ADVERTISEMENT

‘ಜೈಲಿನ ಸಮಸ್ಯೆ: ನಾಳೆ ಸಿಎಂ ಜತೆ ಚರ್ಚೆ’

ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಐವನ್ ಡಿಸೋಜ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 7:20 IST
Last Updated 21 ಜುಲೈ 2017, 7:20 IST

ಮಂಗಳೂರು: ನಗರ ಕೇಂದ್ರ ಕಾರಾಗೃಹದಲ್ಲಿನ ಸಮಸ್ಯೆಗಳ ಕುರಿತು ಶನಿವಾರ (ಇದೇ 22) ಮುಖ್ಯಮಂತ್ರಿ ಹಾಗೂ ಕಾರಾಗೃಹ ಡಿಜಿಪಿ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ವಿಧಾನ ಪರಿಷತ್‌ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್‌ ಡಿಸೋಜ ಹೇಳಿದರು.

ಗುರುವಾರ ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಜೈಲು ಅಧೀಕ್ಷಕರ ಜತೆ ಚರ್ಚಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎನ್.ಎಸ್‌. ಮೇಘರಿಕ್‌ ಅವರು ಕಾರಾಗೃಹ ಇಲಾಖೆ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಅವರನ್ನು ಭೇಟಿ ಮಾಡಿ, ಮಂಗಳೂರಿನ ಕಾರಾಗೃಹದ ಸಮಸ್ಯೆಗಳ ಬಗ್ಗೆ ವಿವರಿಸಿದ್ದೇನೆ. ಇಲ್ಲಿಯ ಸಿಬ್ಬಂದಿ ಕೊರತೆ, 118 ಕೈದಿಗಳು ಇರಬೇಕಾದ ಸ್ಥಳದಲ್ಲಿ 418 ಕೈದಿಗಳು ಇರುವುದು, ಇದರಿಂದ ಘರ್ಷಣೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದೇನೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮೇ ಘರಿಕ್‌ ನೀಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಜೈಲಿನ ನಿಯಮಾವಳಿಗಳನ್ನು ಬಿಟ್ಟು ಕೆಲಸ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳೂ ತಮ್ಮ ಸಂಕಷ್ಟಗಳನ್ನು ತೋಡಿ ಕೊಂಡಿದ್ದಾರೆ. ಜೈಲಿನಲ್ಲಿ ಮೂಲ ಸೌಕರ್ಯಗಳ ಕೊರತೆ, ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳು, ಸಿಬ್ಬಂದಿಯ ಕೊರತೆ ಮುಂತಾದ ವಿಷಯಗಳ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ತಿಳಿಸಿದರು.

ನೂತನ ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಬಾಳೆಪುಣಿ ಬಳಿ ನಿವೇಶನ ಗುರುತಿಸಿ, ಬೇಲಿ ನಿರ್ಮಿಸಲು ಈಗಾ ಗಲೇ ₹2 ಕೋಟಿ ಬಿಡುಗಡೆಯಾಗಿದೆ. ನೂತನ ಕಾರಾಗೃಹ ನಿರ್ಮಾಣಕ್ಕೆ ₹205 ಕೋಟಿಯ ಅಂದಾಜು ಪತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

**

‘ಬಾಡೂಟದ ಚಿತ್ರ ಹಳೆಯದು’
ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಬಾಡೂಟ ನಡೆಸಿದ್ದಾರೆ ಎನ್ನಲಾದ ಘಟನೆ ಹಳೆಯದು ಎಂದು ಜೈಲು ಅಧಿಕಾರಿಗಳು ತಿಳಿಸಿರುವುದಾಗಿ ಐವನ್‌ ಡಿಸೋಜ ಹೇಳಿದರು.

‘ಬಾಡೂಟದ ಕುರಿತು ಜೈಲು ಅಧೀಕ್ಷಕರನ್ನು ವಿಚಾರಿಸಿದ್ದೇನೆ. ಆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಮೂವರು ಕೈದಿಗಳು ಈಗಾಗಲೇ ಬಿಡುಗಡೆ ಆಗಿದ್ದಾರೆ. ಅದು ಯಾವಾಗ ನಡೆದಿರುವ ಘಟನೆ ಎಂಬುದು ಗೊತ್ತಿಲ್ಲ’ ಎಂದು ಅಧಿಕಾರಿಗಳು ಹೇಳಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.