ADVERTISEMENT

ಜನರ ಸಂಕಷ್ಟಗಳಿಗೆ ಕಾಂಗ್ರೆಸ್ –ಬಿಜೆಪಿ ಕಾರಣ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 5:01 IST
Last Updated 26 ಡಿಸೆಂಬರ್ 2017, 5:01 IST
ಮಂಗಳೂರಿನ ಸಿಂಪ್ಸನ್‌ ಸೋನ್ಸ್‌ ಸಭಾಂಗಣದಲ್ಲಿ ಭಾನುವಾರ ಆರಂಭವಾದ ಸಿಪಿಐನ 23 ನೇ ಜಿಲ್ಲಾ ಸಮ್ಮೇಳನದಲ್ಲಿ ಸಾತಿ ಸುಂದರೇಶ್‌ ಮಾತನಾಡಿದರು.
ಮಂಗಳೂರಿನ ಸಿಂಪ್ಸನ್‌ ಸೋನ್ಸ್‌ ಸಭಾಂಗಣದಲ್ಲಿ ಭಾನುವಾರ ಆರಂಭವಾದ ಸಿಪಿಐನ 23 ನೇ ಜಿಲ್ಲಾ ಸಮ್ಮೇಳನದಲ್ಲಿ ಸಾತಿ ಸುಂದರೇಶ್‌ ಮಾತನಾಡಿದರು.   

ಮಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಆಡಳಿತಾವಧಿಗಳಲ್ಲಿ ಜನರ ಮೂಲ ಸಮಸ್ಯೆಗಳನ್ನು ಪರಿಹರಿಸಿ, ಅವರ ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗಿವೆ ಎಂದು ಸಿಪಿಐ ಕರ್ನಾಟಕ ರಾಜ್ಯ ಸಮಿತಿ ಸಹಾಯಕ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದರು.

ನಗರದ ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ 23 ನೇ ಸಮ್ಮೇಳನದ ಪ್ರತಿನಿಧಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಪ್ಪು ಆರ್ಥಿಕ ಹಾಗೂ ಸಾಮಾಜಿಕ ನೀತಿಗಳ ಪರಿಣಾಮವಾಗಿ ಇಂದು ಭಾರತೀಯರು ಪರಿತಪಿಸುವಂತಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರ ಬೆಲೆ ಏರಿಕೆಯಂತಹ ಜನರ ಕಷ್ಟವನ್ನು ಪರಿಹರಿಸಲು ವಿಫಲವಾದಾಗ, ಅದು ಅಧಿಕಾರ ಕಳೆದುಕೊಂಡಿತು. ನಂತರ ಬಂದ ಈಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಿಂದಲೂ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ADVERTISEMENT

ಈಗಿನ ಸರ್ಕಾರಕ್ಕೆ ಜನರ ಹಸಿವಿನ ಬಗ್ಗೆ ಚಿಂತೆಯಿಲ್ಲ. ಬದಲಾಗಿ ಹಸುವಿನ ಬಗ್ಗೆ ಕಾರ್ಯಪ್ರವೃತ್ತವಾಗಿದೆ. ಇಂತಹ ಪಕ್ಷ ಮತ್ತು ಸರ್ಕಾರಗಳ ನೀತಿಗಳನ್ನು ಜನ ಧಿಕ್ಕರಿಸಬೇಕು. ಭಾರತದ ಸ್ವಾತಂತ್ರ್ಯ, ಸ್ವಾಭಿಮಾನವನ್ನು ಉಳಿಸುವತ್ತ ಬದಲಿ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.

ಪಕ್ಷದ ಹಿರಿಯ ಮುಂದಾಳು ವಿಠಲ ಬಂಗೇರ ಧ್ವಜಾರೋಹಣ ನೆರವೇರಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿದರು. ಹುತಾತ್ಮ ಸಂಗಾತಿಗಳಿಗೆ ಪುಷ್ಪಾಂಜಲಿ ಅರ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.