಮವಾಗಿ ನಗರ ಸಭೆಯ ಆಡಳಿತ ಜನತೆಯ ಅಭಿಪ್ರಾಯ ಗಳಿಗೆ ತಲೆಬಾಗಿ ವಾರದ ಸಂತೆಯನ್ನು ಸೋಮವಾರವೇ ನಡೆಸುವ ನಿರ್ಧಾರಕ್ಕೆ ಬಂದಿತು.

ADVERTISEMENT

ಆರಂಭದಿಂದಲೂ ವಾರದ ಸಂತೆ ಯನ್ನು ಸೋಮವಾರ ಕಿಲ್ಲೆ ಮೈದಾನ ದಲ್ಲಿಯೇ ನಡೆಸಬೇಕು ಎಂಬ ನಿರ್ಣಯ ಕೈಗೊಳ್ಳುವಂತೆ  ನಗರಸಭೆಯ ಸಾಮಾ ನ್ಯ-ವಿಶೇಷ ಸಭೆಯಲ್ಲಿ ಬಹುಮತವಿರುವ ವಿಪಕ್ಷ ಬಿಜೆಪಿ ಸದಸ್ಯರು ಆಗ್ರಹಿಸುತ್ತಾ ಬಂದಿದ್ದರು. ವಿರೋಧ ಪಕ್ಷದ ಬಹು ಮತದ ನಿರ್ಣಯವನ್ನು ದಾಖಲಿಸದ, ಮತಕ್ಕೂ ಹಾಕಲು ಅವಕಾಶ ನೀಡದ ಕಾಂಗ್ರೆಸ್ ಆಡಳಿತದ ವಿರುದ್ಧ ಸಮರ ಸಾರಿದ್ದರು. ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ನಡುವೆ ಪಕ್ಷಾತೀತ ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿಪಿಎಂ ಪಕ್ಷಗಳ ಮುಖಂಡರು ಹಾಗೂ ಪುತ್ತೂರಿನ ವರ್ತಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕೂಡ ವಾರದ ಸಂತೆಯನ್ನು ಕಿಲ್ಲೆ ಮೈದಾನದಲ್ಲಿಯೇ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಮಂಡಿಸಿದ್ದರೂ ನಗರಸಭೆಯ ಆಡಳಿತ ಅದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.

ಆದರೆ ‘ಕಾನೂನು ಚೌಕಟ್ಟನ್ನು ಮೀರುವಂತಿಲ್ಲ’ ಎಂದು ಹೇಳಿಕೊಂಡು ಯಾವುದೇ ಅಭಿಪ್ರಾಯಗಳಿಗೆ ಮನ್ನಣೆ ನೀಡದ ನಗರಸಭೆಯ ಆಡಳಿತ 7 ತಿಂಗಳ ಬಳಿಕ ಕೊನೆಗೂ ವಾರದ ಸಂತೆ ವಿಚಾರದಲ್ಲಿ ಪುತ್ತೂರಿನ ಜನತೆಯ ಅಭಿಪ್ರಾಯಗಳಿಗೆ ಮಣಿದು, ಈ ಬಗ್ಗೆ ನಿರ್ಣಯ ಕೈಗೊಳ್ಳಲು ಮುಂದಾಗಿತ್ತು. ಸಂತೆಯನ್ನು ಕಿಲ್ಲೆ ಮೈದಾನದಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಾ ಬಂದಿದ್ದ ವಿಪಕ್ಷ ಬಿಜೆಪಿಯೂ ಆಡಳಿತದ ಈ ಅಂತಿಮ ನಿಲುವಿಗೆ ಕೈಜೋಡಿಸಿ, ನಿರ್ಣಯವನ್ನು ಬೆಂಬ ಲಿಸಿದ ಕಾರಣದಿಂದ ಸಂತೆ ಸೋಮ ವಾರ ಮತ್ತೆ ಪುನರಾರಂಭಗೊಂಡಿದೆ.

**

ಪ್ರತ್ಯೇಕ ಉದ್ಘಾಟನೆ!
ಸೋಮವಾರ ಬೆಳಿಗ್ಗೆ 6 ಗಂಟೆಯ ವೇಳೆಗೆ ಪುತ್ತೂರು ನಗರಸಭೆಯ ಉಪಾಧ್ಯಕ್ಷ ವಿಶ್ವನಾಥ ಗೌಡ, ವಿಪಕ್ಷ ಸದಸ್ಯರಾದ ರಾಜೇಶ್ ಬನ್ನೂರು ಮತ್ತಿತರರು ಸೇರಿಕೊಂಡು ತೆಂಗಿನಕಾಯಿ ಒಡೆಯುವ ಮೂಲಕ ಸಂತೆ ಪುನರಾರಂಭಕ್ಕೆ ಚಾಲನೆ ನೀಡಿದರು.

ಆ ಬಳಿಕ 7 ಗಂಟೆಯ ವೇಳೆಗೆ ನಗರಸಭೆಯ ಆಡಳಿತ ಪಕ್ಷದ ವತಿಯಿಂದ ಅಧ್ಯಕ್ಷೆ ಜಯಂತಿ ಬಲ್ನಾಡು, ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ ಕಾವು, ನಗರಸಭೆಯ ಸದಸ್ಯರಾದ ಎಚ್.ಮಹಮ್ಮದ್ ಆಲಿ, ಶಕ್ತಿ ಸಿನ್ಹ ಅವರು ತೆಂಗಿನಕಾಯಿ ಒಡೆದು ಉದ್ಘಾಟಿಸಿದರು! ಈ ಎರಡು ಉದ್ಘಾಟನೆಗಳು ಪ್ರತ್ಯೇಕವಾಗಿ ನಡೆದಿದ್ದು, ಕೊನೆಯಲ್ಲೂ ಸಂತೆ ರಾಜಕೀಯ ಮೇಳೈಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.