ADVERTISEMENT

ಜ್ಯೋತಿ ವೃತ್ತದಲ್ಲೇ ನಡೆದ ಸಭೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 9:06 IST
Last Updated 8 ಸೆಪ್ಟೆಂಬರ್ 2017, 9:06 IST

ಮಂಗಳೂರು: ಪೊಲೀಸರ ಅನುಮತಿಯ ನಿರಾಕರಣೆ ಮಧ್ಯೆಯೂ ಮಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡರು, ಕೊನೆಯ ಕ್ಷಣದಲ್ಲಿ ಸಭಾ ಕಾರ್ಯಕ್ರಮದ ಸ್ಥಳವನ್ನು ಬದಲಾವಣೆ ಮಾಡಿದರು.

ನಿಗದಿಯಂತೆ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‍್ಯಾಲಿ ನಡೆದು, ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ನಂತರ ನೆಹರೂ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಬೇಕಿತ್ತು. ಇದಕ್ಕೆ ಪೊಲೀಸ್‌ ಇಲಾಖೆಯೂ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅನುಮತಿ ನೀಡಿತ್ತು. ಆದರೆ, ಬೈಕ್‌ ರ‍್ಯಾಲಿ ನಡೆಸಿಯೇ ಸಿದ್ಧ ಎನ್ನುವ ಧೋರಣೆ ಹೊಂದಿದ್ದ ಯುವ ಮೋರ್ಚಾ ಕಾರ್ಯಕರ್ತರಿಗೆ ಪೊಲೀಸರು ಅನುಮತಿ ನೀಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆಯೇ ಸಭಾ ಕಾರ್ಯಕ್ರಮವನ್ನು ನೆಹರೂ ಮೈದಾನದ ಬದಲು, ಜ್ಯೋತಿ ವೃತ್ತದಲ್ಲಿಯೇ ನಡೆಸಲು ನಿರ್ಧರಿಸಲಾಯಿತು.

ಇದಕ್ಕೆ ಪೂರಕವಾಗಿ ಜ್ಯೋತಿ ವೃತ್ತಕ್ಕೆ ಬಂದ ಬಿ.ಎಸ್‌. ಯಡಿಯೂರಪ್ಪ ಹಾಗೂ ಉಳಿದ ನಾಯಕರು, ಅದೇ ವೇದಿಕೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಭೆ ಮುಗಿಯುತ್ತಿದ್ದಂತೆಯೇ ಬೈಕ್‌ನಲ್ಲಿ ಹೊರಡುವಂತೆ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮೈಕ್‌ನಲ್ಲಿ ಹೇಳಿದರು.

ADVERTISEMENT

ಆರ್‌. ಅಶೋಕ್‌, ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ಹೆಲ್ಮೆಟ್‌ ಧರಿಸಿ, ಬೈಕ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯತ್ತ ಹೊರಡಲು ಸಿದ್ಧರಾಗುತ್ತಿದ್ದಂತೆಯೇ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಮುಖಂಡರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಈ ಸಂದರ್ಭದಲ್ಲಿ ಆರ್‌. ಅಶೋಕ್‌ ಸ್ವಲ್ಪ ಅಸ್ವಸ್ಥಗೊಂಡರು. ಕೆಲ ಪೊಲೀಸರು ಹಾಗೂ ಕಾರ್ಯಕರ್ತರಿಗೆ ಸಣ್ಣಪುಟ್ಟ ಗಾಯಗಳೂ ಆದವು.

ಈ ನಡುವೆ ಮುಖಂಡರೆಲ್ಲರನ್ನೂ ವಶಕ್ಕೆ ಪಡೆದ ಪೊಲೀಸರು, ಬಸ್‌ಗಳಲ್ಲಿ ಕರೆದುಕೊಂಡು ಹೋದರು. ಉಳಿದ ಕೆಲವೇ ಕೆಲವು ಕಾರ್ಯಕರ್ತರು, ಪಕ್ಷದ ಧ್ವಜ ಹಿಡಿದು, ಜಿಲ್ಲಾಧಿಕಾರಿ ಕಚೇರಿಯತ್ತ ಪಾದಯಾತ್ರೆಯಲ್ಲಿ ತೆರಳಿದರು. ರಸ್ತೆ ಮಧ್ಯದಲ್ಲಿಯೇ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ಮಂಗಳೂರು ಚಲೋ ಅಂತ್ಯಗೊಂಡಿತು.

‘ಚೇಲಾಗಳಂತೆ ವರ್ತಿಸಬೇಡಿ’
ಪಕ್ಷಗಳ ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪೊಲೀಸ್‌ ಇಲಾಖೆ ಇರುತ್ತದೆ. ಪೊಲೀಸರು ಪಕ್ಷದ ಚೇಲಾಗಳಂತೆ ವರ್ತಿಸಬಾರದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರ್ಕಾರ ಇರಬಹುದು. ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.

‘ರಾಹುಲ್‌ ಅಲ್ಲ ಪಪ್ಪು’
ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿದಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು, ‘ರಾಹುಲ್‌ ಅಲ್ಲ, ಪಪ್ಪು’ ಎಂದು ಘೋಷಣೆ ಕೂಗಿದರು. ಈಶ್ವರಪ್ಪ ಕೂಡ ರಾಹುಲ್‌ ಗಾಂಧಿಯನ್ನು ಪಪ್ಪು ಎಂದು ಸಂಬೋಧಿಸುವ ಮೂಲಕ, ‘ಆರ್‌ಎಸ್‌ಎಸ್‌ ಬಗ್ಗೆ ಪಪ್ಪು, ಅವರಮ್ಮ ಸೋನಿಯಾಗಾಂಧಿ, ಅಪ್ಪ ರಾಜೀವ್‌ ಗಾಂಧಿ, ಅಜ್ಜಿ ಇಂದಿರಾ ಗಾಂಧಿ, ಮುತ್ತಾತ ನೆಹರೂ ಅವರಿಗೆ ಗೊತ್ತಿಲ್ಲ. ಇಂಥವರ ಹೇಳಿಕೆಗೆ ಅರ್ಥವೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಂಬುಲೆನ್ಸ್‌ಗೆ ದಾರಿ
ಜ್ಯೋತಿ ವೃತ್ತದಲ್ಲಿ ಬೆಳಿಗ್ಗೆ 10 ಗಂಟೆಯಿಂದಲೇ ಕುಳಿತಿದ್ದ ಬಿಜೆಪಿ ಕಾರ್ಯಕರ್ತರು, ಆಂಬುಲೆನ್ಸ್‌ಗಳ ಓಡಾಟಕ್ಕೆ ದಾರಿ ಮಾಡಿಕೊಟ್ಟರು. ಮುಖಂಡರು ವೇದಿಕೆ ಏರುವ ಮೊದಲು ಒಂದು ಆಂಬುಲೆನ್ಸ್‌ಗೆ ದಾರಿ ಬಿಡಲಾಯಿತು. ಜಗದೀಶ ಶೆಟ್ಟರ ಮಾತನಾಡುವ ಸಂದರ್ಭದಲ್ಲಿ ಮತ್ತೊಂದು ಆಂಬುಲೆನ್ಸ್‌ಗೆ ದಾರಿ ಬಿಟ್ಟುಕೊಡಲಾಯಿತು. ಇದನ್ನು ಪ್ರಸ್ತಾಪಿಸಿದ ಶೆಟ್ಟರ, ‘ಇದು ಬಿಜೆಪಿ ಸಂಸ್ಕೃತಿ. ಇದು ಕಾಂಗ್ರೆಸ್‌ನವರಿಗೆ ತಿಳಿಯಬೇಕು’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.