ADVERTISEMENT

‘ಕೊರಗರದು ದೇಶದ ಮೂಲ ಸಂಸ್ಕೃತಿ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 10:14 IST
Last Updated 28 ಜೂನ್ 2017, 10:14 IST

ವಿಟ್ಲ: ಎಂ ಫ್ರೆಂಡ್ಸ್ ಮಂಗಳೂರು ವತಿಯಿಂದ ಕೊರಗರ ಕಾಲೋನಿಯಲ್ಲಿ ಸೌಹಾರ್ದ ಈದ್ ಕಾರ್ಯಕ್ರಮದ ಪ್ರಯುಕ್ತ ಕೊರಗರ ಮತ್ತು ಆದಿದ್ರಾವಿಡ ಸಮುದಾಯದ ಜತೆ ಈದ್ ಸಂದೇಶ ಮತ್ತು ಸೌಹಾರ್ದ ಊಟೋಪಚಾರ ಕಾರ್ಯಕ್ರಮ ವಿಟ್ಲದ ಮಂಗಳಪದವು ಕೊರಗರ ಕಾಲೋನಿಯಲ್ಲಿ ಮಂಗಳವಾರ ನಡೆಯಿತು.

ಆಹಾರ ಸಚಿವ ಯು.ಟಿ. ಖಾದರ್ ಅವರು ಕಾಲೋನಿಗೆ ಭೇಟಿ ನೀಡಿ ಕೊರಗರ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. ಪಡಿತರ ಚೀಟಿಯಲ್ಲಿ ದೊರೆಯುತ್ತಿರುವ ಆಹಾರ ಸಾಮಗ್ರಿಗಳ ಬಗ್ಗೆ ವಿಚಾರಿಸಿದರು.

ಬಳಿಕ ಮಾತನಾಡಿದ ಸಚಿವರು, ‘ಕೊರಗರ ಸಂಸ್ಕೃತಿ ದೇಶದ ಮೂಲ ಸಂಸ್ಕೃತಿಯಾಗಿದೆ. ನಾವು ಸಂತೋಷ ಪಟ್ಟು ಇತರರನ್ನು ಸಂತೋಷಪಡಿಸಿಕೊ ಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವ ಹಿಸುವುದು ನನ್ನ ಸುಯೋಗವಾಗಿದೆ. ಕೊರಗರ ಸಮುದಾಯದವರು ತಮ್ಮ ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದಲ್ಲಿ ಸತ್ಪ್ರಜೆಯನ್ನಾಗಿ ಬೆಳೆಸಬೇಕು’ ಎಂದರು.

ADVERTISEMENT

‘ಕೊರಗರ ಕಾಲೋನಿಗಳಿಗೆ ಸರ್ಕಾರ ರಸ್ತೆ, ಮೂಲಸೌಕರ್ಯಗಳನ್ನು ನೀಡುತ್ತಾ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವುಗಳಿಗೆ ನಾನು ಹಾಗೂ ಉಸ್ತುವಾರಿ ಸಚಿವರು ಸಂಪೂರ್ಣ ಸಹಕಾರ ನೀಡಲಿದ್ದೇವೆ. ಪ್ರತಿಯೊಬ್ಬರು ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಿ ಅವುಗಳನ್ನು ಪಡೆಯಬೇಕು. ಎಂ ಫ್ರೆಂಡ್ಸ್ ಸಂಸ್ಥೆ ಕೊರಗರ ಈ ಕಾಲೋನಿಯನ್ನು ದತ್ತು ಪಡೆದು ಅವರಿಗೆ ವಿವಿಧ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಬೇಕು’ ಎಂದರು.

ಇಫ್ತಾರ್‌ ಕೂಟಕ್ಕೆ ಸಂಬಂಧಿಸಿದಂತೆ ಟೀಕೆಗಾರರಿಗೆ ಪೇಜಾವರ ಶ್ರೀಗಳು ನೀಡಿದ ಉತ್ತರ ಸಮಾಜದ ಜನರನ್ನು ಒಗ್ಗೂಡಿಸುವಂತೆ ಮಾಡಿದೆ ಎಂದು ಹೇಳಿದರು.
ಸೌಹಾರ್ದ ಗೀತೆ ಹಾಡಿದ ಕೊರಗರ ಕಾಲೋನಿಯ ಅಂಗವಿಕಲ ಸೀತಾರಾಮ ಅವರನ್ನು ಸಚಿವರು ಗೌರವಿಸಿದರು. ಸಚಿವರು ಕೊರಗರ ಜತೆ ಕುಳಿತುಕೊಂಡು ಊಟ ಮಾಡಿದರು.

ಪತ್ರಕರ್ತ ಸಂಶುದ್ದೀನ್ ಸಂಪ್ಯ ಈದ್ ಸಂದೇಶ ನೀಡಿ ಮಾತನಾಡಿದರು. ಎಂ ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಕಾರ್ಯದರ್ಶಿ ರಶೀದ್ ವಿಟ್ಲ, ರಫೀಕ್ ಆಮ್ಲಮೊಗರು, ಸಲೀಂ, ಮುಸ್ತಫಾ ಇರುವೇಲು, ಅಬೂಬಕ್ಕರ್ ಸಿದ್ದಿಕ್ ಮಸ್ಕತ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಜೂಲಿಯಾನ್ ಮೇರಿ ಲೋಬೋ, ವೀರಕಂಬ ಗ್ರಾಮ ಪಂಚಾ ಯಿತಿ ಸದಸ್ಯರಾದ ಅಬ್ಬಾಸ್, ಉಬೈದ್, ಎಂ.ಫ್ರೆಂಡ್ಸ್ ಟ್ರಸ್ಟಿಗಳಾದ ವಿ.ಎಚ್ ಅಶ್ರಫ್, ಖಲಂದರ್ ಪರ್ತಿಪ್ಪಾಡಿ, ಕೆ.ಪಿ ಸಾಧಿಕ್ ಹಾಜಿ ಪುತ್ತೂರು, ಶಾಕೀರ್ ಹಾಜಿ ಪುತ್ತೂರು, ಹನೀಫ್ ಅಲ್ ಫಲಾಹ್, ಅಬ್ಬಾಸ್ ಟಿಎಚ್‍ಎಂಎ, ಅಬ್ದುಲ್ ಹಮೀದ್ ಗೋಳ್ತಮಜಲು, ಆರೀಫ್ ಬೆಳ್ಳಾರೆ, ಅನ್ಸಾರ್ ಬೆಳ್ಳಾರೆ, ಅಬೂಬಕ್ಕರ್ ನೋಟರಿ, ಆಶಿಕ್ ಕುಕ್ಕಾಜೆ, ಇರ್ಷಾದ್ ವೇಣೂರು, ಡಿ.ಎಂ ರಶೀದ್ ಉಕ್ಕುಡ, ಇಸ್ಮಾಯಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.