ADVERTISEMENT

ಗರ್ಭಿಣಿಯರ ಆರೋಗ್ಯ---– ನಿಗಾ ವಹಿಸಿ

ರಾಷ್ಟ್ರೀಯ ಆರೋಗ್ಯ ಮಿಷನ್‌ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 11:09 IST
Last Updated 26 ಮೇ 2018, 11:09 IST

ಮಂಗಳೂರು: ಗರ್ಭಿಣಿಯರ ಗರ್ಭವು ಅಪಾಯಕಾರಿ ಹಂತದಲ್ಲಿದ್ದರೆ, ಅಂತಹ ಗರ್ಭಿಣಿಯರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಆರೋಗ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೆರಿಗೆ ವೇಳೆ ಮತ್ತು ನಂತರ ನಡೆದ ತಾಯಿ ಮರಣ ಪ್ರಕರಣಗಳ ಪರಿಶೀಲನೆ ನಡೆಸಿದ ಅವರು, ಉನ್ನತ ಆರೋಗ್ಯ ವ್ಯವಸ್ಥೆ ಮತ್ತು ಸೌಲಭ್ಯಗಳಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಹೆರಿಗೆ ವೇಳೆ ತಾಯಿ ಮರಣ ಪ್ರಕರಣಗಳು ನಡೆಯುತ್ತಿರುವುದು ಕಳವಳಕಾರಿಯಾಗಿದೆ ಎಂದರು.

ADVERTISEMENT

ಗರ್ಭಿಣಿಯ ಆರೋಗ್ಯದ ಪ್ರತಿಯೊಂದು ಹಂತದಲ್ಲೂ ಅವಳ ಆರೋಗ್ಯವನ್ನು ಪರಿಶೀಲಿಸುತ್ತಿರಬೇಕು. ಮಹಿಳೆಯ ಗರ್ಭವು ಸಹಜ ಬೆಳವಣಿಗೆ ಕಂಡುಬರದಿದ್ದರೆ ಅಥವಾ ಅಪಾಯದ ಲಕ್ಷಣ ಕಂಡುಬಂದರೆ, ಅಂತಹ ಮಹಿಳೆಗೆ ಉನ್ನತ ವೈದ್ಯಕೀಯ ಚಿಕಿತ್ಸೆ ದೊರಕಿಸಿಕೊಡಲು ಆರೋಗ್ಯ ಇಲಾಖೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಪ್ರತಿ ಗರ್ಭಿಣಿಯ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಬೇಕು. ಯಾವುದೇ ಆಸ್ಪತ್ರೆ ಅಥವಾ ವೈದ್ಯರು ಗರ್ಭಿಣಿಯರಿಗೆ ತುರ್ತು ಸ್ಥಿತಿಯಲ್ಲಿ ಉನ್ನತ ಚಿಕಿತ್ಸೆ ಅವಶ್ಯ ಪಟ್ಟರೆ ಅದನ್ನು ಒದಗಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಹೇಳಿದರು.

ತುರ್ತುಸ್ಥಿತಿಯಲ್ಲಿರುವ ರೋಗಿಯ ನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆದಾಡಿಸುವುದರಿಂದ ರೋಗಿಯ ಜೀವ ಉಳಿಸಲು ಸಿಗುವ ಅಮೂಲ್ಯ ವೇಳೆ ವ್ಯರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಉನ್ನತ ವೈದ್ಯಕೀಯ ಚಿಕಿತ್ಸೆ ದೊರಕುವ ಆಸ್ಪತ್ರೆಗಳಿಗೆ ಆರಂಭಿಕ ಹಂತದಲ್ಲಿ ಶಿಫಾರಸು ಮಾಡಬೇಕು. ಆಸ್ಪತ್ರೆಗಳಲ್ಲಿ ತುರ್ತು ಸ್ಥಿತಿಯಲ್ಲಿ ಅಗತ್ಯವಾದ ಸೌಲಭ್ಯಗಳು ಇಲ್ಲದಿದ್ದರೇ, ಆಸ್ಪತ್ರೆಗಳು ಅಂತಹ ಮಹಿಳೆಯನ್ನು ಆರಂಭಿಕ ಹಂತದಲ್ಲೇ ಉನ್ನತ ಆಸ್ಪತ್ರೆಗಳಿಗೆ ಕಳುಹಿಸಬೇಕು ಎಂದು ಸಲಹೆ ನೀಡಿದರು.

108 ಆಂಬುಲೆನ್ಸ್‌ಗಳು ಸಕಾಲದಲ್ಲಿ ಎಲ್ಲ ಮೂಲಸೌಕರ್ಯಗಳೊಂದಿಗೆ ಸಿದ್ಧವಾಗಿರಬೇಕು. ರೋಗಿಯ ಸ್ಥಳಕ್ಕೆ ಆಂಬುಲೆನ್ಸ್‌ಗಳು ಸಕಾಲದಲ್ಲಿ ತಲುಪಲು ವಿಳಂಬ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಸಿಕಾಂತ್ ಸೆಂಥಿಲ್ ಎಚ್ಚರಿಸಿದರು.

ಜಿಲ್ಲೆಯಲ್ಲಿ ಹೆರಿಗೆ ವೇಳೆ ನಡೆದ ವಿವಿಧ ತಾಯಿ ಮರಣ ಪ್ರಕರಣಗಳ ಕುರಿತು ಜಿಲ್ಲಾಧಿಕಾರಿ ಪರಿಶೀಲಿಸಿದರು. ಮರಣ ಹೊಂದಿದವರ ಕುಟುಂಬದ ಸದಸ್ಯರ ಆಹವಾಲುಗಳನ್ನು ಆಲಿಸಿದರು. ಈ ಹೆರಿಗೆಗಳನ್ನು ನಡೆಸಿದ ವೈದ್ಯರಿಂದಲೂ ಮಾಹಿತಿ ಪಡೆದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಲೇಡಿಗೋಷನ್ ಅಧೀಕ್ಷಕಿ ಡಾ. ಸವಿತಾ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಅಶೋಕ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿಕಂದರ್ ಪಾಶಾ ಇದ್ದರು.

**
ಅಪಾಯಕಾರಿ (ಹೈರಿಸ್ಕ್) ಸ್ಥಿತಿಯಲ್ಲಿರುವ ಮಹಿಳೆಯರ ಪಟ್ಟಿಯನ್ನು ಆರೋಗ್ಯ ಇಲಾಖೆಯು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು
- ಸಸಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.