ADVERTISEMENT

ಗೋ ಸಾಗಾಟಗಾರರ ಕೃತ್ಯ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 9:19 IST
Last Updated 16 ಸೆಪ್ಟೆಂಬರ್ 2017, 9:19 IST
ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಸುಬ್ರಹ್ಮಣ್ಯ ದೇವಾಲಯದ ದ್ವಾರದ ಎದುರಿನ ಖಾಲಿ ಸ್ಥಳದಲ್ಲಿ ಶುಕ್ರವಾರ ಪತ್ತೆಯಾದ ಕಾಲು ಕಟ್ಟಿದ ಸ್ಥಿತಿಯಲ್ಲಿ ಹಸುವೊಂದರ ಕಳೆಬರ
ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಸುಬ್ರಹ್ಮಣ್ಯ ದೇವಾಲಯದ ದ್ವಾರದ ಎದುರಿನ ಖಾಲಿ ಸ್ಥಳದಲ್ಲಿ ಶುಕ್ರವಾರ ಪತ್ತೆಯಾದ ಕಾಲು ಕಟ್ಟಿದ ಸ್ಥಿತಿಯಲ್ಲಿ ಹಸುವೊಂದರ ಕಳೆಬರ   

ಪುತ್ತೂರು: ಕಾಲು ಕಟ್ಟಿದ ಸ್ಥಿತಿಯಲ್ಲಿ ಗಬ್ಬದ ಹಸುವೊಂದರ ಕಳೆಬರಹ ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಸುಬ್ರಹ್ಮಣ್ಯ ದೇವಾಲಯದ ದ್ವಾರದ ಎದುರು ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನೆಲಸಮತಟ್ಟುಗೊಳಿಸಿಟ್ಟ ಖಾಲಿ ಸ್ಥಳದಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.

ಇದೊಂದು ಅಕ್ರಮ ಗೋಸಾಗಾಟಗಾರರ ಕೃತ್ಯ ಎಂದು ಆರೋಪಿಸಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಾಣಿ– ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸಾಂಕೇತಿಕ ರಸ್ತೆ ತಡೆ ಮಾಡಿದರು.

ಸಂಪ್ಯ ಪೊಲೀಸ್ ಠಾಣೆಯಿಂದ ಅರ್ಧ ಕಿ.ಮೀ ಅಂತರದಲ್ಲಿರುವ ಕಾರ್ಪಾಡಿ ಸುಬ್ರಹ್ಮಣ್ಯ ದೇವಾಲಯದ ದ್ವಾರದ ಎದುರು ಕಾಲನ್ನು ಹಗ್ಗದಿಂದ ಕಟ್ಟಿದ ಸ್ಥಿತಿಯಲ್ಲಿದ್ದ ದನದ ಕಳೆಬರಹ ಕಂಡ ಆ ಪರಿಸರದ ಮಂದಿ, ಈ ವಿಚಾರವನ್ನು ಸ್ಥಳೀಯರ ಗಮನಕ್ಕೆ ತಂದಿದ್ದರು. ಈ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಜಮಾಯಿಸಿ, ಅಕ್ರಮ ಗೋಕಳ್ಳರ ಈ ಅಮಾನವೀಯ ಕೃತ್ಯ ಇದಾಗಿದೆ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಘಟನಾ ಸ್ಥಳಕ್ಕೆ ಗ್ರಾಮಾಂತರ ಸರ್ಕಲ್ ಇನ್‌ಸ್‍ಪೆಕ್ಟರ್ ಅನಿಲ್‌ ಕುಲಕರ್ಣಿ, ಸಂಪ್ಯ ಎಸ್‍ಐ ಅಬ್ದುಲ್ ಖಾದರ್ ಭೇಟಿ ನೀಡಿ ಪರಿಶೀಲಿಸಿದರು.

ಗೋಸಾಗಾಟ ವಾಹನದ ಟಯರ್ ಪಂಕ್ಚರ್ ಆದ ಕಾರಣ ಹೆದ್ದಾರಿ ಬದಿಯಲ್ಲಿರುವ ಈ ಖಾಲಿ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ ಜಾಕ್ ಕೊಟ್ಟು ಟಯರ್ ಬದಲಾಯಿಸಿರುವುದು, ವಾಹನದಲ್ಲಿದ್ದ ಜಾನುವಾರುಗಳನ್ನು ಕೆಳಕ್ಕಿಳಿಸಿ ಮತ್ತೆ ಲೋಡ್ ಮಾಡಿಕೊಂಡು ಹೋಗಿರುವುದು, ಸತ್ತ ಗಬ್ಬದ ದನವನ್ನು ಅಲ್ಲೇ ಬಿಟ್ಟು ಹೋಗಿರುವುದಕ್ಕೆ ಸಾಕಷ್ಟು ಪುರಾವೆಗಳು ಸ್ಥಳದಲ್ಲಿ ಲಭಿಸಿದೆ ಎಂದು ಕಾರ್ಯಕರ್ತರು ಹೇಳಿದರು.

ಸ್ಥಳಕ್ಕೆ ಬಂದ ಹಿಂದೂ ಸಂಘಟನೆಗಳ ಮುಖಂಡ ಅರುಣ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಾಣಿ ಮೈಸೂರು ಹೆದ್ದಾರಿ ತಡೆ ಮಾಡಿ ತುಸು ಕೆಲಕಾಲ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅರುಣಕುಮಾರ್ ಪುತ್ತಿಲ, ರಾತ್ರಿಯಿಂದ ಬೆಳಿಗ್ಗೆವರೆಗೆ ಈ ರಸ್ತೆಯಲ್ಲಿ ಹೋದ ವಾಹನಗಳನ್ನು ಪರಿಶೀಲಿಸಿ, ಗೋಹತ್ಯೆಯ ಹಿಂದಿರುವ ಮತಾಂಧ ಶಕ್ತಿಗಳನ್ನು ಶಕ್ತಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಹತ್ಯೆಯಾದ ಗೋವಿನ ಕಳೆಬರವನ್ನು ಅದೇ ಸ್ಥಳದಲ್ಲಿ ಹೊಂಡ ತೆಗೆದು ಗೌರವಪೂರ್ವಕವಾಗಿ ಸಕಲ ವಿಧಿ ವಿಧಾನಗಳೊಂದಿಗೆ ದಫನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.