ADVERTISEMENT

ಗ್ರಾ.ಪಂ.ಕಚೇರಿಯಲ್ಲೇ ಉಪಾಧ್ಯಕ್ಷನ ಕೊಚ್ಚಿ ಕೊಲೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:32 IST
Last Updated 21 ಏಪ್ರಿಲ್ 2017, 6:32 IST

ವಿಟ್ಲ: ಕರೋಪಾಡಿ ಗ್ರಾಮ ಪಂಚಾಯಿತಿ  ಯಲ್ಲಿ ಗುರುವಾರ ಹಾಡಹಗಲೇ ನಡೆದ ಉಪಾಧ್ಯಕ್ಷ  ಹಾಗೂ ಕಾಂಗ್ರೆಸ್‌ ಮುಖಂಡ ಎ.ಅಬ್ದುಲ್‌ ಜಲೀಲ್‌ ಕರೋ ಪಾಡಿ  (42) ಅವರ ಬರ್ಬರ ಕೊಲೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.ಎರಡು ಬೈಕ್‌ಗಳಲ್ಲಿ ಬಂದ ಮುಸುಕುಧಾರಿ ದುಷ್ಕರ್ಮಿಗಳು 11. 30ರ ಸುಮಾರಿಗೆ ಕಚೇರಿಯೊಳಗೆ ನುಗ್ಗಿ ಮೊದಲು ಮೆಣಸಿನ ಪುಡಿ ಎರಚಿದರು. ಬಳಿಕ ಕೇರಳದತ್ತ ಪರಾರಿಯಾದರು.

ಕಾರ್ಯನಿಮಿತ್ತ ಕಚೇರಿ ತನ್ನ ಕೊಠಡಿಯಲ್ಲಿ ಒಬ್ಬರೇ ಇರುವ ವೇಳೆ ದುಷ್ಕರ್ಮಿಗಳು ಅಲ್ಲಿಗೆ ಬಂದಿದ್ದರು. ಜಲೀಲ್‌ ಅವರ ತಲೆ, ಕುತ್ತಿಗೆ, ಹೊಟ್ಟೆಯ ಭಾಗಕ್ಕೆ ಯದ್ವಾತದ್ವ ತಲವಾರಿನಿಂದ ಕಡಿದರು. ದಾಳಿಕೋರರು ಬೈಕ್‌ನಲ್ಲಿ ತೆರಳುತ್ತಿದ್ದಂತೆ ದಾಳಿ ನಡೆದಿರುವ ಮಾಹಿತಿ ಪಂಚಾಯಿತಿ ಸಿಬ್ಬಂದಿಗೆ ತಿಳಿಯಿತು. ಕಚೇರಿಯ ಒಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸಹೋದರ ಅನ್ವರ್ ಕರೋಪಾಡಿ ಅವರು ಖಾಸಗಿ ಆಸ್ಪತ್ರೆಗೆ ಕರೆದೊ ಯ್ದಿದ್ದು, ಪರೀಕ್ಷೆ ನಡೆಸಿ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದರು.

ಆರೋಪಿಗಳು ಕೃತ್ಯ ಎಸಗಿ ಪಂಚಾಯಿತಿಯಿಂದ ಹೊರ ನಡೆಯುತ್ತಿದ್ದಂತೆ ಪಂಚಾಯಿತಿಯಿಂದ ಬೊಬ್ಬೆ ಕೇಳಿಸಿದ್ದರಿಂದ ಮುಖ್ಯರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಬೈಕ್ ಸವಾರರ ಮೇಲೆ ಕಲ್ಲು ಎಸೆದು ತಡೆಯಲು ಯತ್ನಿಸಿದರು. ಆಗ ಬೈಕ್ ಸವಾರನೊಬ್ಬ ಹೆಲ್ಮೆಟ್ ತೆಗೆದು ಎಸೆದು ತಪ್ಪಿಸಿಕೊಂಡಿದ್ದಾನೆ.ಜಲೀಲ್ ಅವರ ತಂದೆ ಉಸ್ಮಾನ್ ಹಾಜಿ ಕರೋಪಾಡಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತರಾಗಿದ್ದು, ಹಾಲಿ ತಾಲ್ಲೂಕು ಪಮಚಾಯಿತಿ ಸದ ಸ್ಯರು. ಅವರು ಈ ಹಿಂದೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರೂ ಆಗಿ  ದ್ದವರು. ಜಲೀಲ್ ಅವರಿಗೆ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಅವರಿಗೆ ಮೂವರು ಸಹೋದರರಿದ್ದು, ಇಬ್ಬರು ವಿದೇಶದಲ್ಲಿದ್ದು, ಮತ್ತೊಬ್ಬ ಊರಿನಲ್ಲಿ ಉದ್ಯೋಗ ನಡೆಸುತ್ತಿದ್ದಾರೆ.

ADVERTISEMENT

ಹಳೆ ದ್ವೇಷವೇ ಈ ಘಟನೆಗೆ ಕಾರಣವಾಗಿದೆನ್ನಲಾಗಿದೆ. ಗ್ರಾಮದ ಅಭಿವೃದ್ಧಿ ಹಾಗೂ ಶಾಂತಿಯ ವಿಚಾರ ದಲ್ಲಿ ಕೆಲವರಲ್ಲಿ ದ್ವೇಷ ಕಟ್ಟಿಕೊಂಡಿದ್ದು, ಇದುವೇ ಅವರ ಕೊಲೆಗೆ ಕಾರಣವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಮಾತನಾಡುತ್ತಿದ್ದಾರೆ.ಜಿಲ್ಲಾ ಪೊಲೀಸ್‌ ವರಿಷ್ಠ ಭೂಷಣ್ ರಾವ್ ಬೊರಸೆ, ಡಿವೈಎಸ್‍ಪಿ ರವೀಶ್ ಸಿ.ಆರ್, ಬಂಟ್ವಾಳ ಸರ್ಕಲ್ ಇನ್‌ಸ್ಪೆಕ್ಟರ್‌ ಮಂಜಯ್ಯ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಬೆಳಚ್ಚು ತಜ್ಞರಾದ ಗೌರೀಶ್ ಅವರ ತಂಡ ಸ್ಥಳದಲ್ಲಿ ವಿವಿಧ ವಸ್ತುಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿ ಸಿದೆ. ಬಂಟ್ವಾಳ ನಗರ ಠಾಣೆಯ ರಕ್ಷಿತ್ ಎಕೆ, ಗ್ರಾಮಾಂತರ ಠಾಣೆಯ ಉಮೇಶ್, ವೇಣೂರು ಠಾಣೆ ಲೋಲಾಕ್ಷ, ಧರ್ಮಸ್ಥಳ ಠಾಣೆಯ ಕೊರಗಪ್ಪ ನಾಯ್ಕ ಸೇರಿ ವಿವಿಧ ಠಾಣೆಗಳ ಎಸ್‌ಐಗಳು ಸ್ಥಳಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.