ADVERTISEMENT

‘ಗಲಭೆಗೆ ಪ್ರಚೋದಿಸುವವರ ಬಂಧನ ಖಚಿತ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 10:11 IST
Last Updated 28 ಜೂನ್ 2017, 10:11 IST

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ, ಚೂರಿ ಇರಿತದಂತಹ ಕೃತ್ಯಗಳ ಮೂಲಕ ಗಲಭೆಗೆ ಯತ್ನಿಸುತ್ತಿರುವವ ರನ್ನು ಪ್ರಚೋದಿಸುವ ವ್ಯಕ್ತಿಗಳನ್ನು ಬಂಧಿಸುವುದು ನಿಶ್ಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪದೇ ಪದೇ ಗಲಭೆ ನಡೆ ಯಲು ಕೆಲವು ವ್ಯಕ್ತಿಗಳ ಪ್ರಚೋದ ನೆಯೇ ಕಾರಣ. ಅಂತಹವರನ್ನು ಗುರುತಿಸಿ ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ರಾಜ್ಯ ಪೊಲೀಸ್‌ ಮಹಾನಿರ್ದೇಶ ಕರು, ಗುಪ್ತದಳದ ಐಜಿಪಿ ಮತ್ತು ಸ್ಥಳೀಯ ಪೊಲೀಸ್‌ ಅಧಿಕಾರಿಗಳ ಜೊತೆಗೂ ಚರ್ಚೆ ನಡೆಸಿದ್ದೇನೆ. ಯಾವು ದೇ ವ್ಯಕ್ತಿ ಈ ರೀತಿಯ ಕೃತ್ಯಗಳಿಗೆ ಪ್ರಚೋದಿಸಿರುವ ಕುರಿತು ಸಾಕ್ಷ್ಯ ದೊರೆತರೆ ಬಂಧನ ಖಚಿತ’ ಎಂದರು.

ಕೊಲೆಗಡುಕರಿಗೆ ಆಶ್ರಯ ನೀಡಿಲ್ಲ: ‘ನಾನು ದೀರ್ಘ ಕಾಲದಿಂದ ಸಾರ್ವಜ ನಿಕ ಜೀವನದಲ್ಲಿ ಇದ್ದೇನೆ. ಆರು ಬಾರಿ ಶಾಸಕನಾಗಿದ್ದೇನೆ. ಯಾವತ್ತೂ ಕೊಲೆಗ ಡುಕರನ್ನು ನನ್ನ ಜೊತೆ ಇರಿಸಿಕೊಂಡಿಲ್ಲ. ನನ್ನ ಜೊತೆ ಅಂತಹವರು ಇದ್ದುದ್ದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.

ADVERTISEMENT

‘ಹಿಂದೂ ಸಂಘಟನೆ ಮುಖಂಡ ರೆಂದು ಗುರುತಿಸಿಕೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್‌ ಸ್ವತಃ ಕಲ್ಲಡ್ಕ ಇಸ್ಮಾ ಯಿಲ್‌ ಕೊಲೆ ಪ್ರಕರಣದ ಆರೋಪಿಯಾಗಿದ್ದರು. ನಂತರ ಖುಲಾಸೆ ಆಗಿರುವುದು ಬೇರೆ ವಿಚಾರ. ಎರಡು ಕೊಲೆ ಮಾಡಿದ ಆರೋಪ ಹೊತ್ತಿರುವ ಕಲ್ಲಡ್ಕ ಮಿಥುನ್‌, ಟಿಪ್ಪು ಜಯಂತಿ ವಿಚಾರವಾಗಿ ನಡೆದ ಗಲಾಟೆ ಸಮಯದಲ್ಲಿ ಹರೀಶ್‌ ಪೂಜಾರಿ ಎಂಬ ಯುವಕನ ಕೊಲೆ ಮಾಡಿದ ಭುವಿತ್‌ ಶೆಟ್ಟಿ, ಒಂದು ಕೊಲೆಯಲ್ಲಿ ಭಾಗಿ ಯಾದ ಆರೋಪವಿರುವ ರತ್ನಾಕರ ಶೆಟ್ಟಿ ಯಂತಹ ಹಲವರು ಪ್ರಭಾಕರ ಭಟ್‌ ಜೊತೆ ಇದ್ದಾರೆ’ ಎಂದರು.

ಇತ್ತೀಚೆಗೆ ನಡೆದ ಮೊಹಮ್ಮದ್ ಅಶ್ರಫ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಭರತ್‌ ಕೆಲವು ದಿನಗಳ ಹಿಂದೆ ಕಲ್ಲಡ್ಕ ಗಲಭೆಗೆ ಸಂಬಧಿಸಿದ ಪತ್ರಿಕಾ ಗೋಷ್ಠಿಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ ಜೊತೆ ವೇದಿಕೆ ಹಂಚಿಕೊಂಡಿದ್ದ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಈ ಕೊಲೆಗೆ ಪ್ರಚೋದನೆ ನೀಡಿದವರನ್ನು ಪತ್ತೆಮಾಡಲು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುವಂತೆ ಪೊಲೀಸರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

ಅಶ್ರಫ್‌ ಕೊಲೆ ಪ್ರಕರಣದಲ್ಲಿ ಆರ್‌ ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಚೋದನೆ ನೀಡಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲಾಗು ವುದೇ ಎಂಬ ಪ್ರಶ್ನೆಗೆ, ‘ತನಿಖೆ ವೇಳೆ ಸಾಕ್ಷ್ಯ ದೊರೆತರೆ ಪೊಲೀಸರು ಖಚಿತ ವಾಗಿ ಕ್ರಮ ಜರುಗಿಸುತ್ತಾರೆ’ ಎಂದರು.

‘ಕೆಲವು ದಿನಗಳ ಹಿಂದೆ ನಡೆದ ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಲೀಲ್‌ ಕೊಲೆಯಲ್ಲಿ ಸಂಘ ಪರಿವಾರದವರೇ ಭಾಗಿಯಾಗಿದ್ದರು. ಕಲ್ಲಡ್ಕದಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆಯೂ ಸಂಘ ಪರಿವಾರದ ಕೈವಾ ಡವಿದೆ. ನೇರವಾಗಿ ಅಪರಾಧ ಕೃತ್ಯ ಎಸಗುವವರ ಜೊತೆಗೆ ತೆರೆಮರೆಯಲ್ಲಿ ನಿಂತು ಪ್ರಚೋದಿಸುವವರನ್ನು ಬಂಧಿಸ ದಿದ್ದರೆ ಯಾವತ್ತಿಗೂ ಪರಿಸ್ಥಿತಿ ಸುಧಾರಣೆ ಆಗಲು ಸಾಧ್ಯವಿಲ್ಲ. ಈ ವಿಚಾರವನ್ನು ಸ್ಪಷ್ಟವಾಗಿ ಪೊಲೀಸರ ಗಮನಕ್ಕೆ ತಂದಿ ದ್ದೇನೆ. ಕೆಲವು ಸೂಚನೆಗಳನ್ನೂ ನೀಡಿದ್ದೇನೆ’ ಎಂದರು.

ಮಾತಿಗೆ ಬದ್ಧ: ‘ಕಲ್ಲಡ್ಕದಲ್ಲಿ ಅಹಿತ ಕರ ಘಟನೆಗಳು ನಡೆದಾಗ ವಿಧಾನ ಮಂಡಲ ಅಧಿವೇಶನದ ಕಾರಣದಿಂದ ಬೆಂಗಳೂರಿನಲ್ಲಿ ಇದ್ದೆ. ನಂತರ ಬಂಟ್ವಾ ಳಕ್ಕೆ ಬಂದಿದ್ದೆ. ಆಗ ಕಲ್ಲಡ್ಕ ಘಟನೆಗೆ ಸಂಬಂಧಿಸಿದಂಷತೆ ನಿಯೋಗವೊಂದು ನನ್ನನ್ನು ಭೇಟಿ ಮಾಡಿತ್ತು. ಆ ಬಗ್ಗೆ ದೂರ ವಾಣಿ ಮೂಲಕ ಎಸ್‌ಪಿಯವರನ್ನು ಸಂಪರ್ಕಿಸಿದ್ದೆ. ಬಂಟ್ವಾಳದಲ್ಲೇ ಇದ್ದ ಅವರು ಪ್ರವಾಸಿ ಮಂದಿರಕ್ಕೆ ಬರುವುದಾಗಿ ತಿಳಿಸಿದರು. ಅವರು ಬಂದಾಗ ನಡೆದ ಮಾತುಕತೆಯ ವಿಡಿಯೊ ಬಹಿರಂಗವಾಗಿದೆ. ಅದರಲ್ಲಿರುವ ಮಾತು ಗಳಿಗೆ ಈಗಲೂ ನಾನು ಬದ್ಧ’ ಎಂದು ಸಚಿವರು ಹೇಳಿದರು.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ಇಫ್ತಾರ್‌ ಕೂಟ ಆಯೋಜಿಸಿರುವುದನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ವಿರೋಧಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ವಿಶ್ವೇಶತೀರ್ಥ ಸ್ವಾಮೀಜಿಯ ವರ ನಡೆ ಉತ್ತಮವಾದುದು. ಮುತಾ ಲಿಕ್‌ ಅವರಂತಹವರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ. ಅವರನ್ನು ದೇವರೇ ನೋಡಿಕೊಳ್ಳುತ್ತಾನೆ’ ಎಂದರು.

ಬೆದರಿಕೆಗೆ ಜಗ್ಗುವುದಿಲ್ಲ
‘ಕಲ್ಲಡ್ಕ ಗಲಭೆಗಳ ನಂತರ ನನಗೆ ಭೂಗತ ಜಗತ್ತಿನಿಂದ ಬೆದರಿಕೆ ಕರೆಗಳು ಬರುತ್ತಿವೆ. ಕೆಲವರು ವಿದೇಶದಲ್ಲಿ ಕುಳಿತು ಬೆದರಿಕೆ ಹಾಕುತ್ತಿದ್ದಾರೆ. ನನ್ನ ಜೀವಕ್ಕೆ ಅಪಾಯವಿದ್ದರೂ ಅದನ್ನು ಲೆಕ್ಕಿಸದೇ ಜಿಲ್ಲೆಯ ಸಾಮರಸ್ಯ ಉಳಿಸಲು ಪ್ರಯತ್ನಿಸುತ್ತಿದ್ದೇನೆ. ಬೆದರಿಕೆಗಳಿಗೆ ಯಾವತ್ತೂ ನಾನು ಜಗ್ಗುವುದಿಲ್ಲ’ ಎಂದು ರಮಾನಾಥ ರೈ ಹೇಳಿದರು.

* * 

‘ಬಹುಸಂಖ್ಯಾತರ ಕೋಮುವಾದಿಗಳು ಮತ್ತು ಅಲ್ಪಸಂಖ್ಯಾತರ ಕೋಮುವಾದಿಗಳು ನನ್ನನ್ನು ಏಕಕಾಲಕ್ಕೆ ವಿರೋಧಿಸುತ್ತಾರೆ. ಇದು ನಾನೊಬ್ಬ ಅಪ್ಪಟ ಜಾತ್ಯತೀತ ವ್ಯಕ್ತಿ ಎಂಬುದಕ್ಕೆ ಸಾಕ್ಷಿ’
ಬಿ.ರಮಾನಾಥ ರೈ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.