ADVERTISEMENT

ಜೇಸಿಯಿಂದ ಗುಣಮಟ್ಟದ ಮಾನವ ಸಂಪನ್ಮೂಲ

ಜೇಸಿ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಶಾಸಕ ಹರೀಶ್ ಪೂಂಜಾ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 5:23 IST
Last Updated 18 ಜೂನ್ 2018, 5:23 IST

ಬೆಳ್ತಂಗಡಿ: ಜಗತ್ತಿಗೆ ಬೇಕಾದ ಗುಣಮಟ್ಟದ ಮಾನವ ಸಂಪನ್ಮೂಲ ನಿರ್ಮಾಣ ಮಾಡುವ ಕೆಲಸವನ್ನು ಜೇಸಿಐ ಸಂಸ್ಥೆ ಮಾಡುತ್ತಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.

ಬೆಳ್ತಂಗಡಿ ಮಂಜುಶ್ರೀ ಜೇಸಿಐ ಆತಿಥ್ಯದಲ್ಲಿ ಗುರುವಾಯನಕೆರೆ ಬಂಟರ ಭವನದಲ್ಲಿ ಭಾನುವಾರ ನಡೆದ ಜೇಸಿ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಜೇಸಿ ಸಂಸ್ಥೆ ನೈಜ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಯುವ ಸಮುದಾಯವನ್ನು ಜವಾಬ್ಧಾರಿಯುತ ಸಮಾಜವಾಗಿ ಪರಿವರ್ತಿಸುತ್ತಿದೆ. ತಾತ್ಸಾರದ ಮಾತಿಗೆ ಕಿವಿಗೊಡದೆ ವ್ಯಕ್ತಿ ನಿರ್ಮಾಣ ಕಾರ್ಯದಲ್ಲಿ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಪರಿಪೂರ್ಣ ಬದುಕು ಕಟ್ಟುವ ಕಾಯಕದಲ್ಲಿ ಹೊಗಳಿಕೆ ಮತ್ತು ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಿಕೊಂಡು ಹೋಗಬೇಕು’ ಎಂದರು.

ADVERTISEMENT

ವಲಯಾಧ್ಯಕ್ಷ ರಾಕೇಶ್ ಕುಂಜೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಜೇಸಿಐ ವಲಯದಲ್ಲಿ 2,500 ಸದಸ್ಯರಿದ್ದು, ಅದನ್ನು ದುಪ್ಪಟ್ಟುಗೊಳಿಸುವ ಪ್ರಯತ್ನವಿದೆ. ಜೇಸಿಐಗೆ ಸೇರಿದ್ದರಿಂದ ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯ. ವಲಯ ಮಧ್ಯಂತರ ಜೇಸಿಐ ಇಂಡಿಯಾಕ್ಕೆ ₹6 ಲಕ್ಷ ದೇಣಿಗೆಯಾಗಿ ನೀಡಲಾಗುವುದು’ ಎಂದರು.

ದಿಕ್ಸೂಚಿ ಭಾಷಣ ಮಾಡಿದ ನಿರ್ದೇಶಕ ಕೆ ಸುಚೇಂದ್ರ ಪ್ರಸಾದ್, ನಮ್ಮ ವರ್ತನೆ ಸರಿಯಾಗದೆ ಪರಿವರ್ತನೆಯಾಗದು. ವಿಶ್ವಾತ್ಮಕ ಚಿಂತನೆ ಮತ್ತು ಸ್ಥಾನಿಕವಾದ ಕಾರ್ಯವ್ಯಾಪ್ತಿ ನಮ್ಮೊಳಗಿರಬೇಕು. ಕೆರಳಿಸುವ ಕಡೆಗೆ ನಮ್ಮ ಮನಸ್ಸು ಕೊಡದೆ ನಮ್ಮನ್ನು ನಾವು ಅರಳಿಸುವ ಕಡೆಗೆ ಮನಸ್ಸು ಕೊಡಬೇಕಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಹರೀಶ್ಕುಮಾರ್ ಮಾತನಾಡಿ, ‘ಯುವ ಸಮುದಾಯ ಸಮಾಜದ ಆಸ್ತಿಯಾಗಬೇಕು’ ಎಂದರು. ಜೇಸಿಐ ಇಂಡಿಯಾ ಫೌಂಡೇಶನ್ ನ ನಿರ್ದೇಶಕ ವೈ ಸುಕುಮಾರ್, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ರಾಷ್ಟ್ರೀಯ ನಿರ್ದೇಶಕ ಚಂದ್ರಶೇ
ಖರ ನಾಯರ್ ಮಾತನಾಡಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲ್ ವಹಿಸಿದ್ದರು. ವೇದಿಕೆಯಲ್ಲಿ ವಲಯದ ನಿಕಟಪೂರ್ವಾಧ್ಯಕ್ಷ ಸಂತೋಷ್ ಜಿ., ವಲಯ 15ರ ಪ್ರಾಂತ್ಯ ಉಪಾಧ್ಯಕ್ಷರು, ವಲಯಾಧಿಕಾರಿಗಳು, ವಲಯಾಡಳಿತ ಮಂಡಳಿ ಸದಸ್ಯರು ಇದ್ದರು.

ವಲಯಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ ನೇತೃತ್ವದಲ್ಲಿ ಹೊರತಂದ ‘ಉದಕ ಪತ್ರಿಕೆ’ಯನ್ನು ಬಿಡುಗಡೆಗೊಳಿಸಲಾಯಿತು. ಸಾಧನೆ ಮಾಡಿದ ಅನೇಕ ಘಟಕಗಳನ್ನು ಗೌರವಿಸಲಾಯಿತು. ಶಾಸಕ ಹರೀಶ್ ಪೂಂಜಾ ಮತ್ತು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಘಟಕಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಶಾಂತ್ ಲಾಯಿಲ ವಂದಿಸಿದರು. ಆಶಾ ಪ್ರಶಾಂತ್ ಜೇಸಿ ವಾಣಿ ಉದ್ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.