ADVERTISEMENT

ಗ್ರಾಮದಲ್ಲಿ ಆತಂಕ–ಧಾವಿಸಿದ ಎಸ್‌ಪಿ

ಪಾಣಾಜೆ ಸಮೀಪ ಬಡಗಿ ಸಾವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 8:41 IST
Last Updated 14 ಡಿಸೆಂಬರ್ 2017, 8:41 IST

ಪುತ್ತೂರು: ತಾಲ್ಲೂಕಿನ ಪಾಣಾಜೆ ಕಳ್ಳಪದವಿನಲ್ಲಿರುವ ಮುಸ್ಲಿಂ ಮನೆಯಲ್ಲಿ ಬಡಗಿ ಕೆಲಸ ಮಾಡುತ್ತಿದ್ದ ಪ್ರಭಾಕರ ಆಚಾರ್ಯ (48) ಬುಧವಾರ ಸಂಜೆ ಮೃತಪಟ್ಟಿದ್ದು, ಇದರಿಂದ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಸಂಜೆ 5.30ರ ವೇಳೆಗೆ ಬೆಟ್ಟಂಪಾಡಿ ಗ್ರಾಮದ ಪೀಲಂಪಾಡಿಯ ನಿವಾಸಿ ಪ್ರಭಾಕರ ಅಚಾರ್ಯ ಅವರು ಸಾಮಗ್ರಿ ತರುವ ಸಲುವಾಗಿ ಮನೆಯ ಅಟ್ಟ ಏರಿದ್ದರು. ಈ ಸಮಯದಲ್ಲಿ ಮನೆಯಲ್ಲಿದ್ದ ಮಹಿಳೆ ಪಕ್ಕದ ಮನೆಯವರ ಜತೆ ಮಾತನಾಡುತ್ತಿದ್ದರು. ಬಹಳ ಹೊತ್ತಾದರೂ ಆಚಾರ್ಯ ಅವರು ಕೆಳಕ್ಕೆ ಬಾರದ ಕಾರಣ ಮಹಿಳೆ ಅಟ್ಟದ ಮೇಲೆ ಹೋಗಿ ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಯಿತು.

ತಕ್ಷಣ ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಎಚ್‌.ಸಿ.ಸುಧೀರ್‌ ಕುಮಾರ್ ರೆಡ್ಡಿ, ಪುತ್ತೂರು ಉಪವಿಭಾಗಾಧಿಕಾರಿ ಡಾ.ರಘುನಂದನ ಅವರು ಮೃತದೇಹವನ್ನು ಪರಿಶೀಲಿಸಿ ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ADVERTISEMENT

ಆಚಾರ್ಯ ಅವರಿಗೆ ಮೂರ್ಛೆ ರೋಗ ಇತ್ತು ಎಂದು ಎಸ್‌ಪಿ ತಿಳಿಸಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಮನೆ ಸಮೀಪ ಸೇರಿದ್ದರು.

**

ವಿಚಾರಣೆ ಸಂದರ್ಭದಲ್ಲಿ ಆಚಾರ್ಯರ ಕುಟುಂಬದರಾಗಲಿ, ಗ್ರಾಮಸ್ಥರಾಗಲಿ ಕೊಲೆ ಶಂಕೆ ವ್ಯಕ್ತಪಡಿಸಿಲ್ಲ.
-ಸುಧೀರ್‌ .ಕುಮಾರ್‌ ರೆಡ್ಡಿ, ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.